ಅಪ್ಪನ ದಿನದ ವಿಶೇಷ

ಕಾವ್ಯ ಸಂಗಾತಿ

ಅಪ್ಪ

ಎ ಎಸ್. ಮಕಾನದಾರ

ಜೀವನದುದ್ದಕ್ಕೂ ತನ್ನ ಗುಡಿಸಲಿನ
ಚಿಮಣಿಗೆ ಎಣ್ಣಿ ಹಾಕದೆ
ನಿತ್ಯ ಹಲವು ಮೆರವಣಿಗೆಗಳಲಿ
ಹಿಲಾಲು ಹಿಡಿಯುತ್ತಿದ್ದ ನನ್ನಪ್ಪನ ಮೈ ತುಂಬಾ ಗುಲಾಲು

ಕೈಯಲ್ಲಿ ಪ್ರಜ್ವಲಿಸುವ ಹಿಲಾಲು
ಮೆರವಣಿಗೆ ಅಡ್ಡಪಲ್ಲಕ್ಕಿ
ಶವ ಸಂಸ್ಕಾರಕೂ ನನ್ನಪ್ಪನದೇ ಹೆಗಲು

ಕಣ್ಣಲ್ಲಿ ಸೂರ್ಯನ ಅಡಗಿಸಿಕೊಂಡು
ಎದೆಯ ಮೇಲೆ ಬುದ್ಧನ ಮಲಗಿಸಿಕೊಂಡು
ಅಂಗೈಯಲ್ಲಿ ಜಪಮಾಲೆ ಹಿಡಿದು ಜೋಗುಳ ಹಾಡಿದವ ನನ್ನಪ್ಪ
ಲೆಕ್ಕವಿರದ ನಕ್ಷತ್ರಗಳಿಗೆ ಜೋಪಡಿಗೆ ಆಮಂತ್ರಿಸಿ
ಬಡತನವೆಂಬ ಬೇತಾಳನ ಗೆಳೆತನ ಬಿಡದ ನನ್ನಪ್ಪ

ಮೆರವಣಿಗೆಯಲಿ ಹಿಲಾಲ್ ಹಿಡಿದು
ಹಿಡಿಕಾಳು ತಂದಾನು ಕತ್ತಲೆಯಲಿ ಶೋಕಿಸುವ ಜೋಪಡಿಯಲ್ಲಿ ಪಣತಿ ಬೆಳಗಿಸಿಯಾನು
ಅಂದುಕೊಂಡೆ ಶಬರಿ ವೃತ ಪಾಲಿಸಿದ್ದಳು ನನ್ನವ್ವ

ಮೆರವಣಿಗೆಯಲಿ ತೂರುವ ಚುರುಮರಿ ಕಾಳುಗಳನ್ನು ಕೋಳಿ ಮರಿಯಂತೆ ಹೆಕ್ಕುವ ಮಕ್ಕಳು
ಧರ್ಮದ ಅಮಲಿನಲ್ಲಿ ಜೈಕಾರ ಹಾಕುತ್ತಾ
ರಕ್ತಜಿನುಗಿಸಿದವರೇಷ್ಟೋ
ರಂಗೋಲಿ ಚಿತ್ತಾರವಾ ಕಂಡು
ಖುಷಿ ಪಟ್ಟವರೇಷ್ಟೋ ?
ಸಿಗುತ್ತಿಲ್ಲ ತೇರಿಜಿಗೆ !


One thought on “ಅಪ್ಪನ ದಿನದ ವಿಶೇಷ

  1. ಅಪ್ಪನ ಕುರಿತಾದ ಕವಿತೆ ಮನ ತಟ್ಟಿತು ಸರ್

Leave a Reply

Back To Top