ಪುಸ್ತಕ ಸಂಗಾತಿ
ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು
ತಮಸೋಮಾ ಜ್ಯೋತಿರ್ಗಮಯ
ತಮಸೋಮಾ ಜ್ಯೋತಿರ್ಗಮಯ _ ಕಿರುಕಾದಂಬರಿ ಲೇಖಕಿ _ ಡಾ ಎಚ್ ಗಿರಿಜಮ್ಮ
ಪ್ರಥಮ ಮುದ್ರಣ .೨೦೧೩
ಪ್ರಕಾಶಕರು _ ಗೀತಾ_ ಸಾಹಿತ್ಯ ಸುಗ್ಗಿ
ಡಾಕ್ಟರ್ ಎಚ್ ಗಿರಿಜಮ್ಮ ಅವರು ಜನಿಸಿದ್ದು ದಾವಣಗೆರೆಯಲ್ಲಿ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದರು. ಚಿಕ್ಕವಯಸ್ಸಿನಲ್ಲಿ ತ್ರಿವೇಣಿಯವರ ಕಾದಂಬರಿಗಳಿಂದ ಪ್ರಭಾವಿತರಾದ ಇವರು ಏನಾದರೂ ಸಾಧನೆ ಗೈಯುವುದಾದರೆ ಸಾಹಿತ್ಯದ ಮೂಲಕ ಎಂಬ ಹಂಬಲದಿಂದ ಸಾಹಿತ್ಯ ಲೋಕಕ್ಕೆ ಅಡಿಯಿಟ್ಟರು. ಇವರ ಮೊದಲ ಕಥೆ “ಹೂ ಬಳ್ಳಿಗೆ ಈ ಆಸರೆ” ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾಯಿತು. ಚಂದಮಾಮ, ಅಂಬರತಾರೆ ತಮಸೋಮಾ ಜ್ಯೋತಿರ್ಗಮಯ ಸೇರಿದಂತೆ ೨೭ ಕಾದಂಬರಿಗಳು ಪ್ರಕಟವಾಗಿವೆ. ಇವರ ಮೇಘಮಂದಾರ ಕಾದಂಬರಿ ಚಲನಚಿತ್ರವಾಗಿದೆ . . ಅರ್ಧಾಂಗಿ ಸಂಜೆಮಲ್ಲಿಗೆ ಅನಾವರಣ ಮೊದಲಾದ ನೀಳ್ಗತೆಗಳು ಮಯೂರದಲ್ಲಿ ಪ್ರಕಟಗೊಂಡಿವೆ. 5 ಕಥಾಸಂಗ್ರಹಗಳು ಹಾಗೂ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಸ್ತ್ರೀ ದೇಹ, ರಕ್ತದ ಕಾಯಿಲೆಗಳು, ಬಸಿರು, ಬಂಜೆತನ ಮತ್ತು ನಿವಾರಣೋಪಾಯಗಳು, ಮಗು ಇತ್ಯಾದಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿಷ್ಟಿತ ಅನುಪಮಾ ಪ್ರಶಸ್ತಿ ,ಬಿ ಸರೋಜಾದೇವಿ ದತ್ತಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ . ಇವರಿಗೆ ರಾಜ್ಯೋತ್ಸವ ಪ್ರಶಸ್ತಿ (೨೦೧೪) ಸಹ ಸಂದಿದೆ. . ತಮ್ಮ ವೃತ್ತಿಯ ಅನುಭವಗಳನ್ನು ಧಾರಾಳವಾಗಿ ಧಾರೆ ಎರೆದಿರುವ ಇವರ ಕಥೆಗಳು ವಿಭಿನ್ನ ಶೈಲಿ ಪಾತ್ರ ವೈವಿಧ್ಯಗಳೊಂದಿಗೆ ಜನಮಾನಸವನ್ನು ಆಕರ್ಷಿಸಿವೆ. ಇತ್ತೀಚೆಗೆ ಬಿಡುಗಡೆಯಾದ ಇವರ ಆತ್ಮಚರಿತ್ರೆ “ಕಾಡತಾವ ನೆನಪುಗಳು” .
ತಮಸೋಮಾ ಜ್ಯೋತಿರ್ಗಮಯ ಮತ್ತು ಪ್ರಿಯಾ ಎಂಬ 2 ಕಿರು ಕಾದಂಬರಿಗಳ ಸಂಗ್ರಹ ಇದು. ಮುನ್ನುಡಿಯಲ್ಲಿ ಲೇಖಕಿ ಅವರೇ ಹೇಳುವಂತೆ ಅವರ ವೃತ್ತಿ ಜೀವನದಲ್ಲಿ ಎದುರಾದ ಎಷ್ಟೋ ಅತ್ಯಾಚಾರದ ಕೇಸ್ ಗಳು ಹಾಗೂ ವರದಕ್ಷಿಣೆ ಕೇಸ್ ಗಳು ವಿವಿಧ ಕಾರಣಗಳಿಂದ ಮುಚ್ಚಿಹೋಗಿ ಅವರಿಗೆ ಹತಾಶೆ ನಿರಾಶೆ ತರುತ್ತಿದ್ದವಂತೆ. ಹಾಗಾಗಿ ಸೂಕ್ತ ವೈದ್ಯಕೀಯ ಮಾಹಿತಿ ಹಾಗೂ ಸಾಕ್ಷಿ ಮತ್ತು ಸಾಕ್ಷ್ಯಗಳ ಬಗ್ಗೆ ವಿಸ್ತೃತ ವಿವರಣೆ ಕೊಡಲು ಲೇಖನಕ್ಕಿಂತ ಕಾದಂಬರಿ ಸೂಕ್ತ ಎಂದು ಪೊಲೀಸ್ ಇಲಾಖೆಯವರು ಹಾಗೂ ಖ್ಯಾತ ವಕೀಲರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಸಾಕಷ್ಟು ಹೋಂವರ್ಕ್ ಮಾಡಿ ಈ ಕಾದಂಬರಿಯನ್ನು ಬರೆದಿದ್ದಾರೆ.
ಅತ್ಯಾಚಾರ ಮಾನವ ಸಮಾಜಕ್ಕಂಟಿದ ಕಂಟಕ. ಹೆಣ್ಣಿನ ಮೇಲೆ ನಡೆಸುವ ಇಂತಹ ದೌರ್ಜನ್ಯಗಳು ಕಾಮುಕರ ಕೆಲ ನಿಮಿಷದ ಸುಖ ಎಷ್ಟೋ ಹೆಣ್ಣುಗಳ ಜೀವನವನ್ನೇ ಮಣ್ಣುಪಾಲಾಗಿಸಿವೆ. ಅತ್ಯಾಚಾರಿಗಳು ಸಿಕ್ಕರೂ ಶಿಕ್ಷೆಯಾಗದೆ ಮುಂದೂ ತಪ್ಪಿಸಿಕೊಳ್ಳಬಹುದೆಂಬ ನಿರ್ಭಯತೆ ಮತ್ತಷ್ಟು ಇಂತಹ ಪ್ರಕರಣಗಳಿಗೆ ಕುಮ್ಮಕ್ಕು ಕೊಡುತ್ತದೆ . ಮಾನ ಮರ್ಯಾದೆಯ ದೃಷ್ಟಿಯಿಂದ ಎಷ್ಟೋ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ ದೂರುಗಳು ದಾಖಲಾಗುವುದಿಲ್ಲ. ಕೆಲವೊಮ್ಮೆ ದೂರು ದಾಖಲಾದರೂ ನಂತರ ಹೆದರಿಸಿಯೋ ಹಣದಾಸೆ ತೋರಿಸಿಯೋ ದೂರು ಹಿಂತೆಗೆದುಕೊಳ್ಳುವಂತಹ ಪ್ರಸಂಗಗಳು . ಇಷ್ಟೆಲ್ಲಾ ಮೀರಿ ಕೋರ್ಟಿಗೆ ಬಂದರೂ ಅಲ್ಲಿ ಲಾಯರುಗಳ ಪಾಟೀಸವಾಲಿನಲ್ಲಿ ಮತ್ತೆ ಮುಜುಗರ ಮಾನಹಾನಿ. ಹೀಗಾಗಿ ತಪ್ಪಿತಸ್ಥರಿಗೆ ಅನುಕೂಲಸಿಂಧು ಆಗಿರುವಂತಹ ವ್ಯವಸ್ಥೆಯಲ್ಲಿ “ನ್ಯಾಯ ಎಲ್ಲಿದೆ” ಎಂದು ಕಣ್ಣು ಕಟ್ಟಿಕೊಂಡು ಕಾಡಿನಲ್ಲಿ ಹುಡುಕುವಂತಾಗುತ್ತದೆ .
ಈ ಕಾದಂಬರಿಯ ಗೌತಮಿ ಅಪಘಾತವೊಂದರಲ್ಲಿ 2 ಕಣ್ಣು ಕಳೆದುಕೊಂಡು ನಂತರದ ಚಿಕಿತ್ಸೆಗೆ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಹದಿನೇಳು ವರ್ಷದ ತರುಣಿ . ತಾಯಿಯೊಂದಿಗೆ ಇದ್ದರೂ ವಿದ್ಯುತ್ ಇರದ ಸಂದರ್ಭದಲ್ಲಿ ಅವಳನ್ನು ಬೇರೆಡೆಗೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿರುತ್ತಾರೆ. ನಂತರ ಅವಳನ್ನು ಗೈನಿಕ್ ವಾರ್ಡಿಗೆ ತಂದಾಗ ಅಲ್ಲಿದ್ದ ಸ್ತ್ರೀರೋಗತಜ್ಞ ಅಂಜಲಿ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಲ್ಲಾ ವಿಷಯಗಳನ್ನು ಕೂಲಂಕಷವಾಗಿ ಬರೆದಿಡುತ್ತಾಳೆ. ಆ ಎಳೆ ಹುಡುಗಿಯ ಮೇಲಾಗಿರುವ ಕ್ರೂರತನದ ದೌರ್ಜನ್ಯವನ್ನು ಕಂಡು ಮಮ್ಮಲ ಮರುಗುತ್ತಾಳೆ . . ಮೇಲಧಿಕಾರಿಗಳು ಹಾಗೂ ನೇತ್ರವಿಭಾಗದ ಮುಖ್ಯಸ್ಥ ವೈದ್ಯ ರಂಗರಾಜು ಆಸ್ಪತ್ರೆಯ ಹಿತದೃಷ್ಟಿಯಿಂದ ಮೆಡಿಕೋ ಲೀಗಲ್ ಕೇಸ್ ಮಾಡಬೇಕಂತೆ ಕೇಳಿಕೊಂಡರೂ ಅವರುಗಳ ಒತ್ತಡಕ್ಕೆ ಮಣಿಯದ ಡ್ಯೂಟಿ ಡಾಕ್ಟರ್ ಕರುಣಾಕರ್ ಕೇಸನ್ನು ಪೊಲೀಸರಲ್ಲಿ ದಾಖಲಿಸುತ್ತಾರೆ . ಆಸ್ಪತ್ರೆಯ ಬೀಗದ ಗೊಂಚಲನ್ನು ಡಾಕ್ಟರ್ ರಂಗರಾಜು ಕಡೆಯಿಂದ ಜನಾರ್ದನ ಎಂಬ ವಾರ್ಡ್ ರಾಯ್ ಪಡೆದಿರುತ್ತಾನೆ. ಅದು ಘಟನೆ ನಡೆದ ಜಾಗದಲ್ಲಿ ಸಿಗುತ್ತದೆ. ಆದರೆ ಡಾಕ್ಟರ್ ಅದನ್ನು ಪೊಲೀಸರಿಗೆ ತಿಳಿಸದೆ ಮುಚ್ಚಿಡುತ್ತಾರೆ .ಕಲ್ಯಾಣಿ ಎಂಬ ಲಾಯರ್ ಗೆಳತಿಯ ಸಹಾಯದಿಂದ ಡಾಕ್ಟರ್ ಅಂಜಲಿ ಕೇಸನ್ನು ಬೇಧಿಸತೊಡಗುತ್ತಾಳೆ .ಪಾರ್ಶ್ವವಾಯು ಪೀಡಿತ ತಂದೆ ವಿದೇಶದಲ್ಲಿದ್ದ ಅಣ್ಣ ಇವರ ಗಮನಕ್ಕೆ ತಾರದೆ ಗೌತಮಿ ಮತ್ತು ಅವಳ ತಾಯಿ ಅನ್ನಪೂರ್ಣ ಕೋರ್ಟಿಗೆ ಬರುತ್ತಾರೆ . ಅಷ್ಟರಲ್ಲಿ ಜನಾರ್ಧನ ಪೊಲೀಸರ ಬಳಿ ತಪ್ಪೊಪ್ಪಿಕೊಂಡು ಶರಣಾಗಿರುತ್ತಾನೆ . ಆದರೆ ಕೇಸ್ ನಡೆಯುವಾಗ ಗೌತಮಿ ಜನಾರ್ದನನ ಬಳಿ ಹೋಗಿ ಮುಟ್ಟಿ ನೋಡಿ ಅವನ ಲ್ಲವೆಂದು ಹೇಳುವುದರಿಂದ ಮತ್ತೆ ಅಪರಾಧಿ ಯಾರೆಂದು ತಿಳಿಯದ ಗೊಂದಲ ಸ್ಥಿತಿ ಏರ್ಪಡುತ್ತದೆ. ನಿಜವಾದ ಅಪರಾಧಿ ಯಾರು ಅವನು ಸಿಗುತ್ತಾನೆಯೇ ಎಂದು ತಿಳಿಯಲು ಪ್ಲೀಸ್ ಕಥೆ ಓದಿ.
ಇಲ್ಲಿ ನ್ಯಾಯಪರರಾದ ಡಾಕ್ಟರ್ ಕರುಣಾಕರ್ ಹಾಗೂ ಅಂಜಲಿಯ ಪಾತ್ರಗಳು ಮನಸೆಳೆಯುತ್ತವೆ . ದಿಕ್ಕು ಕಾಣದೆ ಹತಾಶರಾಗಿ ಹಿಂದಡಿ ಇಟ್ಟಿದ್ದ ಗೌತಮಿ ಮತ್ತು ಅವಳ ತಾಯಿಯನ್ನು ಅತ್ಯಾಚಾರಿಗೆ ಶಿಕ್ಷೆ ಕೊಡಿಸಿ ಎಂದು ಪ್ರೇರೇಪಿಸುವುದು ಅವರಿಗೆ ಬೆಂಗಾವಲಾಗಿ ನಿಲ್ಲುವುದು ಅಂಜಲಿಯ ವ್ಯಕ್ತಿತ್ವದ ಚಿತ್ರಣ ನೀಡುತ್ತದೆ ಗೌತಮಿಗೆ ಸೂಕ್ತ ಆತ್ಮವಿಶ್ವಾಸ ತುಂಬಿಸಿ 1 ಇಂದ್ರಿಯ ಇಲ್ಲದಿದ್ದರೇನು ಉಳಿದ ಇಂದ್ರಿಯಗಳನ್ನು ಶಕ್ತಿಯುತವಾಗಿ ಉಪಯೋಗಿಸು ಎಂದು ಮಾರ್ಗದರ್ಶನ ನೀಡುವುದು ಕಡೇವರೆಗೂ ನ್ಯಾಯ ದೊರಕಿಸಲು ಹೋರಾಡುವುದು ಶ್ಲಾಘನೀಯ .ಸಾಕ್ಷ್ಯಗಳು ನಾಶವಾಗದಂತೆ ವ್ಯವಸ್ಥಿತವಾಗಿ ಇಡುವುದು ಪ್ರಶಂಸನಾರ್ಹ. ಅವಳಿಗೆ ಪೂರ್ಣ ಸಹಕಾರ ನೀಡಿ ತನ್ನ ಕ್ರಿಮಿನಲ್ ಲಾಯರ್ ಬುದ್ಧಿಯಿಂದ ಸಹಾಯಮಾಡುವ ಕಲ್ಯಾಣಿಯ ಪಾತ್ರವೂ ಔಚಿತ್ಯಪೂರ್ಣ. ಚಲನಚಿತ್ರಗಳಲ್ಲಿ ಮುಜುಗರ ಉಂಟುಮಾಡುವ ಕೋರ್ಟ್ ಸೀನ್ ಗಳನ್ನು ಲಾಯರ್ ಗಳ ಪ್ರಶ್ನೆಗಳನ್ನು ನೋಡಿ ಏನೋ 1 ಚಿತ್ರಣ ಮೂಡಿರುತ್ತದೆ. ಆದರೆ ಅದು ಪೂರ್ಣ ಸತ್ಯವಲ್ಲ “ಇನ್ ಕ್ಯಾಮೆರಾ ಪ್ರೊಸೀಡಿಂಗ್ಸ್” ವಿಧಾನದಲ್ಲಿ ಸಂಬಂಧಿಸಿದವರು ಮಾತ್ರ ಇರುತ್ತಾರೆ ಎಂಬುದನ್ನು ಮತ್ತು ಆ ಸಮಯದ ಸಾಕ್ಷ್ಯಗಳನ್ನು ಹೇಗೆ ಪರೀಕ್ಷಿಸಿ ಸಂರಕ್ಷಿಸಿ ಇಡಬೇಕೆಂಬುದನ್ನು ಹೆಚ್ಚು ಒತ್ತುಕೊಟ್ಟು ನಿರೂಪಿಸಿದ್ದಾರೆ. ಕುತೂಹಲಕಾರಿ ಕಥೆಯನ್ನು ಮಾಹಿತಿಪೂರ್ಣವಾಗಿ ತುಂಬಾ ಸುಂದರವಾಗಿ ಹೆಣೆದಿದ್ದಾರೆ . ಈ ಮುಂಚೆ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿದ್ದಾಗ ಸಾಕಷ್ಟು ಕುತೂಹಲ ಕೆರಳಿಸಿದ್ದ ಕಥೆ ಇದು .ಬಹಳ ದಿನಗಳ ನಂತರ ಎರಡನೆಯ ಓದು
ಇನ್ನು ಪ್ರಿಯಾ ದೂರದೂರಿನಲ್ಲಿ ವೈದ್ಯ ಶಿಕ್ಷಣ ಮುಗಿಸಿ ವಾಪಸ್ಸು ಬರುತ್ತಾಳೆ. ಸ್ವಲ್ಪ ವರ್ಷದ ಹಿಂದೆ ತಾಯಿಯ ದುರ್ಮರಣ ವಾಗಿರುತ್ತದೆ. ದುಃಖತಪ್ತ ತಂದೆ ಕ್ರಿಮಿನಲ್ ಲಾಯರ್ . ಇವಳನ್ನು ವಿವಾಹವಾಗಲು ತಾಯಿಯ ತಮ್ಮ ಪೊಲೀಸ್ ಇನ್ಸ್ ಪೆಕ್ಟರ್ ಅರ್ಜುನ್ ಕಾಯುತ್ತಿರುತ್ತಾನೆ. ವರದಕ್ಷಿಣೆ ಕಿರುಕುಳದ 1 ಕೊಲೆಯ ಕೇಸನ್ನು ಆತ್ಮಹತ್ಯೆಯೆಂದು ವರದಿ ಮಾಡುವಂತೆ ಮೇಲಧಿಕಾರಿ ಹಾಗೂ ಅರ್ಜುನರಿಂದ ಒತ್ತಡ ಬರುತ್ತದೆ. ಮಣಿಯದ ಇವಳು ಸಾಕ್ಷ್ಯಗಳನ್ನು ಸಮರ್ಥವಾಗಿ ನಿರೂಪಿಸಿ ಅದನ್ನು ಕೊಲೆ ಎಂಬ ವರದಿ ಕೊಡುತ್ತಾಳೆ. ಕೋರ್ಟಿನಲ್ಲಿ ಸಾಕ್ಷಿ ಹೇಳಲು ಬಂದಾಗ ಇವಳ ತಂದೆಯೇ ವಿರೋಧಿ ಲಾಯರ್ ಪರಾಮರ್ಶೆ ಅಕ್ಷರಲೋಕದ ಅವಲೋಕನ ನೋಟ ಮೂಡಿಬಂದ ಬೆಳಕು ಕಾದಂಬರಿಯ ಲೇಖಕಿ ಉಷಾ ನವರತ್ನರಾಮ್ ಪ್ರಥಮ ಮುದ್ರಣ ಪ್ರಕಾಶಕರು ಓಂಶಕ್ತಿ ಪ್ರಕಾಶನ ಅಂದಿಗೂ .ಸೂಕ್ತ ಸಾಂದರ್ಭಿಕ ಸಾಕ್ಷ್ಯ (ಅಲಿಬಿ) ಇಲ್ಲದೆ ಅದು ಕೊಲೆ ಎಂದು ಸಾಬೀತಾಗುವುದಿಲ್ಲ . ಮತ್ತೊಂದು ಪ್ರಕರಣದಲ್ಲಿ ಪೋಲಿಸರು ಹಿಂಸಿಸಿದ ರೌಡಿಯನ್ನು ಇವಳು ವಹಿಸಿಕೊಂಡು ವರದಿ ಕೊಡುತ್ತಾಳೆ. ಅದರಿಂದ ಅವಳು ಅರ್ಜುನನ ಹಾಗೂ ತನ್ನ ಇಲಾಖೆಯ ಮೇಲಧಿಕಾರಿಗಳ
ವೈಷಮ್ಯ ಕಟ್ಟಿಕೊಳ್ಳಬೇಕಾಗುತ್ತದೆ . ವೃತ್ತಿಜೀವನದಲ್ಲಿ ಇಷ್ಟೆಲ್ಲಾ ಎಡರುತೊಡರುಗಳು ಅರ್ಜುನ್ ನ ಅಸಮಾಧಾನ ತಂದೆಯ ವಿಚಿತ್ರ ವರ್ತನೆ ಇವಳಿಗೆ
ಆತಂಕವನ್ನು ಉಂಟುಮಾಡುತ್ತದೆ. ರಾತ್ರಿಯಲ್ಲಿ ಮನೆಯ ಹಿಂದೆ ಕೇಳಿಬರುವ ಅಳುವಿನ ದನಿ ಅವಳಲ್ಲಿನ ಪತ್ತೇದಾರಿ ಪ್ರವೃತ್ತಿಯನ್ನು ಎಚ್ಚರಿಸುತ್ತದೆ. ಅವಳ ಈ ಕೆಲಸದಲ್ಲಿ ಸಫಲಳಾಗುತ್ತಾಳೆಯೇ? ಆ ದನಿ ಯಾರದು? ಏನಾಯಿತು ಎಂದು ತಿಳಿಯಲು ಖಂಡಿತ ಪುಸ್ತಕ ಓದಿ . ಇದು ಮಯೂರದಲ್ಲಿ ನೀಳ್ಗತೆಯಾಗಿ ಪ್ರಕಟಗೊಂಡಿತ್ತು ಮಾನವ ಸ್ವಭಾವಗಳವಿಕ್ಷಿಪ್ತತೆ, ಊಹಿಸಲೂ ಆಗದ ನಡೆಗಳ ಮತ್ತು ಮನುಷ್ಯರ ವಿವಿಧ ಮುಖವಾಡಗಳ ಅನಾವರಣವನ್ನು ಕುತೂಹಲಕಾರಿ ರೀತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಪ್ರಾರಂಭಿಸಿದರೆ ಮುಗಿಯುವವರೆಗೂ ಕೆಳಗೆ ಇಡಲಾಗದಷ್ಟು ರೋಚಕ ಕಥಾನಕ. ಇವರ ಬರಹಗಳಲ್ಲಿ ಅಂತಃಕರಣದ ತುಡಿತವಿದೆ , ಸಮಾಜಮುಖಿ ಸಂವೇದನೆಗಳಿವೆ . ಪಾತ್ರಗಳು ನಾವು ನೀವೇ ಆಗಿರಬಹುದು ಅಥವಾ ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳಾಗಿರಬಹುದು. ಹಾಗಾಗಿ ಒಂದು ರೀತಿಯ ಆಪ್ತತೆಯನ್ನು ಬೆಳೆಸುತ್ತಾ ಹೋಗುತ್ತದೆ. ಕಥೆಯಲ್ಲಿ ತಲ್ಲೀನರಾಗಿಸುತ್ತದೆ . ಜತೆಜತೆಗೆ ಬದ್ದತೆ ಬಾಧ್ಯತೆ ಸಾಮಾಜಿಕ ಕಳಕಳಿಗಳನ್ನು ಜಾಗೃತಗೊಳಿಸುತ್ತಾ ಹೋಗುವ ಇವರ ಸೃಜನಾತ್ಮಕತೆಗೆ ಒಂದು ದೊಡ್ಡ ಸಲ್ಯೂಟ್
.
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು