ಗಜಲ್

ಕಾವ್ಯ ಸಂಗಾತಿ

ಗಜಲ್

ಅರುಣಾ ನರೇಂದ್ರ

ನೂರು ಪ್ರಶ್ನೆಗಳಾಗಿ ನಿತ್ಯ ಕಾಡುವವನೇ ಕಾರಣಗಳಿದ್ದರೆ ತಿಳಿಸು
ನಿನ್ನ ಮೌನಕ್ಕೆ ಅರ್ಥವೇನೆಂದು ಹುಡುಕಲು ಆಯ್ಕೆಗಳಿದ್ದರೆ ತಿಳಿಸು

ನಮ್ಮಿಬ್ಬರ ಮಧ್ಯೆ ಬಗೆಹರಿಯದ ಲೆಕ್ಕ ದಿನವೂ ಮಾಡಿ ಸೋತಿದ್ದೇನೆ
ಸರಿ ತಪ್ಪುಗಳ ತೂಗಿ ನೋಡಬೇಕಿದೆ ಸಖಾ ಉತ್ತರಗಳಿದ್ದರೆ ತಿಳಿಸು

ಎಷ್ಟೆಲ್ಲಾ ಹೊತ್ತಿಗೆ ಓದಿದರೂ ನಿನ್ನ ತಲುಪುವುದಕ್ಕೆ ಆಗುತ್ತಿಲ್ಲ
ನಿನ್ನೊಳಗಿನ ಬೆಳಗನ್ನು ತೋರುವ ಗ್ರಂಥಗಳಿದ್ದರೆ ತಿಳಿಸು

ನಿನ್ನ ಹೆಜ್ಜೆ ಜಾಡು ಹಿಡಿದು ನಡೆದಾಗಲೆಲ್ಲಾ ಕತ್ತಲಾಗಿ ಕಳೆದು ಹೋಗುತ್ತೇನೆ
ಇರುವಿಕೆಯ ರಹಸ್ಯ ಹೇಗೆ ಬೇಧಿಸಲಿ ಒಳದಾರಿಗಳಿದ್ದರೆ ತಿಳಿಸು

ನಾ ನಿನ್ನೊಳಗೆ ಇರುವ ಪರಿ ಹುಚ್ಚಿ ಅರುಣಾಗೆ ತಿಳಿದೇ ಇಲ್ಲ ನೋಡು
ಅವಳು ನಿನ್ನನ್ನೇ ಹಿಂಬಾಲಿಸಿ ಹುಡುಕಿ ಸಂಧಿಸುವ ತಂತ್ರಾಂಶಗಳಿದ್ದರೆ ತಿಳಿಸು


Leave a Reply

Back To Top