ಗಜಲ್

ಕಾವ್ಯ ಸಂಗಾತಿ

ಗಜಲ್

ಜಯಂತಿ ಸುನಿಲ್

ಎದೆಯೊಳಗೆ ಹೇಳಲಾಗದ ನೋವುಗಳು ಯಾಕಿವೆ..?
ಮನದೊಳಗೆ ಇಂಗಲಾರದ ವೇದನೆಗಳು ಯಾಕಿವೆ..?

ಇಂಚಿಂಚೇ ಕೊಲ್ಲುವ ಯಾತನೆಯ ಬುಗುರಿ ತನ್ನಾಟ ನಿಲ್ಲಿಸುವುದಿಲ್ಲಾ..
ದುಃಖದ ಭಾಗವಾಗಿ ಸಾವು, ನೋವುಗಳು ಯಾಕಿವೆ..?

ಮೌನ ಮಾತನ್ನು ನುಂಗಿದಾಗ ನೆನಪುಗಳ ಸೀಮೆಗೆ ಗಡಿಯಿರುವುದಿಲ್ಲಾ..
ಚಲಿಸದ ಹಾದಿಯಲ್ಲಿ ಕಾಣದ ನಿಲುಗಡೆಗಳು ಯಾಕಿವೆ..?

ಕೊನರಿದ ರೆಕ್ಕೆಯಲ್ಲಿ ಹಾರುವ ಹಕ್ಕಿಯಂತಾದ ಬಾಳು..
ಚೆಂದದ ಭಾಷೆಯಿತ್ತ ಕೈಯಲ್ಲಿ ಅರ್ಥವಾಗದ ರೇಖೆಗಳು ಯಾಕಿವೆ..?

ಹೇಳಲಾಗದ್ದನ್ನು ಹೇಳಿಸಿಕೊಳ್ಳುವ ಹಠದ ಆಕಾರವೇ..
ಒಂಟಿ ರಾತ್ರಿಗಳಲ್ಲಿ ಹೇಳ ಹೆಸರಿಲ್ಲದ ತೀವ್ರ ಸಂವೇದನೆಗಳು ಯಾಕಿವೆ..?

ಮುರಿದ ಚಂದಿರ ಮನದ ಮೂಲೆಗೆ ಸಿಲುಕಿ ಮುಸಿ ಮುಸಿ ನಕ್ಕಂತೆ ಕನಸು..
ಈ ವಿಧೇಯ ಹೃದಯದಲಿ ಹಾಳು ಭರವಸೆಗಳು ಯಾಕಿವೆ?

ನಗುವ ಹೂ ಅತ್ತಾಗ..ಮುಳ್ಳಿಗೂ ವಿರಹದ ಸಂತಾಪ..ಜಯವಿಲ್ಲಾ ಸಸಿಗೆ
ಈ ಭುವಿಯ ಮೇಲೆ ಉತ್ತರ ಸಿಗದ ಪ್ರಶ್ನೆಗಳು ಯಾಕಿವೆ..?


ಜಯಂತಿ ಸುನಿಲ್

2 thoughts on “ಗಜಲ್

Leave a Reply

Back To Top