ಸುಜಾತಾ ರವೀಶ್ ಗಜಲ್ ಗಳು

ಕಾವ್ಯ ಸಂಗಾತಿ

ಗಜಲ್ ಖಜಾನೆ

ಸುಜಾತಾ ರವೀಶ್ ಗಜಲ್ ಗಳು

ಗಝಲ್ -ಒಂದು

ಕದನದ ಕರಾಳತೆಗೆ ಕವಿತೆಯ ಸಾಲುಗಳ ತೆರೆಯದಿರು ನೀನು 
ವದನದ ಸರಳತೆಯ ಕುರುಹಾಗಿ ನಗುತಿರಲು ಮರೆಯದಿರು ನೀನು 

ವಿಷದ ಕರಂಡಕದ ಎದೆಯಲ್ಲಿ ಅಡಗಿಸಿ 
ಸಿಹಿ ಮಾತನಾಡುವರು 
ವಿಷಾದ ಕೂಪದಲಿ ಮುಳುಗಿಯೂ 
ಮಂದಹಾಸ ತೊರೆಯದಿರು ನೀನು

ನಿರ್ಮಲ ಮನದ ಜನರನ್ನು ಕಾಣಲಾಗದು ಸ್ವಾರ್ಥಿ ಪ್ರಪಂಚದೆ 
ಕೋಮಲ ಹೃದಯ ಚುಚ್ಚುವರು ಜಗಕೆ ಜರಿಯದಿರು ನೀನು 

ರಮ್ಯತೆ ಹಿಂದೆ ಸದಾ ನಿಗೂಢತೆ ಆವರಿಸಿರುವುದು ತಿಳಿದಿಲ್ಲವೇ 
ಸೌಮ್ಯತೆ ನಿಜದ ಆಭರಣ ಸರ್ವದಾ ಮರೆಯದಿರು ನೀನು 

ಸುಜಿಯು ಬರವಣಿಗೆ ಆತ್ಮೋನ್ನತಿಯ ದಾರಿಯೆಂದು ನಂಬಿಹಳು 
ವಿಜಯ ಸಾಧನೆಗೆ ನೇರ ಹಾದಿ ಬಿಡುತ ಸರಿಯದಿರು ನೀನು

****

ಗಝಲ್ ಎರಡು

ಸುಡುವ ಸಂಕಟ ಎದೆಯ ಹಿಂಡಲು 
ಮನಸು ಮುರಿಯದೇ ಸಖಾ 
ಕಾಡುವ ನೆನಪು ಹೃದಯ ದಹಿಸಲು 
ಕಂಬನಿ ಸುರಿಯದೇ ಸಖಾ 

ಮಿಡಿವ ಕರುಳಿದು ಕಾಲನ ತಿವಿತಕೆ 
ಗುರಿಯಾದ ಕಥೆ ಹೇಳಲೇ 
ತುಡಿವ ಜೀವವ ಸತತ ನೋಯಿಸಿರೆ
ವೇದನೆ ಇರಿಯದೇ ಸಖಾ 

ನುಡಿವ ಮಾತದು ಚುಚ್ಚುವ ಶರವಾಗಿ
ವಿಷವ ಲೇಪಿಸಿದೆ ನೋಡು 
ಹಾಡುವ ಕೋಗಿಲೆ ಗೋಣನು ಕೊಯ್ದಿರೆ ಒಡಲು ಉರಿಯದೇ ಸಖಾ 

ಬಾಡುವ ಹೂವಿದು ಸೌರಭ ಸೂಸಿದೆ
ಸಾರ್ಥಕ್ಯ ಲಭಿಸಿದೆ ಜಗದೆ 
ನೋಡುವ ಕಣ್ಣಲ್ಲಿ ಮಾತ್ಸರ್ಯ ಇಣುಕಿರೆ
ಬೆಸುಗೆ ಹರಿಯದೇ ಸಖಾ
 
ನೀಡುವ ಕೈಗಳು ನೂರಿವೆ ಸುಜಿಗೆ ಬಾಳಿನ 
ಬುತ್ತಿಯ ಕೈತುತ್ತನು 
ದೂಡುವ ಕರಗಳೇ ಆಸರೆ ಕೊಡುತಿರೆ ಕಾರ್ಮೋಡ ಸರಿಯದೇ ಸಖಾ

******

ಗಝಲ್ -ಮೂರು

ಹಚ್ಚಿದ ಹಣತೆಯ ಬೆಳಕು ದ್ವೇಷವ ತೊಲಗಿಸಿ ಐಕ್ಯವ ಮೆರೆಸಲಿ ಇಂದು 
ಮುಚ್ಚಿದ ಕತ್ತಲೆಯ ಕೃತಿಮದ ತೆರೆಯ ಸರಿಸಿ ಹೊನಲು ಹರಿಸಲಿ ಇಂದು 

ನೆಚ್ಚಿದ ಸಜ್ಜನತೆ ಸ್ನೇಹವು ಬಾಳಲಿ ದೊರೆಯುತ
ಸುಖವ ತರುತಲಿರಲಿ 
ಹೆಚ್ಚಿದ ಶಾಂತಿಯ ನೆರಳು ಸುತ್ತಲೂ ಪಸರಿಸಿ ನೆಮ್ಮದಿ ಲಭಿಸಲಿ ಇಂದು 

ಆವರಿಸಿದ ತಮಜಾಡ್ಯ ಕರಗಿಹೋಗಲಿ ಜ್ಞಾನದ ಜ್ಯೋತಿಯ ಪ್ರಭಾವದಲಿ
ಆಗಮಿಸಿದ ಹೊಸ ಪ್ರಭಾತ ಕಿರಣ ವರ್ಷದ ಚೇತನ ಸುರಿಸಲಿ ಇಂದು 

ಮನದ ರಿಪುಗಳನು ಸಾತ್ತ್ವಿಕತೆಯು ಎದುರಿಸಿ ದುರ್ಗುಣ ಹರಣವಾಗಲಿ 
ಮನೆಯ ಕತ್ತಲೆಯ ಹೊಂಬೆಳಕು ಓಡಿಸಿ 
ಚೈತನ್ಯ ತರಿಸಲಿ ಇಂದು 

ಬೆಳಗುವ ಹಣತೆಯ ಸಾಲ ಈಕ್ಷಿಸುತಿಹಳು 
ಸುಜಿಯು ಸಂತಸದಲಿ 
ಮೊಳಗುವ ದಿವ್ಯಗೀತೆ ಅಂಗಣದಿ ರಿಂಗಣಿಸಿ ಸರ್ವರ ಹರಸಲಿ ಇಂದು 


ಸುಜಾತಾ ರವೀಶ್ 


One thought on “ಸುಜಾತಾ ರವೀಶ್ ಗಜಲ್ ಗಳು

Leave a Reply

Back To Top