ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

ಕಾವ್ಯ ಸಂಗಾತಿ

ಅಮೃತದ ಬೆಳಕು

ಶ್ರೀನಿವಾಸ ಜಾಲವಾದಿ

ಕಣ್ಣ ಮುಂದಿನ ಬದುಕು ಅದುವೇ
ನಮ್ಮ ಕಣ್ಣ ಮುಂದಿನ ಬೆಳಕಲ್ಲವೇ?

ಭಾರತಾಂಬೆಯ ಅಮೃತ ಮಹೋತ್ಸವ
ಸ್ವಾತಂತ್ರ್ಯದ ಸವಿಗನಸಿನ ಕನವರಿಕೆ
ನೂರಾರು ವರುಷ ಆಂಗ್ಲರ ದಾಳಿಯಲಿ
ನಲುಗಿದ ತಾಯಿಯ ವಿಮೋಚನೋತ್ಸವ!

ದೇಶವೆಂಬ ಅವ್ವನ ಪ್ರೀತಿಯ ಮಡಿಲಲ್ಲಿ
ಕಂದಮ್ಮನಾಗಿ ಜೀವಾಮೃತ ಸವಿದವರು ಕೋಟಿ ಕೋಟಿ ಹಾಲು ಮನದ ಮಕ್ಕಳು
ಅವರೇ ಅಲ್ಲವೇ ಬೆಳಕಿನ ಕಿರಣಗಳು!

ಸ್ವಾತಂತ್ರ್ಯ ಸುಮ್ಮನೇ ಸಿಕ್ಕಿತೆ ನಮಗೆಲ್ಲಾ
ನೆತ್ತರು ಹರಿಯಿತು ಕಾಲುವೆ ರೂಪದಲಿ
ಅದರ ಮಧ್ಯೆಯೂ ಬಂದ ನಮ್ಮ ಬಾಪು
ಅಹಿಂಸಾ ಕೋಲಿನ ಸತ್ಯದ ಚಾಳೀಸು ಧರಿಸಿ!

ಸುಭಾಸರ ಸಿಡಿಗುಂಡು ಮಹಾತ್ಮರ ಮೌನ
ಅಂತ:ಕರುಣೆಯ ತೇರು ಎಲ್ಲೆಡೆ ಹೊಂಟಾಗ
ಅಪ್ಪಟ ಖಾದಿಯೇ ಮೂಲ ಮಂತ್ರವಾದಾಗ
ಚಲೆಜಾವ್ ಚಳುವಳಿಯೇ ಬೀಜ ಉತ್ತಿ ಬಿತ್ತಿತು

ಪ್ರಥಮ ಸ್ವಾತಂತ್ರ್ಯದ ಸಮರವೇ ಸುರಪುರದಲಿ
ರಾಜಾ ವೆಂಕಟಪ್ಪ ನಾಯಕರ ಸಿಂಹಗರ್ಜನೆ ಮೊಳಗಿ
ಬ್ರಿಟೀಷರ ಜಂಘಾಬಲವಡಗಿತು ಶೂರರ ಉರಿಗಣ್ಣಿನಲಿ
ಈ ಅಮರ ಜ್ಯೋತಿಯ ನಂದಿಸಿದವರೇ ಕೆಂಪಾಂಗ್ಲರು!

ಕಿತ್ತೂರು ಚೆನ್ನಮ್ಮ ಸಂಗೊಳ್ಳಿ ರಾಯಣ್ಣ
ಲಾಲ ಬಾಲ ಪಾಲ ಅಮರರೇ ಎಲ್ಲರೂ
ಪ್ರಾಥ:ಸ್ಮರಣೀಯ ದೇಶಭಕ್ತರ ಉಸಿರು
ಅದೇ ಇದಲ್ಲವೇ ಅಮೃತ ಮಹೋತ್ಸವ!

ಮನೆ ಮಠ ಕಳೆದುಕೊಂಡು ದೇಶಕಾಗಿ
ದುಡಿದರು ಮಡಿದರಲ್ಲಾ ಶ್ರೀಸಾಮಾನ್ಯರು
ಅವರ ಭಕ್ತಿ ಮುಂದೆ ಉಳಿದೆಲ್ಲವೂ ಅರ್ಥಹೀನ
ಆದರವರಿಗೆ ನಾವು ಸಲ್ಲಿಸಿದ ಗೌರವ ಸಾಸಿವೆ ಕಾಳಷ್ಟು!

ದೇವನೊಲುಮೆ ಪಡೆಯಲು ತಪವ ಮಾಡಬೇಕಿಲ್ಲ
ದೇಶಕಾಗಿ ದುಡಿದ ಅಮರ ಜ್ಯೋತಿಗಳ ಸದಾ ನೆನೆ
ಸ್ವಾರ್ಥ ತೊರೆದು ಪ್ರೀತಿಸು ಈ ಮಣ್ಣ ಕಣ ಕಣವನು
ಅದೇ ನೋಡು ಬಾನೆತ್ತರ ಹಾರಿದ ವೀರ ಧ್ವಜದ ವಂದನೆ!

ಅಮೃತ ಮಹೋತ್ಸವದಲಿ ಎಲ್ಲ ಬಗೆಯ ಹೂವುಗಳಿರಲಿ
ಬಡವ ಬಲ್ಲಿದ ಸರ್ವ ಜಾತಿ ಎಲ್ಲರನೂ ಇದು ಒಳಗೊಳ್ಳಲಿ
ಆಗ ನೋಡಿ ನೀವು ತಿರಂಗಾದ ಅದಮ್ಯ ಉತ್ಸಾಹದ ರಾಶಿ
ಮೊಳಗಲಿ ಮಂಗಲ ಜಯಭೇರಿ ಸುರಿದ ಸೋನೆ ಮಳೆಯಲಿ!
ಅಸೀಮ ಬೆಳಕಿನ ಭಾರತಾಂಬೆ ಕನಸು ಕಂಗಳ ಕಾಂತಿಯಲಿ!

————-


.ಶ್ರೀನಿವಾಸ ಜಾಲವಾದಿ

One thought on “ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಶೇಷ

Leave a Reply

Back To Top