ಶಾಲಿನಿ ಕೆಮ್ಮಣ್ಣು ಕವಿತೆ-ಏಕಾಂಗಿ ಸಂಸಾರಿ

ಕಾವ್ಯ ಸಂಗಾತಿ

ಏಕಾಂಗಿ ಸಂಸಾರಿ

ಶಾಲಿನಿ ಕೆಮ್ಮಣ್ಣು

ಬೇಕಿತ್ತಾ ಹೆಣ್ಣೆ ಈ ಪರಿಯ ಹೊಣೆ
ಭವದ ಭಯದ ಭವಣೆ
ಎರಡು ದಿನದ ಆಕರ್ಷಣೆ
ಕೊನೆಗೂ ಮುಗಿಯದ ಅವಗಣನೆ

ಬಿಟ್ಟು ಬಂದೆ ನಿನ್ನ ತೀರ
ಸಾಗಿ ಬಂದೆ ಬಹು ದೂರ
ನಿನ್ನ ಸಾಕಿ ಸಲಹಿದವರ
ಅನುಬಂಧದ ಋಣಭಾರ

ಹೊಟ್ಟೆಗೆ ಹಿಟ್ಟಿಲ್ಲ
ಕಣ್ಣಿಗೆ ನಿದ್ದೆ ಇಲ್ಲ
ನೆಮ್ಮದಿಯ ನೆನಪಿಲ್ಲ
ಭ್ರಮೆಯೆ ಸುಖ ಸಂಪತ್ತೆಲ್ಲ

ಕರುಣೆಗಾಗಿ ಕಾಯಬೇಡ
ಬದುಕಿಗಾಗಿ ಭಯವು ಬೇಡ
ಕಣ್ಣೀರ ಕೋಡಿ ಹರಿಸಬೇಡ
ನಿನ್ನವರನಿಲ್ಲಿ ಹುಡುಕ ಬೇಡ

ಬರುವರೆಲ್ಲ ಹಸಿವಿಗಾಗಿ
ಇರುವರೆಲ್ಲ ಬದುಕಿಗಾಗಿ
ವಿಶ್ವಾಸವಿಲ್ಲಿ ವ್ಯಾಪಾರವಾಗಿ
ಯಾರಿಲ್ಲ ನಿನ್ನ ಪ್ರೀತಿಗಾಗಿ

ತೊರೆವರೆಲ್ಲರು ನಿನ್ನ
ಬದುಕಿ ಬಾಳುವ ಮುನ್ನ
ದುಃಖ ತಪ್ತ ಭಾವನ
ಮರೀಚಿಕೆಯ ಜೀವನ

ಸ್ಥಿರವಾಗು ಬಲವಾಗು
ಬಂಡೆಯಾಗು ದಂಡೆಯಾಗು
ಮೌನವಾಗು ಮಾತಾಗು
ನಿನಗೆ ನೀನೇ ಚೇತನವಾಗು

ಸಂತೈಸು ಹಾರೈಸು
ನಿನ್ನ ನೀನೆ ಪ್ರೀತಿಸು
ಎಲ್ಲರೊಲವ ಮರೆಸು
ಪ್ರೇಮಿಯಾಗಿ ಅವತರಿಸು


5 thoughts on “ಶಾಲಿನಿ ಕೆಮ್ಮಣ್ಣು ಕವಿತೆ-ಏಕಾಂಗಿ ಸಂಸಾರಿ

Leave a Reply

Back To Top