ಗೆಳೆಯ

ಕಾವ್ಯ ಸಂಗಾತಿ

ಗೆಳೆಯ

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಗೆಳೆಯ
ಎಂದು ವಿದಾಯ
ಹೇಳುವೆವೋ ಏನೋ
ನೀನು ನನಗೆ
ನಾನು ನಿನಗೆ
ನಿರಂತರ
ನಾ ಮೊದಲೋ
ನೀ ಮೊದಲೋ
ಅದೂ ಅರಿಯೆವು ಈ ಘಳಿಗೆಯಲೂ
ದಶಕಗಳ ಗೆಳೆತನವಾದರೂ
ಬೀಳಲೇಬೇಕು
ಒಂದಲ್ಲ ಒಂದು ದಿನ
ಪೂರ್ಣವಿರಾಮ!

ನಾವು ಗೆಳೆಯರಾದ ಕಾಲವೇ
ಅಂಥಾದ್ದು
ಸ್ನೇಹಕ್ಕೆ ಸಂಪೂರ್ಣ
ಪೂರಕವಾದದ್ದು
ನಿನಗೆ ನಾನೆ
ನನಗೆ ನೀನೆ
ಆಗ ಇಂಟರ್ನೆಟ್
ಟಿವಿ ಮನೋರಂಜನೆ
ಮತ್ತು ನನ್ನ ಕಿವಿಗೆ ನೀನು
ನಿನ್ನ ಕಿವಿಗೆ ನಾನು
ಮೊಬೈಲ್ ಫೋನ್!

ಹೌದು
ಇಬ್ಬರ ನಡುವೆ ಮನಸ್ತಾಪಗಳೇ
ಜಗಳಗಳೇ
ಇರಲಿಲ್ಲವೆಂದಲ್ಲ
ಮನುಷ್ಯ ಸಹಜ ಮನೋಭಾವ ಅಲ್ಲವೆ
ಬದುಕು ಬರಿದೆ ಬೆಲ್ಲದಚ್ಚು ರುಚಿಯಲ್ಲ!
ಬಹುಶಃ ಎಲ್ಲ ಖಾಲಿ ಜಗಳ
ಆದರೂ ಜಗಳ ಜಗಳವೇ ಅಲ್ಲವೆ
ಬೈದಾಡಿ ಮಾತು ಬಿಟ್ಟಿದ್ದೇವೆ
ಕೆಲವಾರು ದಿನ ಮತ್ತು ವಾರ
ಎಲ್ಲವೂ ನಿಜ
ಆದರೆ ಕ್ಷಣಿಕ
ಕ್ರಮೇಣ ಗೆಳೆತನ ಗೆದ್ದು
ನಿಲ್ಲುತ್ತಿತ್ತು ತಲೆ ಎತ್ತಿ ಎದ್ದು!
ಮತ್ತೆ ಇಬ್ಬರನ್ನೂ ಕಟ್ಟಿದ್ದ
ಆ ಸ್ನೇಹ ಬಂಧನದ ಕುಣಿಕೆ
ಒಮ್ಮೆಲೇ ಬಿಗಿ ಎಳೆದು ಭದ್ರ!
ಬಹುಶಃ ಅದು
ಗಟ್ಟಿ ಗೆಳೆತನದ ಗುಟ್ಟು!

ಅಂಥ ಅದ್ಭುತ ಇನ್ನೂ ಈಗಲೂ
ಎಲ್ಲ ಆವಿಷ್ಕಾರಗಳ
ಈ ದಟ್ಟ ಕಾನನದ ನಡುವೆಯೂ
ಉಳಿದುಬಂದಿದೆ ಮೊದಲಂತೆ
ನಳನಳಿಸುವ ಹಚ್ಚಹಸಿರಾಗಿ…

ಹಾಗಾಗಿ
ಇನ್ನೇನು ನಮ್ಮಿಬ್ಬರಿಗೂ
ವಾಕಿಂಗ್ ಸ್ಟಿಕ್ ಹಿಡಿವ
ಸಮಯ ಬಂದಿದೆಯಾದರೂ
ಇದ್ದುಬಿಡೋಣ ಹಾಗೆ
ಆಗಾಗ ಸಂಧಿಸುತ್ತಾ
ಅದೂ ಇದೂ ಎದೆತುಂಬ ಹರಟುತ್ತಾ
ನೆನಪುಗಳಾಗರವ ಮೆಲುಕಿ ಮೀಯುತ್ತಾ
ಇಬ್ಬರಲೊಬ್ಬರ ವಿದಾಯದವರೆಗೂ…


ಡಾ. ಅರಕಲಗೂಡು ನೀಲಕಂಠ ಮೂರ್ತಿ

Leave a Reply

Back To Top