ಕಾವ್ಯ ಸಂಗಾತಿ
ಗಝಲ್
ಆಸೀಫಾ
ಸಂಗಾತಿಯಲ್ಲ ಸಂಪ್ರೀತಿಯಲ್ಲ ಆದರೂ ಸುಂದರೀ ಎಂದ
ಕಂಡಿದ್ದೂಅಲ್ಲ ಸೊಲ್ಲಿದ್ದೂ ಅಲ್ಲ ಆದರೂ ಸುಂದರೀ ಎಂದ
ಸೋಗೆಯ ಗರಿಯಲ್ಲಿ ಹೆಸರು ಬರೆದು ಉಸಿರೆಂದು ನುಡಿದ
ಒಡನಾಡಿಯಲ್ಲ ಒಡನಾಟವಿಲ್ಲ ಆದರೂ ಸುಂದರೀ ಎಂದ
ಕಾಮನಬಿಲ್ಲ ಮೇಲೆ ಕೂರಿಸಿ ಹೃದಯವನ್ನೇ ಬಿಚ್ಚಿಟ್ಟುಬಿಟ್ಟ
ಕೈಹಿಡಿಯಲಿಲ್ಲ ಕೂಗಿ ಕರೆಯಲಿಲ್ಲ ಆದರೂ ಸುಂದರೀ ಎಂದ
ಕದವನ್ನು ತಟ್ಟಿ ಮಾತಿಂದ ಕಟ್ಟಿ ತುಟಿಬಿಚ್ಚಿ ಹೇಳಿಯೇಬಿಟ್ಟ
ಕಣ್ಣೋಟ ಕೂಡಿಲ್ಲ ಕದ್ದು ಕದ್ದು ನೋಡಿಲ್ಲ ಆದರೂ ಸುಂದರೀ ಎಂದ
ಕಂದೀಲು ಹಿಡಿದು ಕತ್ತಲೆಯ ಕಡೆದು ಕನ್ನಡಿಯ ಮುಂದಿರಿಸಿದ
ಕನಸಲ್ಲಿ ಬಂದಿಲ್ಲ ಕನವರಿಸಿ ಎದ್ದಿಲ್ಲ ಆದರೂ ಸುಂದರೀ ಎಂದ
ನಗುವಚೆಲ್ಲಿ ಮಲ್ಲಿಗೆಯರಳಿಸಿ ಒಲವ ಗಂಧ ಚೆಲ್ಲಾಡಿದ
ಹೂ ಮುಡಿಸಲಿಲ್ಲ ಮುಂಗುರುಳು ಸವರಲಿಲ್ಲ ಆದರೂ ಸುಂದರೀ ಎಂದ
ವಾದಕ್ಕೆ ವಾದ ಬದಲಾಗದ ನಿರ್ಧಾರ ಇವ ಆಸೀಯ ಸರದಾರ
ಒಲವಲ್ಲಿ ಮಿಂದಿಲ್ಲ ನೆನಪಲ್ಲಿ ನೆಂದಿಲ್ಲ ಆದರೂ ಸುಂದರೀ ಎಂದ