ಕಾವ್ಯ ಸಂಗಾತಿ
ಗಜಲ್
ಪ್ರೊ ರಾಜನಂದಾ ಘಾರ್ಗಿ
ಕಾಲಗರ್ಭದಲ್ಲಿ ಅಡಗಿ ಹೋದ ಕಾಳರಾತ್ರಿಗಳ ಮರೆತು ನಡೆ
ಭವಿಷ್ಯದ ಸವಿ ಕನಸು ಬೀರಿರುವ ಹೊಂಬಣ್ಣದಲ್ಲಿ ಬೆರೆತು ನಡೆ
ಇಂದು ಇಂದಿಗೆ ನಾಳೆ ನಾಳೆಗೆ ಎನ್ನುವುದು ಎಂದಿಗೂ ನಿತ್ಯಸತ್ಯ
ಬರುವ ನಾಳೆ ನಿನ್ನ ಹಾದಿಗೆ ಹೂವ ಹಾಸಲಿದೆ ಅರಿತು ನಡೆ
ಹೆಜ್ಜೆ ದೃಡವಾಗಿದ್ದರೆ ಜಗತ್ತೆಲ್ಲ ನಿನ್ನ ಜೊತೆಗೆ ನಡೆವುದು
ಯೊಚಿಸುತ್ತ ದಿವ್ಯ ಭವ್ಯ ಬಾಳು ಕಟ್ಟುವ ಕುರಿತು ನಡೆ
ಸ್ವಾವಲಂಬನೆ ತುಂಬಿದ ಬಾಳಿಗೆ ಶೋಭೆ ಸಹನಶೀಲತೆ
ಸಮತೋಲನದ ನಡೆ ನುಡಿಗಳಾಡುತ ನುರಿತು ನಡೆ
ಅವಕಾಶ ಕೈ ಚಾಚಿ ನಿನಗಾಗಿ ದಾರಿ ಕಾಯುತಿಹುದು ರಾಜಿ
ತಡ ಮಾಡದೇ ಬಾಚಿ ತಬ್ಬಿಕೊಂಡರೆ ಯಶಸ್ಸು ದೊರೆತು ನಡೆ