ಕಾವ್ಯ ಸಂಗಾತಿ
ಗಜಲ್
ಅನಸೂಯ ಜಹಗೀರದಾರ
ಮನಸಾರೆ ಅಳಲು ಕತ್ತಲಲ್ಲಿನ ಜಾಗವೊಂದು ಬೇಕಿದೆ
ನನ್ನಳಲಿನ ಮುಖ ಹುದುಗಿಸಲು ನಿನ್ನೆದೆಯ ತಾಣವೊಂದು ಬೇಕಿದೆ.
ಕೂಗುತ್ತಲಿದ್ದಾರೆ ಕೇಳುವವರಿಲ್ಲ ಜಾಣ ಕಿವುಡರು
ನನ್ನ ಕೂಗಿಗೆ ಪ್ರತಿಕೂಗಿನಲಿ ಉತ್ತರಿಸುವ ಮಾರ್ದನಿಯೊಂದು ಬೇಕಿದೆ.
ಹತಾಶೆಯಲಿ ದಿನಗಳೆಯುವ ಕಣ್ಣೀರಲಿ ಕೈ ತೊಳೆವ ನಿಟ್ಟುಸಿರುಗಳಿವೆ
ನನ್ನ ಮುಖವೆತ್ತಿ ಹರಿದ ಕಣ್ಣೀರ ಪಸೆ ಒರೆಸುವ ಕರವೊಂದು ಬೇಕಿದೆ.
ಆಕಾಶವ ನೋಡಬೇಕಿದೆ ಕತ್ತೆತ್ತಿ ಪಕ್ಷಿಗಳ ಕಲರವ ಕೇಳಬೇಕಿದೆ
ನನ್ನೆದೆಯ ಇನಿರವ ಲಕ್ಷಿಸಿ ಕೇಳುವ ಕಿವಿಯೊಂದು ಬೇಕಿದೆ.
ಬೆಚ್ಚಗಿನ ಪ್ರೀತಿಗಾಗಿ ಹಾತೊರೆಯುವ ಕಾತರದ ತುಡಿತ ಯಾರಿಗಿಲ್ಲ
ಮೈಮನ ಮರೆಸುವ ಬೆಚ್ಚಗಿನ ನಿನ್ನ ಗಾಢಾಲಿಂಗನವೊಂದು ಬೇಕಿದೆ.
ಸವೆದು ಗಂಧವಾದವರು ಉರಿದು ಬೆಳಕಾದವರು ಈ ಜಗದಲಿರುವರು
ನಿನ್ನಲ್ಲಿ ಮಿಲಿತವಾಗಿ ಕರ್ಪೂರದಂತೆ ಉರಿದು ಇಲ್ಲವಾಗುವ ವಿಲೀನತೆಯೊಂದು ಬೇಕಿದೆ.
ತುಂಬಾ ಚೆನ್ನಾಗಿದೆ ಮೇಡಂ
Thank you sir..!!