ಯಾಕಯ್ಯಾ ಹೀಗೆ

ಕಾವ್ಯ ಸಂಗಾತಿ

ಯಾಕಯ್ಯಾ ಹೀಗೆ

ಅನಸೂಯ ಜಹಗೀರದಾರ

ನಿನ್ನ ಕರೆಯ ಸ್ವೀಕರಿಸಿದಾಗೊಮ್ಮೆ
ಕಂಪ್ಲೆಂಟುಗಳ ಸುರಿಮಳೆ
ವಾದ ವಿವಾದ ಅನಗತ್ಯ ವಿಚಾರಣೆ
ಪ್ರೀತಿ ಇದೇ ಆದಲ್ಲಿ…,
ಮನಸ್ತಾಪಕೆಡೆಮಾಡುವುದೇ ಆದಲ್ಲಿ
ಆಡುವೆರಡು ಮಾತು
ನಿಲ್ಲಿಸುವುದೇ ಆದಲ್ಲಿ…
ಯಾಕಯ್ಯಾ ನನಗೆ ಫೋನಾಯಿಸುವೆ…!

ನನಗನ್ನಿಸುತ್ತದೆ..
ಒಂದು ವೇಳೆ ಸುಮ್ಮನಿದ್ದಲ್ಲಿ
ಇರುವಷ್ಟು ಪ್ರೀತಿಯಾದರೂ
ಉಳಿಯಬಹುದಿತ್ತಲ್ಲ..!!

ಈ ಮಣ್ಣ ಹಾದಿಯಲಿ ನಡೆವಾಗಲೆಲ್ಲ
ಮಣ್ಣ ಕಣ ಕಣವ ತುಳಿವಾಗಲೆಲ್ಲ
ಪಾದಗಳಿಗೂ ಎದೆಯ ಪದಗಳಿಗೂ
ಚುಚ್ಚುವ ಮರಳ ಕಣ, ಕಡ್ಡಿ, ಕಲ್ಲು, ಬೋಕಿ ಬಿಲ್ಲೆ
ನೋವೇ ನೋವು ಲೆಕ್ಕಿಸದ ಕಾವು
ಆದಾಗ್ಯೂ
ಅರಳಿದ ಆಶಯದ ಹೂವು
ಬಹು ನಶೆಯ ಘಮಲು
ಆ ಅಮಲು ದಾರಿಯ ಮತ್ತೂ ಸವಿವ ಬಯಕೆ
ತಾಣ ಸೇರಿದಾಗಲೂ ಮುಗಿಯದ ನೆನಿಕೆ

ಸಂಹಾವಲೋಕನದಲಿ ನೀ ನನ್ನ ಹೆಜ್ಜೆ
ಎಣಿಸುವುದೇ ಆದಲ್ಲಿ
ಪದಗಳ ಗಾತ್ರ ಗುನುಗುನಿಸುದೇ ಆದಲ್ಲಿ
ಯಾಕಯ್ಯಾ ನನ್ನ ಹಿಂದೆ ಬರುವೆ..,?

ಬಿಟ್ಟುಬಿಡು ಎಲ್ಲವನು

ಕಣ್ಮುಚ್ಚಿ ಅವಡುಗಚ್ಚಿ ಸಹಿಸುವ
ಇಡಿ ಇಡಿಯಾಗಿ ದಹಿಸುವ
ನೀಲಿ, ಹಳದಿ, ಕೆಂಪು ಅಗ್ನಿಯ ಪ್ರಯೋಗ
ಎಲ್ಲ ಬಗೆಯ ಬಿಸಿಯ ನಖ ಶಿಖಾಂತ ತೂರಿ
ಪರಮ ಪವಿತ್ರವಾಗಿಸಬೇಕು ಜ್ವಾಲೆಯ ಹೀರಿ

ಅನಲನಲಿ ಮಿಂದು ಬಂದ ನಿಂತ ಪರಿಯ
ಬೆಂಕಿಹೊಗೆಯಲಿ ಉಸಿರಾಡಿದ ಬಗೆಯ
ಜಾನಕಿಗೊಂದೇ ಗೊತ್ತು
ಗಹನ ಗಂಭೀರ ಪ್ರಸಂಗ ಕಥೆ
ಅದಕ್ಕೂ ಮುನ್ನ ಸುಟ್ಟಿತ್ತು ಶಂಕೆಯ ವ್ಯಥೆ

ಬೇರೆ ಮಾತಿರಲಿಲ್ಲ
ಯಾವುದೇ ಒಣ ತಕರಾರೂ ನನ್ನಲ್ಲೂ ಇಲ್ಲ

ದಹಿಸದ ಬೆಂಕಿಯ ಲೆಕ್ಕಚಾರವ ನಿನ್ನ ಗಣಿತದಲಿ
ಕೂಡಿ ಕಳೆದು ಗುಣಿಸಿ ಭಾಗಿಸಿ ತರ್ಕಿಸುವುದೇ ಆದಲ್ಲಿ
ಸರಿಯಾದದ್ದನ್ನೇ
ಮತ್ತೊಮ್ಮೆ ಮಗದೊಮ್ಮೆ ತಾಳೆ ನೋಡುವುದೇ ಆದಲ್ಲಿ
ಯಾಕಯ್ಯಾ ಮೊದಲು ಆ ಬೆಂಕಿಯ ನಂಬಿದೆ..??
ಯಾಕಯ್ಯ ಅದ ಪ್ರಕಟಿಸಲು ಕೋರಿದೆ..?
ಯಾಕಯ್ಯಾ ಅನುಮಾನ ಮೂಟೆಯ ಬೆನ್ನಲ್ಲಿ
ಹೊತ್ತು ತಂದೆ..? ಬಿಡದಂತೆ ಹುಡುಕುತ್ತ ಅವಳತ್ತ ಬಂದೆ

ಗಾಳಿ ಮಣ್ಣು ಅಪ್ಪುಆಕಾಶ ಅಗ್ನಿಯ
ಆಸ್ವಾದಿಸುವುದು ತಪ್ಪೆ..??
ಪ್ರಕೃತಿ ಮಡಿಲಲಿ ನಿದ್ರಿಸುವುದೂ ತಪ್ಪೆ..?
ರೇಣುಕೆಯ ಇರಿದ ರೀತಿ ಒಪ್ಪೆ..?

ಅಯ್ಯೋ ಭೂಮಿಜಾತೆಯರು ಅವರು
ಅವರೊಂದಿಗಿದ್ದಾರೆ ಮತ್ತೂ ನಮ್ಮವರು..!!

ಬಿಟ್ಟು ಬಿಡಬೇಕಿತ್ತು ನೀನೂ ಎಲ್ಲವ..!!

ಚಿಟ್ಟೆಯೊಂದು ಕೇಳಿತಂತೆ ಹೂವಿಗೆ
“ನಾ ಹಾರಿಹೋಗುವೆ ಆಗ ನೀ ಏನು ಮಾಡುವೆ”
ಹೂವು ಹೇಳಿತಂತೆ‌…,
“ಅಯ್ಯೋ..! ಸಂಜೆ ದಳ ಉದುರಿಸುವೆ
ನೀನಿದ್ದ ಅಮಲು ದಳಗಳೊಂದಿಗೆ ಮಣ್ಣು ಸೇರಿತು”

ಆದರೆ…,
ನನ್ನಲ್ಲಿ ಬೆಳೆದ ಕಾಯಿ ಹಣ್ಣು ಬೀಜ
ನನ್ನೊಂದಿಗೆ ಇತ್ತು
ಭೂಮಿಗೆ ಬಿದ್ದು ಮೊಳಕೆಯೊಡೆದಿತ್ತು
ಧರೆಗೆ ಹಸಿರಾಯಿತು
ಪಂಚಭೂತದಲಿ ನನ್ನಸ್ತಿತ್ವ ಲೀನವಾಯಿತು..!


ಅನಸೂಯ ಜಹಗೀರದಾರ


Leave a Reply

Back To Top