ಅಂಕಣ ಸಂಗಾತಿ

ವಿಜಯಶ್ರಿ ಹಾಲಾಡಿಯವರ ಅಂಕಣ

ನೆಲಸಂಪಿಗೆ

ಕಾಲುಸಂಕಗಳು  ಸೇತುವೆಗಳಾಗಲಿ

ಕಾಲುಸಂಕಗಳು  ಸೇತುವೆಗಳಾಗಲಿ

ಇತ್ತೀಚಿನ ವರ್ಷಗಳಲ್ಲಿ ಅಕಾಲಿಕ ಮಳೆ ಮತ್ತು ಅತಿವೃಷ್ಟಿ. ಗುಡ್ಡ ಕುಸಿತಗಳ ಕಾರಣದಿಂದ ಆಗುತ್ತಿರುವ ಅನಾಹುತ ನಮ್ಮೆಲ್ಲರ ಕಣ್ಮುಂದಿದೆ. ಬಕಾಸುರನ ಹಸಿವಿನಂತೆ ಮನುಷ್ಯ, ಪರಿಸರವನ್ನು ಬಳಸಿಕೊಂಡು ನಾಶಮಾಡಿದ್ದೇ ಇವೆಲ್ಲಕ್ಕೂ ಮುಖ್ಯ ಕಾರಣ. ಯಾರೋ ಎಲ್ಲೋ ಗುಡ್ಡಗಳನ್ನು ಅಗೆದು, ಮರಗಳನ್ನು ಮಾರಣಹೋಮ ಮಾಡಿ ಹಾಳುಗೆಡವಿ ಇನ್ಯಾರೋ ಇನ್ನೆಲ್ಲೋ ಅದರ ಪರಿಣಾಮಗಳನ್ನು ಎದುರಿಸಿ ಸಾಯುತ್ತಿರುವುದಂತೂ ಸತ್ಯ. ಈ ವರ್ಷವೂ ಭೋರ್ಗರೆದು ಬೀಸಿದ ಮಳೆ ಜೀವಹಾನಿಯನ್ನು ತಂದಿತು. ಶಾಲೆಗೆ ಹೋಗುವ ಪುಟ್ಟ ಮಕ್ಕಳು ಕಾಲು ಸಂಕ, ತೋಡು ದಾಟುವಾಗ ಬಳಿದುಹೋಗಿ ಜೀವವನ್ನು ಕಳೆದುಕೊಂಡದ್ದಂತೂ ಕರುಳನ್ನು ಇರಿಯುವ ಘಟನೆಗಳು. ಮಲೆನಾಡು, ಕರಾವಳಿ ಭಾಗದ ಹಳ್ಳಿಗಳಲ್ಲಿ ಇಂದಿಗೂ ಅನೇಕ ಅಪಾಯಕಾರಿ ಸಂಕ, ತೋಡುಗಳು ಅಲ್ಲಲ್ಲಿ ಇವೆ. ಇವುಗಳಿಗೆ ಸೂಕ್ತ ಸೇತುವೆಯ ವ್ಯವಸ್ಥೆ ಇನ್ನೂ ಆಗಿಲ್ಲ. ಆದರೆ ಸ್ಮಾರ್ಟ್ ಸಿಟಿಯ ಯೋಜನೆಗಳ ವಿವರಗಳು ಚೋದ್ಯವೆಂಬಂತೆ ದಿನವೂ ಕಿವಿಗೆ ಅಪ್ಪಳಿಸುತ್ತಲೇ ಇರುತ್ತವೆ!

       ನನ್ನ ಬಾಲ್ಯದ ದಿನಗಳಲ್ಲಿ ಇಂತಹ ಸಂಕ, ತೋಡುಗಳು ನಮ್ಮೂರ ಆಸುಪಾಸಿನಲ್ಲಿ ಮಾಮೂಲಾಗಿದ್ದವು. ಅವುಗಳ ಮೇಲೆ ನಡೆದುಹೋದವರು ಬದುಕಿದರೆ ಪುಣ್ಯ, ಸತ್ತರೆ ಅವರ ದುರದೃಷ್ಟ ಎಂಬುದು ಬಹುಶಃ ಆ ಕಾಲದ ಜನರ ತೀರ್ಮಾನವಾಗಿತ್ತು. ಯಾಕೆಂದರೆ ಇದಕ್ಕಿಂತ ಹೆಚ್ಚಿನ ಸೌಕರ‍್ಯವನ್ನು ಆಗ ಬಯಸುವಂತೆಯೇ ಇರಲಿಲ್ಲ. ಇಂತಹ ಸನ್ನಿವೇಶದಲ್ಲಿ ನನ್ನ; ನನ್ನ ಹಿಂದಿನ, ಮುಂದಿನ ತಲೆಮಾರಿನವರು ಮೈಲಿಗಟ್ಟಲೆ ನಡೆದು ಶಾಲೆಯ ಮುಖ ಕಂಡೆವು. ನಮ್ಮ ಮನೆಯಿಂದ ಹಾಲಾಡಿ  ಪೇಟೆಗೆ ಹೋಗಿ ಅಲ್ಲಿಂದ ಶಾಲೆಗೆ ಹೋಗಬೇಕಾದರೆ ಮನೆಹತ್ತಿರದ ಒಂದು ಸಣ್ಣ ಸಂಕ, ಸುಮಾರು ಮುಕ್ಕಾಲು ಕಿಲೋಮೀಟರ್ ದೂರದಲ್ಲಿ ಒಂದು ಸಾರ (ಸಾರ ಎಂದರೆ ಸ್ವಲ್ಪ ದೊಡ್ಡದು) ಆಮೇಲೆ ಮತ್ತೂ ಮುಂದೆ ಹಂದ್‌ಕೋಡ್ಲ್ ಎಂಬ ಜಾಗದಲ್ಲಿ ಎರಡು ತೋಡುಗಳು- ಇವೆರಡಕ್ಕೂ ಸಂಕ ಇರಲಿಲ್ಲ, ಇಷ್ಟಲ್ಲದೆ ಇದೇ ತೋಡಿನ ಮುಂದುವರಿದ ಭಾಗದಲ್ಲಿ ಮತ್ತೊಂದು ಸಂಕ ಇಷ್ಟನ್ನು ದಾಟಿ ಹೋಗಬೇಕಿತ್ತು. ಇಷ್ಟೆಲ್ಲ ದಾಟಿ ಹಾಲಾಡಿ ಪೇಟೆಗೆ ಹೋಗಿ ಅಲ್ಲಿಂದ ಮತ್ತೆ ಹಿರಿಯ ಪ್ರಾಥಮಿಕ ಶಾಲೆಯಿರುವ ಕೆಳಪೇಟೆಗೆ ನಡೆದು ಹೋಗಬೇಕು. ಈ ಎಲ್ಲ ಸಂಕಗಳು, ನಡುನಡುವೆ ಬೇಲಿ, ತೊಡ್ಮೆಗಳನ್ನು ಹಾರಿ ದಾಟಿ ಬರುವಾಗ ನಾವು ಗದ್ದೆ, ಹಾಡಿಯ ಮೂಲಕ ಎರಡೂವರೆ ಮೈಲಿ ದಾರಿಯನ್ನು ಕ್ರಮಿಸುತ್ತಿದ್ದೆವು. ಈ ದಾರಿ ದೂರವಾದ ಕಾರಣ ಇನ್ನೊಂದು ಒಳದಾರಿಯನ್ನು ಆಯ್ದುಕೊಂಡಿದ್ದೆವು. ಅದು ಕಲ್ಲು, ಮುಳ್ಳಿನ ದಾರಿ. ದೈತ್ಯ ಮರಗಳು, ಬಿಳಲು, ಬಲ್ಲೆಗಳು ಹಬ್ಬಿಕೊಂಡ ಕಾಡುದಾರಿ. ನಡುವೆ ಸವೆದ ಸಪೂರ ಕಾಲುದಾರಿ ಮಾತ್ರ. ಅಲ್ಲಿಂದ ಹೋದರೆ ಹತ್ತಿರ ಹತ್ತಿರ ಎರಡು ಮೈಲಿ. ಈ ದಾರಿಯಲ್ಲಾದರೆ ಸಂಕಗಳಿಲ್ಲ ಎಂದು ಭಾವಿಸಬೇಡಿ. ಮನೆಯ ಹತ್ತಿರದ ಸಂಕ ದಾಟಿ ಮುಂದೆ ಹೋದರೆ, ಕೊಯ್ಕಾಡಿ ಎಂಬಲ್ಲಿ ದೊಡ್ಡದೊಂದು ಸಂಕ, ಮುಂದೆ ಸಣ್ಣ ಸಂಕ, ಅದರ ಮುಂದೆ ಸಂಕವಿಲ್ಲದ ತೋಡು ಇಷ್ಟನ್ನು ದಾಟಿ ಶಾಲೆ ತಲುಪಬೇಕಿತ್ತು. ಜೋರು ಮಳೆ ಬಂದಾಗ ತೋಡಿನಲ್ಲಿ ತೊಡೆಯವರೆಗೂ ನೀರು ಬರುತ್ತಿತ್ತು. ಒಬ್ಬರ ಕೈ ಇನ್ನೊಬ್ಬರು ಹಿಡಿದು ದಾಟುತ್ತಿದ್ದೆವು. ಜೊತೆಯಲ್ಲಿ ಯಾರೂ ಇಲ್ಲದಾಗ ಏಕಾಂಗಿ ಸಾಹಸ. ನನಗೆ ಅಪಾರ ಭಯ ಹುಟ್ಟಿಸಿ ಕನಸಿನಲ್ಲಿಯೂ ಕಾಡುತ್ತಿದ್ದದ್ದು ಒಂದು ಕೊಯ್ಕಾಡಿ ಸಂಕ, ಇನ್ನೊಂದು ಮುದೂರಿ ಬೈಲಿನ ಕೊನೆಯಲ್ಲಿದ್ದ ಸಾರ. ಇವೆರಡರ ಮೇಲೆ ನಡೆದುಹೋಗುವಾಗ ಎಷ್ಟೋ ಸಲ ಕಾಲಭಾಗಕ್ಕೆ ಹೋಗಿ ವಾಪಸ್ಸು ಬಂದದ್ದಿದೆ. ಹೆದರಿ ನಡುಗಿ, ಏನೇನೋ ಕೆಟ್ಟದ್ದನ್ನು ಚಿಂತಿಸಿ ಕಣ್ಣೀರು ಹಾಕಿದ್ದೂ ಇದೆ. ನನಗೆ ನೀರೆಂದರೆ ಮೊದಲಿನಿಂದಲೂ ಭಯ. ಅದರಲ್ಲೂ ಮಳೆ ಜೋರಾದಾಗ ಉಕ್ಕುಕ್ಕಿ ಹರಿಯುವ ಕೆನ್ನೀರ ಪ್ರವಾಹ ಎದೆಯೊಳಗೆ ಎಂತದ್ದೋ ಭೀತಿ ಹುಟ್ಟಿಸುತ್ತದೆ. ಇದು ನೀರಿನ ಕುರಿತಾದ ಫೋಬಿಯಾ ಇರಬಹುದು. ಆದರೆ ಆಗ ಮನೆಯಲ್ಲಿ ಇವುಗಳನ್ನೆಲ್ಲ ಹೇಳುತ್ತಿರಲಿಲ್ಲ. ಅಸಲಿಗೆ ಯಾರಲ್ಲೂ ಏನನ್ನೂ ಹಂಚಿಕೊಳ್ಳದೆ ನನ್ನ ಬಾಲ್ಯ ಕಳೆಯಿತು. ಇದಕ್ಕೆ ಏನು ಕಾರಣವೋ ತಿಳಿದಿಲ್ಲ. ಮನೆ, ಶಾಲೆಯ ಪರಿಸರ, ಪರಿಸ್ಥಿತಿ ಕಾರಣವಿರಬಹುದು. ದೊಡ್ಡ ನೆರೆ ಬಂದಾಗ ಕೊಯ್ಕಾಡಿ  ಸಂಕದ ಮೇಲೇ ನೀರು ಬರುತ್ತಿತ್ತು. ಅಷ್ಟು ಆಳ ಅಗಲದ ಆ ಹಳ್ಳ ತುಂಬಿ ಸಂಕದ ಮೇಲೆ ಕೆನ್ನೀರು ಬಂದಾಗ ಅದನ್ನು ನೋಡುವುದೇ ಭಯ. ಸಂಕ ಎಲ್ಲೋ ಚೂರು ಚೂರು ಕಾಣುತ್ತಿತ್ತು. ಅದಲ್ಲದೆ ಆ ಸಂಕ ಅಲುಗುತ್ತಿತ್ತು. ಪ್ರವಾಹವನ್ನು ನೋಡದೆ, ಕೊಡೆಯನ್ನು ಮಡಚಿ ಹಿಡಿದು ಮಳೆಯಲ್ಲಿ ನೆನೆದೇ ಒಂದೇ ಮನದಿಂದ ಸಂಕವನ್ನು ದಾಟುತ್ತಿದ್ದ ಆ ಕ್ಷಣವನ್ನು ಈಗ ನೆನೆದರೂ ಗಾಬರಿ. ಮುದೂರಿ ಬೈಲಿನ ಕೊನೆಯ ಸಂಕವಂತೂ ಮತ್ತಷ್ಟು ಭಯ. ಅದರ ಮೇಲೆ ನೀರು ಬಂದಾಗ ನನ್ನ ಪಚೀತಿ ಯಾರಿಗೂ ಬೇಡ!  ಅಂದು ನಮ್ಮ ಪೋಷಕರು, ಶಿಕ್ಷಕರೆಲ್ಲ ನಮ್ಮ ಬಗ್ಗೆ ಆಲೊಚಿಸುತ್ತಿರಲೇ ಇಲ್ಲವೇ ಎಂಬ ಪ್ರಶ್ನೆ ನನಗೆ ಸದಾ ಎದುರಾಗುತ್ತದೆ. ‘ಆ ಕಾಲವೇ ಹಾಗಿತ್ತೇನೋ’ ಎಂಬ ಸರಳ ಸಮಾಧಾನದೊಂದಿಗೆ ಸುಮ್ಮನಾಗುತ್ತೇನೆ. ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಇದೇ ಪ್ರಶ್ನೆ ಮುಂದೆ ನಿಲ್ಲುತ್ತದೆ. ನಾನೊಬ್ಬಳೇ ಅಲ್ಲ; ನನ್ನಂತಹ ಎಷ್ಟೋ ಮಕ್ಕಳು ಇಂತದ್ದೇ ಪರಿಸ್ಥಿತಿಯಲ್ಲಿ ಸುರಿಯುವ ಮಳೆ, ಗುಡುಗು-ಸಿಡಿಲು, ಉರಿಬಿಸಿಲು ಯಾವುದನ್ನೂ ಲೆಕ್ಕಿಸದೆ ಶಾಲೆಗೆ ನಡೆದು ವಿದ್ಯಾಭ್ಯಾಸ ಮಾಡಿದರು.

      ಆಗೆಲ್ಲ ಜೋರುಮಳೆ ಬಂತೆಂದು ಶಾಲೆಗೆ ರಜೆ ಕೊಡುತ್ತಿದ್ದದ್ದು ಬಹಳ ಕಮ್ಮಿ. ಅದಲ್ಲದೆ ಸಂಕದ ಮೇಲೆ ನೀರು ಬಂದಿದೆ, ದಾಟಲು ಆಗುತ್ತಿಲ್ಲ ಎಂಬ ಕಾರಣಕ್ಕಾಗಿ ರಜೆ ಮಾಡಬೇಕು ಎಂಬುದೂ ತಿಳಿಯದಷ್ಟು ನಾವು ಮೂರ್ಖರಾಗಿದ್ದೆವು!  ಶಾಲೆಗೆ ರಜೆ ಹಾಕುವುದು ಮಹಾಪರಾಧ ಎನ್ನುವುದನ್ನು ಯಾರೋ ನಮ್ಮ ತಲೆಯೊಳಗೆ ತುಂಬಿಸಿದ್ದರು. ನಾವೂ ಕುರಿಗಳ ತರ ನಂಬಿದ್ದೆವು. ಅಂದರೆ ಸಾವನ್ನೂ ಎದುರಿಸಿ ಶಾಲೆಗೆ ಹೋಗಬೇಕು ಎಂಬಷ್ಟು ಅತಿಯಾದ ಪ್ರಾಮಾಣಿಕತೆ ನಮ್ಮಲ್ಲಿ ತುಂಬಿ ತುಳುಕುತ್ತಿತ್ತು. ಜ್ವರ ಬಂದು ತಲೆ ತಿರುಗಿ ಬಿದ್ದರೂ ಶಾಲೆಯ ಅಂಗಳದಲ್ಲೇ ಬೀಳಬೇಕು ಎಂದು ನಾವೆಲ್ಲ ತೀಮಾನಿಸಿದ್ದೆವು!  ಎಲ್ಲಾ ಬಿಟ್ಟು ಹೆಣ್ಮಕ್ಕಳು ಮೆಚ್ಯೂರ್ ಆದಾಗ; ಮೊದಲ ಸಲ ಏನೂ ಗೊತ್ತಿಲ್ಲದ ಆ ಗೊಂದಲದ ದಿನಗಳಲ್ಲೂ ಪೋಷಕರು ಶಾಲೆಗೆ ಕಳುಹಿಸುತ್ತಿದ್ದರು. ಇದಂತೂ ತುಂಬಾ ಅನ್ಯಾಯ ಮತ್ತು ಕ್ರೂರತನ. ಅದಲ್ಲದೆ ಅಂತಹ ಹೆಣ್ಣುಮಕ್ಕಳಿಗೆ ಯಾವ ತಿಳುವಳಿಕೆಯನ್ನು ಕೂಡಾ ಹಿರಿಯರು ಕೊಟ್ಟದ್ದು ಕಡಿಮೆ. ಏನು, ಎಂತು ಎಂದು ಗೊತ್ತಿಲ್ಲದೆ ಅಂತಹ ದಿನಗಳಲ್ಲಿ ಶಾಲೆಗೆ ಹೋದರೆ ಆ ಹುಡುಗಿಯರ ಗತಿಯೇನು ಎಂದೂ ಮನೆಯವರು ಯೋಚಿಸಿರಲಿಲ್ಲವೆ? ಶಿಕ್ಷಕಿಯಾಗಿ ಕೆಲಸ ಮಾಡುವಾಗ ಇತ್ತೀಚೆಗೂ ಇದನ್ನು ಗಮನಿಸಿದ್ದೇನೆ; ನಾನು ಹುಟ್ಟಿ ಬೆಳೆದ ಜಿಲ್ಲೆಯಲ್ಲಿ ಹುಡುಗಿ ದೊಡ್ಡವಳಾದಾಗಲೂ ಒಂದು ದಿನವೂ ಪೋಷಕರು ಶಾಲೆಗೆ ರಜೆ ಮಾಡಿಸುವುದಿಲ್ಲ. ಆದರೆ ನಾನು ಕೆಲಸ ಮಾಡಿದ ಬೇರೆ ಜಿಲ್ಲೆಯಲ್ಲಿ ಒಂದೆರಡು ವಾರ ರಜೆ ಹಾಕಿಸಿ ಆರೈಕೆ ಮಾಡಿಯೇ ಶಾಲೆಗೆ ಕಳುಹಿಸುತ್ತಿದ್ದುದನ್ನು ನೋಡಿರುವೆ. ಅಂತಹ ಆರೈಕೆ ಮತ್ತು ತಿಳುವಳಿಕೆ ಎರಡೂ ಹೆಣ್ಣುಮಕ್ಕಳಿಗೆ ಅಗತ್ಯವಿದೆ. ಇರಲಿ, ಇದು ಬೇರೊಂದು ಲೇಖನಕ್ಕೆ ವಸ್ತುವಾದೀತು.

ಈಚೆಗೆ ಮಾತಾಡುವಾಗ ಗೆಳತಿಯೊಬ್ಬರು ಹೇಳಿದರು “ಬಾಲ್ಯದ ಶಾಲೆಯ ದಾರಿಯಲ್ಲಿ ಸಂಕ ದಾಟುವಾಗ ನಾನು ನೀರಿಗೆ ಬಿದ್ದಿದ್ದೆ. ಆವತ್ತು ಅಕ್ಕ ನನ್ನನ್ನು ರಕ್ಷಿಸಿದಳು. ಇಲ್ಲದೇ ಹೋಗಿದ್ದರೆ ನಾನಿವತ್ತು ಇರುತ್ತಿರಲಿಲ್ಲ” ಎಂದು!  ಹೀಗೆ ಎಷ್ಟೋ ಮಕ್ಕಳು ಅಂದು ಹಳ್ಳದಲ್ಲಿ ಬಳಿದು ಹೋಗಿರಬಹುದು. ಹಾಗೇ ಶಾಲೆಯ ಮುಖವನ್ನೇ ಕಾಣದ ಮತ್ತಷ್ಟು ಮಕ್ಕಳು ಕೂಲಿ ಕಾರ್ಮಿಕರಾಗಿ ಬಾಲಕಾರ್ಮಿಕರಾಗಿ, ಬಾಲ್ಯ ವಿವಾಹಕ್ಕೆ ತುತ್ತಾಗಿ ಆ ಕಾಲದಲ್ಲಿ ಕಳೆದುಹೋದರು ಎಂಬುದೂ ನಿಜ.

       ಅಂದಿನ ಶೈಕ್ಷಣಿಕ ಸ್ಥಿತಿಗೂ ಇಂದಿನದಕ್ಕೂ ವ್ಯತ್ಯಾಸಗಳಿವೆ. ನಿರೀಕ್ಷಿತ ಮಟ್ಟದಲ್ಲಿ ಅಲ್ಲವಾದರೂ ಇಂದಿನ ಬದಲಾವಣೆಗಳು ಆಶಾದಾಯಕವಾಗಿವೆ. ಶಾಲೆಗಳು ಕಲಿಕೆಯೊಂದಿಗೆ ಮಕ್ಕಳ ಇಡೀ ವ್ಯಕ್ತಿತ್ವವನ್ನು ಬೆಳೆಸುವುದರತ್ತಲೂ ಗಮನ ಕೊಡುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಪುಸ್ತಕ, ಯೂನಿಫಾರ್ಮ್, ಬಿಸಿಯೂಟ, ಸೈಕಲ್, ಮೊಟ್ಟೆ, ಹಾಲು, ಬಾಳೆಹಣ್ಣು, ಚಿಕ್ಕಿ , ಮಾತ್ರೆಗಳನ್ನು, ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಲಾಗುತ್ತಿದೆ. ಇಷ್ಟೆಲ್ಲ ಇರುವಾಗ ಮಕ್ಕಳು ಶಾಲೆಗೆ ಬರುವ ದಾರಿಯಲ್ಲಿ ಜೀವ ತೆಗೆಯುವ ಸಂಕ, ಸಾರಗಳಿದ್ದರೆ ಅವಕ್ಕೆ ಸೇತುವೆ ನಿರ್ಮಿಸುವ ಒಂದು ಯೋಜನೆಯನ್ನು ತರಲಾಗದೆ? ಎಲ್ಲಿಯೋ ಪೋಲಾಗಿಹೋಗುವ ಕೋಟಿಗಟ್ಟಲೆ ಹಣದಲ್ಲಿ ಸ್ವಲ್ಪ ಇದಕ್ಕಾಗಿ ತೆಗೆದಿಟ್ಟರೆ ಕಷ್ಟವೇನೂ ಆಗಲಾರದು. ಮಲೆನಾಡು, ಕರಾವಳಿಯ ಕಡೆ ಇನ್ನೂ ಇಂತಹ ತೋಡು, ಸಂಕಗಳು ಅಲ್ಲಲ್ಲಿ ಉಳಿದುಕೊಂಡಿವೆ. ಅವುಗಳನ್ನು ಗುರುತಿಸಿ ಸೇತುವೆ ಕಟ್ಟುವುದು ಸರ್ಕಾರದ, ನಾಗರಿಕ ಸಮಾಜವೊಂದರ ಕರ್ತವ್ಯವಾಗಿದೆ. ಊರಿನ ಜನ ಹಾಗೂ ಶಾಲಾ ಮಕ್ಕಳ ಜೀವನ ಭದ್ರತೆಗಾಗಿ ಇದು ಅಗತ್ಯವಾಗಿದೆ.


ವಿಜಯಶ್ರೀ ಹಾಲಾಡಿ

ಹುಟ್ಟೂರು: ಮುದೂರಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಬಳಿ ಗ್ರಾಮ..ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 16 ವರ್ಷಗಳ ಸೇವೆ ಮಾಡಿದ್ದಾರೆ.  ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ್ದಾರೆ..ಆಸಕ್ತಿಯ ಕ್ಷೇತ್ರಗಳು:ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ,  ಕಾಡಿನ ತಿರುಗಾಟ ಮುಂತಾದವು.ಕೃತಿಗಳು :ಬೀಜ ಹಸಿರಾಗುವ ಗಳಿಗೆ,ಓತಿಕ್ಯಾತ ತಲೆಕುಣ್ಸೆ,ಅಲೆಮಾರಿ ಇರುಳು,  ಪಪ್ಪುನಾಯಿಯ ಪೀಪಿ,  ಸೂರಕ್ಕಿ ಗೇಟ್,  ಜಂಬಿಕೊಳ್ಳಿ ಮತ್ತು ಪುಟ್ಟವಿಜಿ,ಸಾಕು ಬೆಳಕಿನ ಮಾತು , ಪ್ರಕಟಿತ ಕೃತಿಗಳು.ಪಪ್ಪುನಾಯಿಯ ಪೀಪಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.ಜಿ.ಬಿ. ಹೊಂಬಳ ಸಾಹಿತ್ಯ ಪುರಸ್ಕಾರ, ಡಿಸೋಜ- ಎಚ್ಚೆಸ್ವಿ ಪುಟಾಣಿ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ , ಶಾರದಾ ರಾವ್ ದತ್ತಿನಿಧಿ ಬಹುಮಾನ ಇನ್ನಿತರ ಕೆಲ ಪ್ರಶಸ್ತಿಗಳು ಬಂದಿವೆ. ಪತ್ರಿಕೆಗಳಲ್ಲಿ ಕವಿತೆ, ಕಥೆ, ಪ್ರಬಂಧ, ಲೇಖನಗಳು ಪ್ರಕಟವಾಗಿವೆ.ಎರಡು ಮಕ್ಕಳ ಕವಿತೆಗಳು ಸಿಬಿಎಸ್ ಸಿ  ಸಿಲೆಬಸ್ ಲ್ಲಿ ಪಠ್ಯವಾಗಿದ್ದವು.ಈಗ ಏಳನೇ ತರಗತಿ ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಮಕ್ಕಳ ಪದ್ಯವೊಂದು ಪಠ್ಯವಾಗಿದೆ.

Leave a Reply

Back To Top