ಗಜಲ್

ಕಾವ್ಯಸಂಗಾತಿ

ಗಜಲ್

ನಯನ. ಜಿ. ಎಸ್

ಕಾಲದೊಂದಿಗೆ ಕಾಲವಾದವು ನೆನಪುಗಳು ಮರ್ಮವರಿಯದ ಭಾವಕೆ ಯಾರು ಹೊಣೆ
ತಿಳಿ ನೀರ ಮಡಿಲಲ್ಲಿ ಅಂಕುರಿಸಿತ್ತು ನವ್ಯತೆ ಕಾಣದ ನೋಟಕೆ ಯಾರು ಹೊಣೆ

ಚಿತ್ತಕೂ ವಿಕಲ್ಪ ಹಾಗೊಮ್ಮೆ ಹೀಗೊಮ್ಮೆ ಬಾಳಿನ ನಿತ್ಯ ಸಂತೆಯ ಬೀದಿಯಲಿ
ಹೊಮ್ಮಿರಲು ಯಶದ ಹೂಮಳೆ ಅರಿತು ಮಜ್ಜಿಸದ ಮನಕೆ ಯಾರು ಹೊಣೆ

ಪಥದ ಭಾವ ಭಾವಕೂ ಸೌಗಂಧ ಪಸರಿಸಲಿ ಭವ್ಯತೆಯ ಜಾಡ ಹಿಡಿದಿಡಿದು
ಕ್ಲೇಶ ಕಮರಿಸಿ ಕಂದಳಿಸಿರಲು ನನಸು ಗ್ರಹಿಸದ ಜೀವಕೆ ಯಾರು ಹೊಣೆ

ಅನಂತತೆಯಲಿ ಲೀನಗೊಳ್ಳಲೇಬೇಕು ಅಸುವಿನ ಕಾರುಬಾರು ಒಂದಲ್ಲ ಒಂದು ಚಣ
ಚಿತೆಗೇರಿಸಿ ರಮ್ಯ ಬಯಕೆಗಳ ಬಳಸಿ ಬೆಳೆಸದ ಹೃನ್ಮನಕೆ ಯಾರು ಹೊಣೆ

ಬಾಷ್ಪದಿ ತೊಯ್ದ ನಯನಗಳಿಗೂ ಇಹುದು ವಿಜಯದ ಹೂನಗೆ ನಾಳೆಗಳಲಿ
ಬದುಕಿನಲಿ ಬೆರೆತೂ ಬಾಳ ದಿಟದಿ ಬೆರೆಯದ ‌ತನ್ತತ್ವಕೆ ಯಾರು ಹೊಣೆ.


Leave a Reply

Back To Top