ಲೇಖನ ಸಂಗಾತಿ
ಭಾರತದ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ:
ಖಾದಿಯೇತರ ಬಟ್ಟೆಗೂ ಅಸ್ತು ವಿವಾದ
ಡಾ. ಎಸ್.ಬಿ. ಬಸೆಟ್ಟಿ
–
ಕೇಂದ್ರ ಸರ್ಕಾರವು ಧ್ವಜ ಸಂಹಿತೆ-೨೦೦೨ ಕ್ಕೆ ತಿದ್ದುಪಡಿ ತಂದು ಖಾದಿ ಬಟ್ಟೆಯ ಬದಲು ಪಾಲಿಸ್ಟರ್ ಧ್ವಜಗಳಿಗೆ ಅನುಮತಿ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿಯೇ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ಮಾಡುವ ಮೂಲಕ ಗಾಂಧಿ ಆಶಯಗಳಿಗೆ ಧಕ್ಕೆ ತರಲಾಗಿದೇ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನವನ್ನು ಕೇಂದ್ರ ಸರಕಾರ ಕೈಗೊಂಡಿದೆ. ಈ ಕಾರ್ಯಕ್ರಮದ ಪರಿಣಾಮ ರಾಷ್ಟ್ರಧ್ವಜ ಖರೀದಿಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗಲಿದೆ. ಹಾಗಾಗಿ, ಕೇಂದ್ರ ಸರಕಾರ ಯೋಜನೆಗೆನುಸಾರ ರಾಷ್ಟ್ರಧ್ವಜಗಳನ್ನು ಪೂರೈಸಲು ಸಾಧ್ಯವಾಗುವಂತೆ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿರುವದು ಪ್ರಸ್ತುತ ವಿವಾದಕ್ಕೆ ಕಾರಣವಾಗಿದೆ.
ಸ್ವಾತಂತ್ರೋತ್ತರ ೭೫ನೆಯ ವರ್ಷಾಚರಣೆ ನಿಮಿತ್ತ ಅಗಸ್ಟ್ ೧೧ ರಿಂದು ೧೭ರವರೆಗೆ ನಡೆಯಲಿರುವ ‘ಹರ್ ಘರ್ ತಿರಂಗಾ’ ಕಾರ್ಯಕ್ರಮವು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೂಡಿದೆ. ಬರುವ ಸ್ವಾತಂತ್ರ್ಯೋತ್ಸವದಂದು ಕನಿಷ್ಟ ೨೦ ಕೋಟಿ ರಾಷ್ಟ್ರಧ್ವಜಗಳು ಹಾರಬೇಕೆಂಬ ನಿರೀಕ್ಷೆ ಸರ್ಕಾರದ್ದಾಗಿದೆ. ಭಾರತದ ರಾಷ್ಟ್ರಧ್ವಜ ಸಂಹಿತೆ ೨೦೦೨ ರ ಪ್ರಕಾರ ಈ ಮೊದಲ ಕೈಮಗ್ಗ ಮತ್ತು ಕೈಯಿಂದ ನೇಯ್ದ ಖಾದಿ ಬಟ್ಟೆಗಳಿಂದ ಮಾತ್ರ ರಾಷ್ಟ್ರಧ್ವಜಗಳನ್ನು ತಯಾರಿಸಲು ಅನುಮತಿ ಇತ್ತು. ೨೦೨೧ ರ ಡಿಸೆಂಬರ್ ೩೦ ರಂದು ಈ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ತರಲಾಯಿತು. ಕೈಮಗ್ಗ ಅಥವಾ ಕೈಯಿಂದ ತಯಾರಿಸಲಾದ ಬಟ್ಟೆಯಿಂದ ಮಾತ್ರವಲ್ಲದೆ. ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ, ಖಾದಿ ಬಟ್ಟೆಯಿಂದಲೂ ರಾಷ್ಟ್ರಧ್ವಜವನ್ನು ಮಾಡಬಹುದೆಂದು ಈ ತಿದ್ದುಪಡಿ ಹೇಳುತ್ತದೆ. ಆದರೆ ಈ ತಿದ್ದುಪಡಿಗೆ ಕೆಲವು ವಲಯಗಳಿಂದ ತೀವ್ರ ವಿರೋಧ ಸಹ ವ್ಯಕ್ತವಾಗಿದೆ.
ಭಾರತದ ಸ್ವಾತಂತ್ರ್ಯದ ೭೫ನೇ ವರ್ಷವನ್ನು ಆಚರಿಸಲು ಮತ್ತು ‘ಹರ್ ಘರ್ ತಿರಂಗಾ’ (ಪ್ರತಿ ಮನೆಯಲ್ಲಿ ತಿರಂಗಾ) ಅಭಿಯಾನದ ಆರಂಭದ ಪೂರ್ವದಲ್ಲಿ ರಾಷ್ಟ್ರಧ್ವಜ ಸಂಹಿತೆಗೆ ಮಾಡಿದ ಬದಲಾವಣೆಯ ಪರಿಣಾಮವಾಗಿ ತ್ರಿರ್ವಣ ಧ್ವಜದ ವೆಚ್ಚವು ಕಡಿಮೆಯಾಗಬಹುದು ಎಂದು ಸರ್ಕಾರ ನಿರೀಕ್ಷಿಸುತ್ತದೆ.
ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ದೇಶಾದ್ಯಂತ ಕನಿಷ್ಠ ೨೦ ಕೋಟಿ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವ ಮತ್ತು ಹಾರಿಸುವ ಗುರಿಯನ್ನು ಹೊಂದಿದ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ನಿರೀಕ್ಷೆಯಿದೆ. ಜನರು ರಾಷ್ಟ್ರಧ್ವಜವನ್ನು ಖರೀದಿಸುವದರಿಂದ ಅವರಲ್ಲಿ ರಾಷ್ಟ್ರಾಭಿಮಾನ ಮೂಡುತ್ತದೆ ಎಂದು ಸರಕಾರ ಹೇಳಿದೆ. ಇದೊಂದು ಕಾರ್ಯಕ್ರಮವಾಗಿದ್ದು ಪ್ರಸ್ತುತ ಶುಭ ಸಂದರ್ಭವನ್ನು ಸ್ಮರಣೀಯಗೊಳಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಂಥ ಸಂದರ್ಭದಲ್ಲಿ ರಾಷ್ಟ್ರಧ್ವಜಗಳಿಗೆ ಬೇಡಿಕೆ ಹೆಚ್ಚುವದು ಮಾತ್ರವಲ್ಲದೇ ಅದು ಬೆಲೆ ಏರಿಕೆಗೆ ಕೂಡ ಕಾರಣವಾಗಬಹುದು. ಈ ಎಲ್ಲ ಕಾರಣಗಳಿಗಿಯೇ ಬಹುಶಃ ಪಾಲಿಸ್ಟರ್ ರಾಷ್ಟ್ರಧ್ವಜ ಬಳಕೆಗೂ ಕೇಂದ್ರ ಸರಕಾರ ಅನುಮತಿ ನೀಡಿದೆ. ರಾಷ್ಟ್ರಧ್ವಜಗಳನ್ನು ಉಚಿತವಾಗಿ ವಿತರಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸದ ಕೇಂದ್ರ ಸರ್ಕಾರ ಜನರು ರಾಷ್ಟ್ರಧ್ವಜಗಳನ್ನು ಎಲ್ಲಿ ಖರೀದಿಸಬೇಕು ಎಂಬುದನ್ನು ಮಾತ್ರ ಹೇಳಿಲ್ಲ.
ಭಾರತದ ಧ್ವಜ ಸಂಹಿತೆ :
ರಾಷ್ಟ್ರಧ್ವಜ ಸಂಹಿತೆಯು ಭಾರತದ ರಾಷ್ಟ್ರಧ್ವಜದ ಪ್ರದರ್ಶನಕ್ಕೆ ಅನ್ವಯವಾಗುವ ಕಾನೂನುಗಳು, ಆಚರಣೆಗಳು ಮತ್ತು ಸಂಪ್ರದಾಯಗಳ ಒಂದು ವಿವರಣೆಯಾಗಿದೆ. ಮೊದಲು, ರಾಷ್ಟ್ರಧ್ವಜದ ಪ್ರದರ್ಶನವನ್ನು ದಿ ಲಾಂಛನಗಳು ಮತ್ತು ಹೆಸರುಗಳು(ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯಿದೆ, ೧೯೫೦(೧೯೫೦ ರ ನಂ. ೧೨) ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯಿದೆ, ೧೯೭೧(ನಂ. ೬೯ರ ನಿಬಂಧನೆಗಳ ಮೂಲಕ ನಿಯಂತ್ರಿಸಲಾಗುತ್ತದೆ, ೧೯೭೧). ಭಾರತದ ಧ್ವಜ ಸಂಹಿತೆ, ೨೦೦೨, ಅಂತಹ ಎಲ್ಲಾ ಕಾನೂನುಗಳು, ಸಂಪ್ರದಾಯಗಳು, ಆಚರಣೆಗಳು ಮತ್ತು ಸೂಚನೆಗಳನ್ನು ಮಾರ್ಗದರ್ಶನ ಮತ್ತು ಸಂಬಂಧ ಪಟ್ಟ ಎಲ್ಲರಿಗೂ ಪ್ರಯೋಜನಕ್ಕಾಗಿ ತರಲು ಒಂದು ಪ್ರಯತ್ನವಾಗಿದೆ.
ಈ ಧ್ವಜ ಸಂಹಿತೆಯನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ.
• ಮೊದಲ ಭಾಗದಲ್ಲಿ : ರಾಷ್ಟ್ರಧ್ವಜದ ಸಾಮಾನ್ಯ ವಿವರಣೆ.
• ಎರಡನೆ ಭಾಗದಲ್ಲಿ : ಸಾರ್ವಜನಿಕ, ಖಾಸಗಿ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳಿಂದ ರಾಷ್ಟ್ರಧ್ವಜದ ಹಾರಾಟ.
• ಮೂರನೇ ಭಾಗದಲ್ಲಿ : ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಮತ್ತು ಅದರ ಸಂಸ್ಥೆಗಳು ಮತ್ತು ಏಜೆನ್ಸಿಗಳಿಂದ ರಾಷ್ಟ್ರಧ್ವಜದ ಪ್ರದರ್ಶನ.
ಭಾರತದ ರಾಷ್ಟ್ರಧ್ವಜದ ಘನತೆ ಮತ್ತು ಗೌರವವನ್ನು ಕಾಪಾಡಲು ಈ ಸಂಹಿತೆಗಳನ್ನು ರೂಪಿಸಲಾಗಿದೆ. ಸೂರ್ಯಾಸ್ತದ ಬಳಿಕ, ರಾತ್ರಿ ಹೊತಿನಲ್ಲಿ ರಾಷ್ಟ್ರಧ್ವಜ ಹಾರಾಟದ ನಿರ್ಬಂಧಿಸಲಾಗಿದೆ. ಜತೆಗೆ, ಹರಿದ ಮತ್ತು ವಿಕೃತಗೊಂಡು ರಾಷ್ಟ್ರಧ್ವಜ ಬಳಿಕೆಗೆ ಅವಕಾಶ ಇಲ್ಲ. ಆದರೆ, ಸಾರ್ವಜನಿಕ, ಖಾಸಗಿ ಸಂಸ್ಥೆಗಳು ಮತ್ತು ಕಟ್ಟಡಗಳ ಮೇಲೆ ಹಗಲು ಮತ್ತು ರಾತ್ರಿ ರಾಷ್ಟ್ರಧ್ವಜ ಹಾರಾಟಕ್ಕೆ ಕೇಂದ್ರ ಸರಕಾರದ ಗೃಹ ಸಚಿವಾಲಯವು ೨೦೦೯ರಲ್ಲಿ ಒಪ್ಪಿಗೆಯನ್ನು ನೀಡಿದೆ. ಭಾರತದ ರಾಷ್ಟ್ರಧ್ವಜದ ಘನತೆ ಮತ್ತು ಗೌರವಕ್ಕೆ ಚ್ಯುತಿ ಬಾರದಂತೆ ಸಾರ್ವಜನಿಕ, ಖಾಸಗಿ ಸಂಸ್ಥೆಗಳು ಅಥವಾ ಶಿಕ್ಷಣ ಸಂಸ್ಥೆಗಳು ಎಲ್ಲ ದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ, ಉದ್ಘಾಟನೆ ಸಂದರ್ಭದಲ್ಲಿ ಅಥವಾ ನಿರಂತರವಾಗಿ ರಾಷ್ಟ್ರಧ್ವಜಾರೋಹಣ ಮಾಡಬಹುದು ಧ್ವಜಾರೋಹಣಕ್ಕೆ ಪ್ರೇರಣೆ ನೀಡುವುದಕ್ಕಾಗಿ ತ್ರಿವರ್ಣ ಧ್ವಜವನ್ನು ಶಾಲೆ, ಕಾಲೇಜು, ಕ್ರೀಡಾ ಅವರಣ ಹಾಗೂ ಸ್ಕೌಟ್ ಕ್ಯಾಂಪಸ್ಗಳಲ್ಲಿ ಸಂಹಿತೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
೧೯೫೦ ಹಾಗೂ ೧೯೭೧ರಲ್ಲಿ ತಂದ ಕೆಲ ತಿದ್ದುಪಡಿಗಳಿಗನುಸಾರ ರಾಷ್ಟ್ರದ ಗೌರವಕ್ಕೆ ಅವಮಾನ ತಪ್ಪಿಸುವ ಉದ್ದೇಶದಿಂದ ಕೆಲ ನಿರ್ಬಂಧಗಳನ್ನು ಹೇರಲಾಗಿದೆ. ಇದೇ ವೇಳೆ, ತ್ರಿವರ್ಣ ಧ್ವಜವನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಹರಿದ ಅಥವಾ ಹೊಲಸಾದ ಧ್ವಜವನ್ನು ಉಪಯೋಗಿಸುವಂತಿಲ್ಲ. ಹಾಗೆಯೇ ತ್ರಿವರ್ಣ ಧ್ವಜವನ್ನು ಇತರ ಧ್ವಜಗಳೊಂದಿಗೆ ಏಕಕಾಲದಲ್ಲಿ ಹಾರಿಸುವಂತಿಲ್ಲ. ತ್ರಿವರ್ಣ ಧ್ವಜದ ಪಕ್ಕದಲ್ಲಿ ಒಂದೇ ಎತ್ತರದಲ್ಲಿ ಇನ್ನಿತರ ಯಾವುದೇ ವಸ್ತುಗಳು ಇರಬಾರದು. ಧ್ವಜವನ್ನು ಯಾವುದೇ ಉತ್ಸವಕ್ಕಾಗಿ ಅಥವಾ ಅಲಂಕಾರಕ್ಕಾಗಿ ಬಳಸುವಂತಿಲ್ಲ.
ರಾಷ್ಟೀಯ ಹಬ್ಬಗಳ ಆಚರಣೆಯಲ್ಲಿ, ಕ್ರೀಡಾಕೂಟಗಳೇ ಮುಂತಾದ ಸಂದಭಗಳಲ್ಲಿ ಪ್ಲಾಸ್ಟಿಕ್, ಪೇಪರ್ ತ್ರಿವರ್ಣ ಧ್ವಜಗಳನ್ನು ಹೇಗೆಂದರೆ ಹಾಗೆ ಬಿಸಾಡುವಂತಿಲ್ಲ. ಅಂಥ ಧ್ವಜಗಳನ್ನು ಸಮಪರ್ಕವಾಗಿ ವಿಲೇವಾರಿ ಮಾಡಬೇಕು. ಅದಿಕೃತ ಧ್ವಜಪ್ರದರ್ಶನಕ್ಕಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ನಿಗದಿಪಡಿಸಿದ ನಿಯಮಗಳಿಗೆ ಅನುಗುಣವಾಗಿರುವ ಮತ್ತು ಅವುಗಳ ಗುರುತು ಹೊಂದಿರುವ ಧ್ವಜಗಳನ್ನು ಮಾತ್ರ ಬಳಸಬಹುದು. ೨೦೦೨ ರ ಭಾರತ ಧ್ವಜ ಸಂಹಿತೆಯ ಕೆಲ ಸೆಕ್ಷನ್Àಗಳ ಅನುಸಾರ ರಾಷ್ಟ್ರಧ್ವಜದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ವರ್ಣಗಳು ಹಾಗೂ ಅಶೋಕ ಚಕ್ರ ಹೊರತು ಬೇರೆ ಯಾವುದೇ ಬರಹವಿರಬಾರದು. ಹಾಗೆ ಬರೆದರೆ ಅದು ಅಪಮಾನವಾಗುತ್ತದೆ, ಅಲ್ಲದೇ ರಾಷ್ಟ್ರಧ್ವಜವನ್ನು ವಿರೂಪಗೊಳಿಸುವುದು, ಸುಡುವದು, ಹರಿದು ಹಾಕುವದು ಸೇರಿದಂತೆ ಯಾವುದೇ ರೂಪದಲ್ಲಿ ಅವಮಾನಗೊಳಿಸಿದರೆ ೨೦೦೩ ‘ಪ್ರಿವೆನ್ಷನ್ ಆಫ್ ಇನ್ಸಸಲ್ಟ್ ಟು ನ್ಯಾಷನಲ್ ಆನರ್ ಆಕ್ಟ್’ ಅನುಸಾರ ಮೂರು ವರ್ಷ ಜೈಲು ಶಿಕ್ಷೆಗೂ ಅವಕಾಶವಿದೆ.
ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿದು ಸರಿಯೇ?
ಕೇಂದ್ರ ಸರಕಾರ ತನ್ನ ಅಭಿಯಾನದ ಉದ್ದೇಶಕ್ಕೆ ಪೂರಕವಾಗಿ ರಾಷ್ಟ್ರಧ್ವಜ ಸಂಹಿತೆಯ ನಿಯಮಗಳನ್ನು ಬದಲಿಸಿರುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ. ಭಾರತದ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ನಿಯಮಗಳನ್ನು ಆಗಾಗ ಬದಲಿಸಿರುವುದರಿಂದ ಅದಕ್ಕಿರುವ ಗೌರವ ಮತ್ತು ಘನತೆಯನ್ನು ತಗ್ಗಿಸಲಾಗಿದೆ ಎಂಬ ಆರೋಪ ವ್ಯಾಪಕವಾಗಿದೆ. ಕೇಂದ್ರ ಸರ್ಕಾರವು ತಾನು ಹಮ್ಮಿಕೊಳ್ಳಲಿರುವ ಅಭಿಯಾನದ ಕುರಿತು ಬಗ್ಗೆ ಘೋಷಣೆ ಮಾಡಿದ್ದರೆ ಧ್ವಜ ಉತ್ಪಾದಿಸುವ ಖಾದಿ ಕೇಂದ್ರಗಳು ಬೇಡಿಕೆಗೆ ತಕ್ಕಷ್ಟು ಉತ್ಪಾದಿಸಲು ಸಾಧ್ಯವಾಗುತ್ತಿತ್ತು. ಕೇಂದ್ರ ಸರಕಾರದ ಮುಂದಾಲೋಚನೆಯ ಕೊರತೆಯಿಂದಾಗಿ ಮತ್ತು ಎಂಥದೇ ಪರಿಸ್ಥಿತಿಯಲ್ಲಿ ತನ್ನ ಅಭಿಯಾನವನ್ನು ಯಶಸ್ವಿಗೊಳಿಸುವುದಕ್ಕಾಗಿ ರಾಷ್ಟ್ರ ಧ್ವಜ ಸಂಹಿತೆಯ ನಿಯಮಗಳನ್ನು ಬದಲಿಸಿ ಪಾಲಿಸ್ಟರ್ ರಾಷ್ಟçಧ್ವಜಗಳ ಬಳಕೆಗೆ ಅವಕಾಶ ನೀಡಿರುವದು ಸರಿಯಲ್ಲ ಎಂಬ ವಾದ ಬಲವತ್ತರವಾಗಿದೆ. ಸಾಕಷ್ಟು ಕಠಿಣ ನಿಯಮಗಳಿದ್ದಾಗ್ಯೂ, ರಾಷ್ಟçಧ್ವಜದ ಘನತೆಯನ್ನು ಕುಂದಿಸುವಂಥ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಹಾಗಿರುವಾಗ ನಿಯಮಗಳನ್ನು ಸಡಿಲ ಮಾಡಿದ್ದರಿಂದ ಅಸಮರ್ಪಕ ಬಳಕೆಗೆ ರಹದಾರಿ ಮಾಡಿಕೊಟ್ಟಂತಾಗಿದೆ.
ಪಾಲಿಸ್ಟರ್ ಧ್ವಜಕ್ಕೆ ಜಿಎಸ್ಟಿ ಇಲ್ಲ
ಪಾಲಿಸ್ಟರ್ನಿಂದ ತಯಾರಿಸಿದ ಭಾರತದ ರಾಷ್ಟ್ರಧ್ವಜ ಮಾರಾಟದ ಮೇಲೆ ಕೆಲವು ಕೇಂದ್ರ ಸರಕಾರವು ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ನೀಡಿದೆ. ಹತ್ತಿ, ರೇಷ್ಮೆ, ಉಣ್ಣೆ ಅಥವಾ ಖಾದಿಯಿಂದ ತಯಾರಾದ ರಾಷ್ಟ್ರಧ್ವಜಗಳು ಈಗಾಗಲೇ ತೆರಿಗೆಗಳ ವ್ಯಾಪ್ತಿಯಿಂದ ಹೊರಗಿದ್ದವು. ಡಿಸೆಂಬರ್ ೨೦೨೧ರಲ್ಲಿ ಮಾಡಲಾದ ತಿದ್ದುಪಡಿಗಳನ್ನು ಒಳಗೊಂಡಂತೆ ಧ್ವಜ ಸಂಹಿತೆ ೨೦೦೨ರಡಿಯಲ್ಲಿ ಭಾರತೀಯ ರಾಷ್ಟೀಯ ಧ್ವಜಕ್ಕೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ಶುಕ್ರವಾರ ಜ್ಞಾಫಕ ಪತ್ರದಲ್ಲಿ ತಿಳಿಸಿದೆ. ಇದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಟ್ವೀಟರ್ ಪೋಸ್ಟ್ಗೆ ಜ್ಞಾಪಕ ಪತ್ರ ಲಗತ್ತಿಸಿ ಸ್ಪಷ್ಟಪಡಿಸಿದ್ದಾರೆ.
ಅಭಿಯಾನದ ಭಾಗವಾಗಿ, ಅಗಸ್ಟ್ ೧೧-೧೭ರ ವರೆಗೆ ಒಂದು ವಾರದಲ್ಲಿ ನಾಗರಿಕರು ತಮ್ಮ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಜನರ ಹೃದಯಗಳಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವದು ಈ ಉಪಕ್ರಮದ ಹಿಂದಿನ ಆಲೋಚನೆಯಾಗಿದೆ. ಪಾಲಿಸ್ಟರ್ ರಾಷ್ಟ್ರಧ್ವಜಗಳ ಮಾರಾಟವನ್ನು ಶುಕ್ರವಾರ ಕೇಂದ್ರ ಸರ್ಕಾರ ಜಿಎಸ್ಟಿ ಮುಕ್ತಗೊಳಿಸಿದೆ. ಚರಕದಿಂದ ತಯಾರಿಸಲ್ಪಡುವ ಹತ್ತಿ ಬಟ್ಟೆ, ರೇಷ್ಮೆ, ಉಣ್ಣೆ ಮತ್ತು ಖಾದಿ ಧ್ವಜಗಳ ಮಾರಾಟವನ್ನು ಈಗಾಗಲೇ ಜಿಎಸ್ಟಿ ಮುಕ್ತಗೊಳಿಸಿದೆ.
ಮೈಸೂರಲ್ಲಿ ಧ್ವಜ ಸಂಹಿತೆಗೆ ತಿದ್ದುಪಡಿ ವಿರೋಧಿಸಿ ನೇಕಾರರ ವಿಭಿನ್ನ ಪ್ರತಿಭಟನೆ :
ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯ ಸಂದರ್ಭದಲ್ಲಿ ‘ರಾಷ್ಟ್ರಧ್ವಜ ಸಂಹಿತೆ’ ತಿದ್ದುಪಡಿ ಮಾಡಿರುವುದು ಗಾಂಧಿ ತತ್ವ ಮತ್ತು ಆಶಯಗಳಿಗೆ ವಿರುದ್ಧದ ನಡೆ. ಗ್ರಾಮೋದ್ಯೋಗವನ್ನು ನಾಶ ಮಾಡಲು ಅಧಿಕಾರ ವರ್ಗ ಹಾತೊರೆಯುತ್ತಿದೆ. ಗ್ರಾಮ ಸ್ವರಾಜ್ಯದ ಸಂಕೇತವಾದ ಖಾದಿಯನ್ನು ತ್ಯಜಿಸುವ ಮಾತೇ ಇಲ್ಲ ಎಂದು ಮೈಸೂರಿನ ರಂಗಕರ್ಮಿ ಪ್ರಸನ್ನ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾದಿ ಬಟ್ಟೆಯ ಬದಲು ಪಾಲಿಸ್ಟರ್ನಿಂದ ತಯಾರಿಸಿದ ರಾಷ್ಟ್ರಧ್ವಜಗಳಿಗೆ ಅನುಮತಿ ನೀಡಿ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ‘ಮೈಸೂರು ಖಾದಿ ನೂಲುಗಾರರ ಬಳಗ’ ಮಕ್ಕಳು ಮತ್ತು ನಾಗರಿಕರಿಗೆ ಖಾದಿ ನೂಲು ನೇಯುವ ಕಾರ್ಯಾಗಾರ ಮತ್ತು ಮೌನ ಪ್ರತಿಭಟನೆಯ ಮೂಲಕ ಇತೀಚೆ ವಿಭನ್ನ ಪ್ರತಿರೋಧ ವ್ಯಕ್ತ ಪಡಿಸಿತು.
“ಖಾದಿಯಿಂದ ದೇಶದ ಆರ್ಥಿಕತೆಗೆ ಯಾವುದೇ ಲಾಭವಿಲ್ಲ. ನೀವು ಚರಕದಿಂದ ನೂತ ಖಾದಿ ನಮಗೆ ಬೇಕಿಲ್ಲವೆಂದು ಪರೋಕ್ಷವಾಗಿ ಸರ್ಕಾರ ಹೇಳಿದಂತಿದೆ. ಧ್ವಜದಿಂದಲೇ ಖಾದಿಯನ್ನು ಕಿತ್ತು ಹಾಕಲು ಸರ್ಕಾರ ಮುಂದಾಗಿದೆ. ಹೀಗೇ ಮುಂದುವರಿದರೆ ಶಿವಪುರ ಸತ್ಯಾಗ್ರಹದ ಚಳವಳಿ ಮಾದರಿಯಲ್ಲಿ ಬೆಂಗಳೂರು, ಧಾರವಾಡಗಳಲ್ಲಿ ಧ್ವಜ ಸತ್ಯಾಗ್ರಹದ ಚಳವಳಿ ಮಾಡುತ್ತೇವೆ” ಎಂದು ಪ್ರಸನ್ನ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ ಖಾದಿ ಧ್ವಜ ನಿರ್ಮಾಣ ಸಂಸ್ಥೆಗೆ ಕುತ್ತು !
ಪ್ರಸ್ತುತ ತಿದ್ದುಪಡಿ ಕಾರಣದಿಂದ ದೇಶ ಏಕೈಕ ರಾಷ್ಟ್ರಧ್ವಜ ತಯಾರಿಕಾ ಕೇಂದ್ರವಾದ ಹುಬ್ಬಳ್ಳಿ ತಾಲೂಕಿನ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಮಾನಕ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಈ ಕೇಂದ್ರದಲ್ಲಿ ಪ್ರತಿ ವರ್ಷ ಸುಮಾರು ೩ರಿಂದ ೩.೫ ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತಿತ್ತು. ಅಂದರೆ ಸುಮಾರು ೭೦ ಸಾವಿರ ತ್ರಿವರ್ಣ ಧ್ವಜಗಳು ಮಾರಾಟವಾಗುತ್ತಿದ್ದವು. ಈ ಬಾರಿಯೂ ಅರೇ ಮಟ್ಟದ ವಹಿವಾಟು ನಡೆಯಬಹುದೆಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಈ ಸಂಸ್ಥೆಯವರ ಆಸೆ ಆಸೆಯಾಗಿ ಉಳಿಯುವ ಪ್ರಸಂಗ ಎದುರಾಗಿದೆ.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ತಮ್ಮ ಸಿಬ್ಬಂದಿಗಳಿಗೆ ರಾಷ್ಟ್ರಧ್ವಜ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ ಎಂದು ಆದೇಶ ನೀಡಿತ್ತು. ಈ ಬಾರಿ ೫ ಕೋಟಿಗಿಂತಲೂ ಹೆಚ್ಚಿನ ಲಾಭವಾಗುತ್ತದೆ ಅಂದುಕೊಂಡಿದ್ದರು. ಆದರೆ ಇದೀಗ ಸರ್ಕಾರದ ತಂದಿರುವ ತಿದ್ದುಪಡಿಯಿಂದ ನಮ್ಮ ವಹಿವಾಟು ಸಂಪೂರ್ಣವಾಗಿ ಕುಸಿಯುತ್ತದೆ. ಇದರ ಕುರಿತು ಯಾವ ರೀತಿ ಹೋರಾಟ ಮಾಡಬೇಕೆಂಬುವದನ್ನು ಸಭೆ ಬಳಿಕ ತೀರ್ಮಾನಿಸುತ್ತೇವೆ. ಸತ್ಯಾಗ್ರಹದ ಮೂಲಕ ಮಾಡಬೇಕೋ ಅಥವಾ ಸುಪ್ರೀಂ ಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಬೇಕೋ ಅಥವಾ ಕೇಂದ್ರ ಸರ್ಕಾರಕ್ಕೆ ನಿಯೋಗ ಹೋಗಿ ಭೇಟಿ ಮಾಡುವದು ಸೂಕ್ತವೋ ಎನ್ನುವುದರ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವದೆಂದು ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು ತಿಳಿಸಿದ್ದಾರೆ.
ಪಾಲಿಸ್ಟರ್ ರಾಷ್ಟçಧ್ವಜ ಉತ್ಪಾದನೆ ಮತ್ತು ಆಮದಿಗೆ ವಿರುದ್ಧ ಜುಲೈ ೨೭ಕ್ಕೆ ಸತ್ಯಾಗ್ರಹ :
ಪಾಲಿಸ್ಟರ್ ರಾಷ್ಟ್ರಧ್ವಜದ ಉತ್ಪಾದನೆ ಮತ್ತು ಆಮದಿಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರದ ನಿರ್ಣಯ ವಿರೋಧಿಸಿ ಖಾದಿ ರಾಷ್ಟ್ರದ ಧ್ವಜ ತಯಾರಿಕೆಗೆ ಖ್ಯಾತಿ ಪಡೆದ ಕರ್ನಾಟಕದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಜುಲೈ ೨೭ಕ್ಕೆ ಒಂದು ದಿನ ಸತ್ಯಾಗ್ರಹ ಘೋಷಿಸಿದೆ. ಸರ್ಕಾರದ ರಾಷ್ಟ್ರಧ್ವಜ ಸಂಹಿತೆ ತಿದ್ದುಪಡಿ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿಗಳು, ಸರ್ವೋದಯ ಕಾರ್ಯಕರ್ತರು, ಖಾದಿ ಪ್ರೇಮಿಗಳು , ರಾಜ್ಯದ ಖಾದಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಧ್ವಜ ತಯಾರಿಸುವ ಕೆಲಸಗಾರರು ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಆವರಣದಲ್ಲಿ ಜುಲೈ ೨೭ಕ್ಕೆ ಒಂದು ದಿನ ಸತ್ಯಾಗ್ರಹದಲ್ಲಿ ಭಾಗವಹಿಸಿರುವರು.
ಹರ್ ಘರ್ ತಿರಂಗಾ ಯಶಸ್ಸಿಗೆ ಗೈಡ ಲೈನ್
ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ‘ಹರ್ ಘರ್ ತಿರಂಗಾ’ ಘೋಷವಾಕ್ಯದೊಂದಿಗೆ ಆ. ೧೧ ರಿಂದ ೧೭ ರವರೆಗೆ ದೇಶದ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸುವ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವಂತೆ ಸೂಚಿಸಿ ಪಂಚಾಯತ್ರಾಜ್ ಆಯುಕ್ತಾಲಯ ಸುತ್ತೋಲೆ ಹೊರಡಿಸಿದೆ.
ಎಲ್ಲಾ ಪಂಚಾಯಿತಿಗಳ ಕಾರ್ಯವ್ಯಾಪ್ತಿಯಲ್ಲಿರುವ ಸರಕಾರಿ / ಅರೆ ಸರಕಾರಿ, ನಿಗಮ-ಮಂಡಳಿಗಳು, ಸಾರ್ವಜನಿಕ ಉದ್ಯಮಗಳು, ಸ್ವಸಹಾಯ ಗುಂಪುಗಳು, ನಾಗರಿಕ ಸಂಸ್ಥೆಗಳು, ಸಾರ್ವಜನಿಕರು, ಶಾಲಾ-ಕಾಲೇಜು ಮಕ್ಕಳು ಇತರೆ ಎಲ್ಲ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಅಭಿಯಾನದಲ್ಲಿ ಪಾಲ್ಗೊಳಲು ಪ್ರೇರಿಪಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಪಂಚಾಯತಿಗಳು ‘ದಿ ಪ್ಲಾಗ್ ಕೋಡ್ ಆಫ್ ಇಂಡಿಯಾ ೨೦೦೨’ ಕಾಯಿದೆಗೆ ತಂದಿರುವ ತಿದ್ದುಪಡಿಯಂತೆ ರಾಷ್ಟ್ರಧ್ವಜ ಹಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಅಭಿಯಾನದ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಉತ್ತಮ ಗುಣಮಟ್ಟದ ಪೋಟೋದೊಂದಿಗೆ ಅನುಪಾಲನಾ ವರದಿಯನ್ನು ಕಚೇರಿಗೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಾದ ಪಂಚಾಯತ್ರಾಜ್ ಸಂಸ್ಥೆಗಳು/ ಸ್ವಸಹಾಯ ಸಂಘಗಳು-ಒಕ್ಕೂಟಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಕೇಂದ್ರ, ಸಹಕಾರಿ ಸಂಘಗಳು, ಉಪ ಅಂಚೆ ಕಚೇರಿಗಳಲ್ಲಿ, ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ರೋಜ್ಗಾರ್ ಸೇವಕರು, ಶಿಕ್ಷಕರನ್ನು ಉತ್ತೇಜಿಸಿ ರಾಷ್ಟçಧ್ವಜ ಹಾರಿಸುವಂತೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಹತ್ತಿ, ಪಾಲಿಸ್ಟರ್, ರೇಷ್ಮೆ, ಉಣ್ಣೆ ಮತ್ತು ಖಾದಿ ಬಟ್ಟೆಯಿಂದ ಕೈಯಲ್ಲಿ ಸಿದ್ದಪಡಿಸಿರುವ, ಯಂತ್ರದಿಂದ ತಯಾರಿಸಿದ ರಾಷ್ಟ್ರದ ಧ್ವಜಗಳನ್ನು ಬಳಸಬಹುದು. ಅಭಿಯಾನದ ಬಗ್ಗೆ ಸ್ಥಳೀಯ ಭಾಷೆಯಲ್ಲಿ ಕರಪತ್ರ, ಬ್ಯಾನರ್ ಮೂಲಕ ಪ್ರಚಾರ ನೀಡಬೇಕು. ಗ್ರಾಮ ಪಂಚಾಯತಿಗಳು ರಾಷ್ಟ್ರಧ್ವಜವನ್ನು ಬೃಹತ್ ಮಟ್ಟದಲ್ಲಿ ಖರೀದಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ರಾಷ್ಟ್ರಧ್ವಜಗಳ ಹಂಚಿಕೆ ಮತ್ತು ಮಾರಾಟ ಸ್ಥಳಗಳನ್ನು ಗುರುತಿಸಬೇಕು. ನ್ಯಾಯಬೆಲೆ ಅಂಗಡಿಗಳನ್ನು ರಾಷ್ಟçಧ್ವಜ ವಿತರಣೆ/ಮಾರಾಟದ ಕೇಂದ್ರವಾಗಿ ಬಳಸಬಹುದು.
ಕರ್ನಾಟಕ ರಾಜ್ಯದಲ್ಲಿ ಒಂದು ಕೋಟಿ ಹರ್ ಘರ್ ತಿರಂಗಾ
ಹರ್ ಘರ್ ತಿರಂಗಾ ಕಾರ್ಯಕ್ರಮ ಕುರಿತು ಎಲ್ಲ ಹಂತದಲ್ಲೂ ಅಗತ್ಯ ಮತ್ತು ವ್ಯಾಪಕ ಪ್ರಚಾರ ನೀಡಿ. ಅಗಸ್ಟ್ ೧೩ ರಿಂದ ೧೫ ರವರೆಗೆ ಮೂರು ದಿನ ದೇಶಾದ್ಯಂತ ೨೦ ಕೋಟಿ ರಾಷ್ಟ್ರಧ್ವಜಗಳನ್ನು ಹಾರಿಸಲು ಕ್ರಮವಹಿಸಬೇಕು. ೧೦೦ ಕೋಟಿ ಜನತೆಯನ್ನು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಉತ್ತೇಸಬೇಕು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಎಲ್ಲ ರಾಜ್ಯಗಳ ಸಿಎಂಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು.
೭೫ನೇ ಸ್ವಾತಂತ್ರ್ಯೋತ್ಸವದ ‘ಆಜಾದಿ ಕಾ ಅಮೃತ ಮಹೋತ್ಸವ’ ಕಾರ್ಯಕ್ರಮ ಅಂಗವಾಗಿ ಹರ್ ಘರ್ ತಿರಂಗಾ ಅಂಗವಾಗಿ ರಾಜ್ಯದಲ್ಲಿ ೧ ಕೋಟಿ ರಾಷ್ಟ್ರಧ್ವಜ ಹಾರಿಸಲು ಕ್ರಮವಹಿಸುವುದು.. ರಾಷ್ಟೀಯತೆ ಮತ್ತು ದೇಶಭಕ್ತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಪ್ರಧಾನಿ ಮೋದಿ ಹಾಗೂ ಷಾ ಅವರ ಪಾತ್ರ ಮೆಚ್ಚುವಂಥದ್ದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಹಾಗೂ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಅವರೊಂದಿಗೆ ‘ಹರ್ ಘರ್ ತಿರಂಗಾ’ ಕುರಿತು ಎಲ್ಲ ರಾಜ್ಯಗಳ ಸಿಎಂಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಸರ್ಕಾರಿ, ಸರ್ಕಾರೇತರ, ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಮತ್ತು ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರೂಪಿಸಲಾಗಿದ್ದು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ, ಪೊಲೀಸ್ ಸೇರಿ ಈಗಾಗಲೆ ಕಾರ್ಯಕ್ರಮಕ್ಕೆ ಅನುಷ್ಠಾನಕ್ಕೆ ಸಭೆಗಳು ನಡೆಯುತ್ತಿವೆ ಎಂದರು. ಶೇ.೬೦ ಗ್ರಾಮೀಣ ಪ್ರದೇಶ ಹಾಗೂ ಶೇ.೪೦ ಬಿಬಿಎಂಪಿ ವ್ಯಾಪ್ತಿ ಸೇರಿ ನಗರ ಪ್ರದೇಶಗಳ ಮನೆಗಳು, ಸರ್ಕಾರಿ ಕಚೇರಿಗಳಲ್ಲಿ ಧ್ವಜ ಹಾರಿಸುವ ಮೂಲಕ ಒಂದು ಕೋಟಿ ತ್ರಿವರ್ಣ ಧ್ವಜಗಳನ್ನು ಹಾರಿಸಲು ಕ್ರಮ ಕೈಕೊಳ್ಳಲಾಗುವುದು. ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಈಗಾಗಲೆ ಸುತ್ತೇಲೆ ನೀಡಲಾಗಿದ್ದು, ಶಾಲಾ-ಕಾಲೇಜು, ಅಂಗವಾಡಿಗಳಲ್ಲೂ ರಾಷ್ಟ್ರಧ್ವಜ ಹಾರಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ರಾಜ್ಯದ ಎನ್ಸಿಸಿ, ಎನ್ಎಸ್ಎಸ್, ಮಾಜಿ ಸೈನಿಕರನ್ನು ಒಳಗೊಂಡಂತೆ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಧಾರವಾಡದ ಬಳಿ ಇರುವ ರಾಷ್ಟ್ರಧ್ವಜ ತಯಾರಿಕಾ ಸಂಸ್ಥೆ, ಸ್ವಸಹಾಯ ಸಂಘಗಳ ಮೂಲಕ ೫೦ ಲಕ್ಷದಷ್ಟು ಧ್ವಜಗಳನ್ನು ತಯಾರಿಸುತ್ತಿದ್ದೇವೆ. ೫ ಲಕ್ಷ ತ್ರಿವರ್ಣ ಧ್ವಜಗಳನ್ನು ಪೂರೈಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೆ ಇಂಡೆಂಟ್ ನೀಡಲಾಗಿದ್ದು, ಉಳಿದ ೪೫ ಲಕ್ಷ ತ್ರಿವರ್ಣ ಧ್ವಜ ಪೂರೈಸಲು ಮತ್ತೆ ಇಂಡೆಂಟ್ ನೀಡಲಾಗುವುದು ಎಂದರು. ಎಲ್ಲ ರಾಜ್ಯದ ಮುಖ್ಯಮಂತ್ರಿಗಳು, ಸಚಿವ ಸುನೀಲ್ ಕುಮಾರ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ. ಎಸ್. ಹರ್ಷ ಇತರ ಅಧಿಕಾರಿಗಳು ಇದ್ದರು. ಜಾಲತಾಣಗಳಲ್ಲಿ ಹಾಗೂ ಸರ್ಕಾರದ ಎಲ್ಲ ಜಾಹಿರಾತುಗಳಲ್ಲಿ ಕಾರ್ಯಕ್ರಮ ಕುರಿತು ಪ್ರಕಟಿಸಬೇಕು. ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜಗಳು ಲಭ್ಯವಿರಲಿದ್ದು, ಇಂಡೆAಟ್ ನೀಡುವ ಮೂಲಕ ಜನರು ವೈಯಕ್ತಿಕವಾಗಿ ಹಾಗೂ ಸರ್ಕಾರದವರು ಖರೀದಿಸಬಹುದಾಗಿದೆ.
ಪ್ರತಿ ಮನೆಯ ಮೇಲೆ ಖಾದಿ ಬಾವುಟವನ್ನೇ ಹಾರಿಸಿದ್ದರೆ ಲಕ್ಷಾಂತರ ನೂಲ ಸುತ್ತುವ ಬಡ ಮಹಿಳೆಯರಿಗೆ ಕೆಲಸ ಒದಗಿಸಿದಂತಾಗುತ್ತಿರಲಿಲ್ಲವೇ ? ಹಾಗೆ ಮಾಡಿದ್ದರೆ. ಈ ಸರ್ಕಾರದ ತಲೆಯ ಮೇಲೊಂದು ಗರಿ ಮೂಡುತ್ತಿತ್ತಲ್ಲವೇ ? ಆದರೆ, ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿಯೇ ಖಾದಿ ಬಾವುಟವನ್ನು ಅಧಿಕೃತವಾಗಿ ಕೆಳಗಿಳಿಸಲಾಗಿದೆ. ಹೀಗೆ ಮಾಡಿ, ದೇಶದ ಬಾವುಟ ಮತ್ತು ಗ್ರಾಮೀಣ ಕೈ ಉತ್ಪಾದಕರ ನಡುವೆ ಇದ್ದ ಖಾದಿ ಎಂಬ ಸಂಬಂಧವನ್ನು ಹರಿದು ಹಾಕಲಾಗಿದೆ. ಇದೊಂದು ದುರಂತವೇ ಸರಿ. ಈಗಾಗಲೇ ಖಾದಿ ಮತ್ತು ಗ್ರಾಮೀಣ ಕೈ ಉತ್ಪನ್ನಗಳು ಸತ್ತೇ ಹೋಗಿವೆ. ಆಧುನಿಕ ಸಂದರ್ಭದಲ್ಲಿ ವಾಸ್ತವವಾಗಿ ಆಗಿ ಹೋಗಿರುವ ಈ ದುರಂತವನ್ನು ಹೀಗೆ ಮಾಡುವ ಸರಕಾರವೇ ಸ್ಥಿರಗೊಳಿಸಿದಂತಾಗಲಿಲ್ಲವೇ ? ‘ಹರ್ ಘರ್ ತಿರಂಗಾ’ ಯೋಜನೆ ರೂಪಿಸಿದ ಸಂದರ್ಭದಲ್ಲಿ ಬಾವುಟದ ಅಗತ್ಯತೆ ಕುರಿತು ಬೇಡಿಕೆ ಇಟ್ಟಿದ್ದರೆ. ಸಾಕಾಗುವಷ್ಟು ಉತ್ಪಾದಿಸಲು ಖಾದಿ ಸಂಸ್ಥೆಗಳು ಸಿದ್ದವಿದ್ದವು. ಅದನ್ನು ಬಿಟ್ಟು ಅನಗತ್ಯ ಕಾರಣ ನೀಡುತ್ತದೆ. ಖಾದಿ ಗೋದಾಮಿನಲ್ಲಿ ಲಕ್ಷಾಂತರ ಮೀಟರ ಬಟ್ಟೆ ಖರ್ಚಾಗದೆ ಉಳಿದಿದೆ. ಅದನ್ನು ಯಾರು ಬಳಸುತ್ತಾರೆ ? ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ಮಾಡುವ ಮೂಲಕ ಗಾಂಧಿ ಆಶಯಗಳಿಗೆ ಧಕ್ಕೆ ತರಲಾಗಿದೇ. ಸರಕಾರವೇ ಹೀಗೆ ಮಾಡಿದರೆ ನಾಳೆ ಖಾದಿ ಸಂಸ್ಕೃತಿಯನ್ನು ಕಾಪಾಡುವವರು ಯಾರು ?