ನಾನೇಕೆ ಬಡವನಾದೆ ?-ಜಿ.ಎಸ್.ಹೆಗಡೆಯವರ ಕವಿತೆ

ಕಾವ್ಯ ಸಂಗಾತಿ

ನಾನೇಕೆ ಬಡವನಾದೆ ?

ಜಿ.ಎಸ್.ಹೆಗಡೆ

ಕೋಟಿ ಕೂಡಿಟ್ಟಿರುವೆ
ಒಂದು ಕಡಿಮೆಯಾದರೂ
ಕೋಟಿಯಾಗದು ಅಲ್ಲಿ
ಆ ಒಂದನ್ನು ಉಳಿಸಲೋಸುಗ
ನಾ ಬಡವನಾದೆ

ಬಹುಮಹಡಿಯ ಮನೆ ಕಟ್ಟಿರುವೆ
ಸದಾ ಬಾಗಿಲು ಹಾಕಿಕೊಂಡೇ
ಮನೆಯೊಳೆಗೆ ಕುಳಿತೆ
ಸಿರಿವಂತನನೆಂದು ಜನ ಅಂದು ಕೊಂಡರು
ನನ್ನ ಜೊತೆ ಏನು ಕೆಲಸವೆಂದು ತಿಳಿದು
ಬರದೇ ಹೋದರು ಸನಿಹ
ಜನರು ಬಳಿಯಿಲ್ಲದೇ
ನಾ ಬಡವನಾದೆ

ಪಕ್ಕದಲ್ಲೇ ನೆಲೆಸಿಹನೊಬ್ಬ ಧನಿಕ
ಬಹುಕೋಟಿ ಹೊಂದಿಹನಾತ
ನನ್ನದೋ ಬರೇ ಒಂದು ಕೋಟಿ
ಅನಿಸುತಿದೆ ಈಗ
ನಾ ಬಡವನಾದೆ

ಧನವಿದ್ದರೂ ಇಲ್ಲವೆಂದು
ಅಳುವಂತೆ ಮಾಡುತಿದೆ ಹಣ
ಎಲ್ಲಾದರೂ ಖರ್ಚಾದರೆ ಎನ್ನುವ ಆತಂಕ
ಮನಸ್ಸು ಅಳಕುತಿದೆ
ಹೆದರಿಕೆಯಿಂದಲೇ ಬದುಕುತಿದೆ ಜೀವ
ನಾ ಬಡವನಾದೆ

ಕೂಲಿಯೊಬ್ಬನ ಕರೆದೆ
ಕೆಲಸ ಮಾಡಿಸಿಕೊಂಡು
ಹಣ ಕೊಟ್ಟೆ ಚೌಕಾಸಿಯಲಿ
ಕೊಟ್ಟಹಣವನು ಆತ ಕಿಸೆಯಲ್ಲಿ ತುರುಕಿ
ನಗುವಿನೊಂದಿಗೆ ಹೊರಟ
ಆತನ ನಗುವನು ನೋಡಿ
ಉರಿಯಿತು ಹೊಟ್ಟೆ
ಅನಿಸಿತು ನನಗೆ
ನಾ ಬಡವನಾದೆ


Leave a Reply

Back To Top