ಕಾವ್ಯ ಸಂಗಾತಿ
ಮಾಜಾನ್ ಮಸ್ಕಿಯವರ ಗಜಲ್ ಗಳು
ಗಜಲ್-ಒಂದು
ಅಂತರಂಗ ಸ್ತಬ್ದವಾಯಿತು ಲೇಖನಿ ಮೌನವಾದ ಹೊತ್ತು
ಭಾವನೆ ಶೂನ್ಯವಾಯಿತು ಲೇಖನಿ ಮೌನವಾದ ಹೊತ್ತು
ಉಸಿರು ಉಸಿರಾಡುವುದನ್ನು ಮರೆತು ಜಡವಾಯಿತು ದೇಹ
ಕಣ್ಣ ಹನಿ ಹೆಪ್ಪಾಯಿತು ಲೇಖನಿ ಮೌನವಾದ ಹೊತ್ತು
ಸಂಬಂಧಗಳಿಗೆ ಜೋತು ಬಿದ್ದ ಮನ ಸೋಲುವುದು ಏಕೆ
ಮಂಡಿಯೂರಿ ಶರಣಾಯಿತು ಲೇಖನಿ ಮೌನವಾದ ಹೊತ್ತು
ಸೋತ ಕನಸುಗಳು ಮಲಗಿ ಗೋರಿ ಶೃಂಗಾರಗೊಂಡಿತು
ಪೈಶಾಚಿಕ ಕುಣಿತ ಜೋರಾಯಿತು ಲೇಖನಿ ಮೌನವಾದ ಹೊತ್ತು
“ಮಾಜಾ” ಬೆಳೆಯುವ ಮೊಳಕೆಯನ್ನು ಚಿವುಟಿ ನಂಜೇರಿಸುವರು
ಆರೈಕೆಯ ಕೊರತೆಯಾಯಿತು ಲೇಖನಿ ಮೌನವಾದ ಹೊತ್ತು
***
ಗಜಲ್-2
ಕನ್ನಡಿಯ ಬಿಂಬ ನೋಡಿ ನಂಬಬೇಡ ಹೋಗಲಿ ಬಿಡು
ಬಾಹ್ಯ ಸೌಂದರ್ಯ ನೋಡಿ ಹಿಗ್ಗಬೇಡ ಹೋಗಲಿ ಬಿಡು
ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸಿ ಬದುಕುತ್ತಿರುವರು ಜನ
ಆಸೆಯಿಂದ ನಂಬಿ ಮೋಸ ಹೋಗಬೇಡ ಹೋಗಲಿ ಬಿಡು
ನಿಬಿಡ ಜಾತ್ರೆಯಲ್ಲೂ ಒಂಟಿತನ ಕಾಡುತ್ತಿದೆ ಅದೇಕೋ
ಕೊನೆಯೇ ಇಲ್ಲದೆ ಜೊತೆ ಆಗುವರೆಂದು ಭ್ರಮಿಸಬೇಡ ಹೋಗಲಿ ಬಿಡು
ಅವಶ್ಯಕತೆಗೆ ಅಂಟುವರು ಸ್ವಾರ್ಥಿಗಳೆ ಇರುವರು ಎಚ್ಚರ
ಎಲ್ಲರಿಗೂ ನೀ ಮೆಚ್ಚುಗೆ ಎಂದು ಬೀಗಬೇಡ ಹೋಗಲಿ ಬಿಡು
ಅರಿತು ಅರಿಯದಂತೆ ಸಾಗಬೇಕಾಗಿದೆ ಬಾಳಯಾನದಲ್ಲಿ “ಮಾಜಾ”
ಮೋಸದ ಜಾಲ ಹಬ್ಬಿದೆ ಬೀಳಬೇಡ ಹೋಗಲಿ ಬಿಡು
***
ಗಜಲ್-3
ಬಿರು ಬಿಸಿಲಿನಲ್ಲಿ ತಂಗಾಳಿ ಬೀಸಿದೆ ಇನಿಯನ ಸನಿಹ
ಆ ಮಧುರತೆಯು ಮರು ಕಳಿಸದೆ ಇನಿಯನ ಸನಿಹ
ಬೆಂಕಿಯ ಉಂಡೆಯ ತಾಪವ ಸಹಿಸುವೆನು ಗಾಲಿಬ್
ವಿರಹ ವೇದನೆ ಸಹಿಸಲಾರೆನು ಇಲ್ಲದೆ ಇನಿಯನ ಸನಿಹ
ತಿರುಗಿಯೂ ನೋಡದೆ ಖದಮ್ ಅಳಿಸುತ್ತಿವೆ
ಭ್ರಮೆಯ ಇಂತಜಾರಲ್ಲಿ ಬಾರದೆ ಇನಿಯನ ಸನಿಹ
ಹೇಳಲೂ ನುಂಗಲು ಆಗದ ಈ ತಡಪಲ್ಲಿ ಸೋಲುತ್ತಿರುವೆ
ಮನ – ದೇಹದ ರಸಿಕತೆಯೇ ಮರೆಸಿದೆ ಇನಿಯನ ಸನಿಹ
ದಿಲ್ ಮಿಡಿಯುತ್ತಿದೆ “ಮಾಜಾ” ಳ ಭಾವನೆಗಳಲ್ಲಿ
ಖುದಾನ ಬಕಷ್ ಗೆ ಕಾಯುತ್ತಿದೆ ಇನಿಯನ ಸನಿಹ
ಮಾಜಾನ್ ಮಸ್ಕಿ