ಕಾವ್ಯ ಸಂಗಾತಿ
ಆಯಾಸ ಕಾಣದ ದೊರೆ
ಡಾ.ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ನಾನು ಕುಣಿದಾಡುವ ಹೊತ್ತಿಗೆ
ಕತ್ತಲ ಚರಿತೆಯ ಹೊತ್ತು
ಕಾಯ್ಗಟ್ಟಿ,ಹುರಿಗಟ್ಟಿ
ಎದೆಗೂಡಿನ ತಿದಿಯಾಗಿ
ಬಡತನ ನೀಗಲು ಸಮರ ಸಾರಿದ್ದ.
ನಾನು ನಗಾಡುವ ಹೊತ್ತಿಗೆ
ಬಿಸಿಲಲಿ ದಣಿದು,
ನೋವುಂಡು,ಮೌನ ಹೊದ್ದು
ಹಸಿವಿನ ಒಡಲ ಕಡಲ ಮೊರೆತಗಳ
ಹಿಡಿತ ಸಾಧಿಸಿಬಿಟ್ಟಿದ್ದ ಅಪ್ಪ
ನಾನು ಪ್ರಶ್ನೆ ಕೇಳುವ ಹೊತ್ತಿಗೆ
ಕರಿಮೋಡದ ನೆರಳು ದಾಟಿ
ಭೂಮಂಡಲ ತಿರುಗಿ,
ಆಗಸವಳೆದು
ಹಮ್ಮು-ಬಿಮ್ಮಲ್ಲೊಂದು
ಬಿಂದು ಮೂಡಿಸಿಬಿಟ್ಟಿದ್ದ ಅಪ್ಪ
ನಾನು ಕೋಗಿಲೆಯಾಗುವ ಹೊತ್ತಿಗೆ,ಬಾಳ ಹಾದಿಗೆ-
ದೀವಿಗೆಯಾಗಿ
ನಗುವ ಪಲ್ಲವಿಯಾಗಿ
ಝೇಂಕಾರದ ಸಾವಿರ ತಂತಿ ಮೀಟಿ,ಸಪ್ತ ಸ್ವರಗಳ-
‘ಲಯ’ ಕಂಡುಬಿಟ್ಟಿದ್ದ ಅಪ್ಪ
ನಾನು ಅಪ್ಪನಾಗುವ ಹೊತ್ತಿಗೆ,
ಹಸಿರು ಮೂಡಿಸಿ,ಬೆಳಕ ಹರಿಸಿ,ಹೃದಯ ಕರಗಿ ಹಗುರೆನಿಸಿ,
ತೃಪ್ತಿಯಲಿ ನಗಲು,
ಕಣ್ಣ ತುಂಬ ಹೊನಲು ತುಂಬಿದ್ದ
ಮೊನ್ನೆ ಇದ್ದಕ್ಕಿದ್ದ ಹಾಗೆ
ಏನೋ…ನೆಪ್ಪು…
ಅಪ್ಪ ಕಡಲಾಗಿ ಕಂಡ
ಸಾಗರವಾಗಿ ಬಂದ
ಅಯ್ಯೋ…ಅಪ್ಪಾ!…ಅಪ್ಪಾ!
ನಿದ್ದೆಗಣ್ಣಿಂದ ಎದ್ದೆ
ನಕ್ಷತ್ರವೊಂದು ಬೀಳುತ್ತಿತ್ತು
ನನ್ನ ಕಣ್ಣಂಚು ಒದ್ದೆಯಾಗಿತ್ತು
ಅಪ್ಪನ ನೆಪ್ಪು ಕಾಡಿತ್ತು
ಅಪ್ಪನ ಕಡೆಗಣಿಸಿ ಬದುಕಲು ಬದುಕುವ ಜೀವ…ಕೊನೆಗಾಲದಲ್ಲಿ ತನಗೂ ಹೀಗೆ ಆಗಬಹುದೆಂಬ ಕಲ್ಪನೆ ಬಂದರೆ ಅಪ್ಪನ ತ್ಯಾಗ ಅರಿವಾಗುವುದು….ಸುಂದರ ಕವಿತೆ…ಮನೋಜ್ಞವಾಗಿ ಮೂಡಿಬಂದಿದೆ…