ಲೇಖನ ಸಂಗಾತಿ
ಹಸಿವು ಸಂಬಂಧಗಳ ಹದ ತಪ್ಪಿಸುತ್ತದೆ.
ಸ್ಮಿತಾಭಟ್
ಈ ಜಗತ್ತಿನಲ್ಲಿ ತುತ್ತು ಅನ್ನಕ್ಕೋಸ್ಕರ ಪ್ರತಿಯೊಬ್ಬರೂ ಎಷ್ಟೆಲ್ಲ ಕಷ್ಟ ಪಡ್ತಾರೆ.ನೊಂದುಕೊಳ್ಳುತ್ತಾರೆ. ಬೇಡುತ್ತಾರೆ, ಕಣ್ಣೀರು ಹಾಕ್ತಾರೆ ಕೇವಲ ಒಪ್ಪೊತ್ತಿನ ಊಟಕ್ಕೋಸ್ಕರ ಕೆಟ್ಟ ಕೆಟ್ಟ ಕೃತ್ಯಗಳಿಗೂ ಇಳಿಯುತ್ತಾರೆ. ಹಸಿವೆ ಅನ್ನುವುದು ಬದುಕಿನ ಅತ್ಯಂತ ಕೆಟ್ಟ ಸ್ಥಿತಿ .
“ಹಸಿದವನಮುಂದೆ ಆಚಾರ ಹೇಳಬಾರದುಹೊಟ್ಟೆ ತುಂಬಿದವನ ಮುಂದೆ ಹಸಿವು ತೋಡಿಕೊಳ್ಳಬಾರದು” ಎನ್ನುವ ಮಾತಿದೆ.ಇಡೀ ಜೀವ ಸಂಕುಲವನ್ನು ಜಗತ್ತನ್ನು ಕಾಡುವ ಏಕೈಕ ಹೀನ ಸ್ಥಿತಿ ಎಂದರೆ ಹಸಿವು.ಎಲ್ಲರೂ ದುಡಿಯುವುದು,ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಂದಿಗೂ ಇಂದಿಗೂ ಸತ್ಯ.ಹಸಿವು ಎನ್ನುವುದು ಮುಗಿಯದ ಜಾಗತಿಕ ಸಮಸ್ಯೆ.
ಮನುಷ್ಯ, ಪಶು ಪಕ್ಷಿ, ಕ್ರಿಮಿ ಕೀಟಗಳು, ಹಸಿವಿನಿಂದ ತತ್ತರಿಸುತ್ತವೆ ,ಸಾಯುತ್ತವೆ.ಬಡತನಕ್ಕೆ ಹಸಿವು ಎನ್ನುವುದು ಅನಿವಾರ್ಯ ಸಂಗತಿ. ಆದರೂ ಅವರು ಇದ್ದಿದ್ದರಲ್ಲೇ ರುಚಿಕಟ್ಟಾಗಿ ಮಾಡುವುದನ್ನು ರೂಢಿಸಿಕೊಂಡಿರುತ್ತಾರೆ. ಅದಕ್ಕಾಗಿಯೆ
“ದೊಡ್ಡವರ ಮನೆಯ ನೋಟ ಚಂದ ಬಡವರ ಮನೆಯ ಊಟ ಚಂದ ಎನ್ನುತ್ತಾರೆ”
ಆದರೆ ಉಳ್ಳವರ ಮನೆಯಲ್ಲಿಯೂ ಹಸಿವೆ ಎನ್ನುವುದು ನೋವಿನ ಸಂಗತಿಯಾದರೆ!ಹಾ ಅದನ್ನೇ ಹೇಳುತ್ತಿರುವುದು ನಾನೀಗ.ಅಯ್ಯೋ ಬೇಕಾಗಿದ್ದು ಬೇಕಾದಷ್ಟು ತಂದು ಹಾಕ್ತೀನಿ, ಆದ್ರೆ ಒಂದು ರುಚಿಯಾದ ಅಡುಗೆ ಮಾಡಿ ಹಾಕಲ್ಲ ಮನೆಯಲ್ಲಿ ಕಣೋ.ಯೇ ಬಿಡಪ್ಪ ಯಾರು ಮನೆಗೆ ಹೋಗಿ ಊಟಾ ಮಾಡ್ತಾರೆ. ಅಡುಗೆನಾ ಅವಳು ಮಾಡೋದು ಏನೂ ಮಾಡೋಕೆ ಬರಲ್ಲ ಅವಳಿಗೆ. ಇಲ್ಲೇ ಏನಾದರೂ ತಿಂದು ಹೋಗೋಣ. ಮತ್ತೇನು ಕೇಳಲ್ಲ ನಾನು ಒಂದು ರುಚಿಯಾದ ಅಡುಗೆ ಅಷ್ಟೇ, ಅದೂ ಆಗಲ್ಲ ಅಂತ ಗೊಣಗುತ್ತಾಳೆ ಮಾರಾಯ. ಮನೆಗೆ ಹೋಗಿ ಆರ್ಡರ್ ಮಾಡೋ ಬದ್ಲು ಇಲ್ಲೇ ಏನಾದ್ರೂ ತಿಂದು ಹೋಗೋದೇ ವಾಸಿ.ಇಂಥ ನೋವಿನ ಅಸಹಾಯಕ ಮಾತುಗಳು ನಿಮ್ಮ ಸ್ನೆಹಿತರಿಂದಲೋ, ಅಕ್ಕ ಪಕ್ಕದವರಿಂದಲೋ ಕೇಳಿಯೇ ಇರ್ತೀರಿ. ಅದೆಷ್ಟೇ ಕಠೋರ ಹೃದಯವಾದರೂ ಹಸಿವು ಎಂದಾಗ ಕರುಳು ಚುರ್ ಅನ್ನುತ್ತದೆ. ಅಯ್ಯೋ ಪಾಪ ಅನ್ನಿಸಿ ಬಿಡುತ್ತದೆ.ಎಷ್ಟಿದ್ದರೇನು, ಹಸಿದು ಮನೆಗೆ ಹೋದಾಗ ಸರಿಯಾಗಿ ಊಟ ತಿಂಡಿ ಹಾಕೋರು ಇಲ್ಲದೇ ಹೋದ್ರೆ, ಬದುಕೇ ಸಾಕು ಅನ್ನಿಸಿಬಿಡುವುದು ದಿಟವೇ.
ಹೆಣ್ಣೆಂದರೆ ನಮ್ಮನೆಲ್ಲ ಪೊರೆವ ತಾಯಿ ಎನ್ನುವುದು, ಎಷ್ಟೋ ಸಂದರ್ಭದಲ್ಲಿ ಸುಳ್ಳಾಗುತ್ತದೆ.
ನಾನಿಲ್ಲಿ ಹೆಣ್ಣನ್ನು ದೂಷಿಸುತ್ತಿಲ್ಲ .ಅದರೆ ಹೆಣ್ಣು ಕೂಡಾ ಯಾವತ್ತೂ ತನ್ನ ಜವಾಬ್ದಾರಿಯನ್ನು ಮರೆಯಬಾರದು. ಮಕ್ಕಳ ಲಾಲನೆ ಪಾಲನೆ, ಕುಟುಂಬ ನಿರ್ವಹಣೆ, ಹಸಿವು ತೃಷೆಗಳ ನೀಗಿಸುವ ದೈವದತ್ತ ವರದಾನ ಹೆಣ್ಣಿಗಿದೆ. ಅದಕ್ಕೇ ಅವಳು ಹೆಣ್ಣು ಅನ್ನಿಸಿಕೊಂಡಿದ್ದು.ಅದನ್ನು ಮರೆತರೆ ಮನೆ ನಂದನವನ ಹೇಗಾದೀತು!ಹೆಣ್ಣು ಅಡುಗೆ ಮನೆಗೆ ಮಾತ್ರ ಸೀಮಿತವಾಗಿರಬೇಕು ಅಂತೇನೂ ಇಲ್ಲ ಚೆನ್ನಾಗಿ ಅಡುಗೆ ಮಾಡಲು.ಅಡುಗೆಯಲ್ಲಿ ಸಿದ್ದ ಹಸ್ತವಾಗಿರುವವಳಿಗೆ ಅರ್ಧಗಂಟೆ ಸಾಕು ರುಚಿಕಟ್ಟಾದ ಅಡುಗೆಯೊಂದನ್ನು ಮಾಡಿ ಮುಗಿಸಲು.
ಕೆಲವರಿರ್ತಾರೆ ಇಡೀ ದಿನ ಅಡುಗೆ ಮನೆಯಲ್ಲೇ ಇರ್ತಾರೆ, ತಿನ್ನೋಕೆ ಮಾತ್ರ ಯಾವುದೂ ಬರಲ್ಲ ಅಪ್ಪಿ ತಪ್ಪಿ ಇದು ಚೆನ್ನಾಗಿಲ್ಲ ಅಂದು ಬಿಟ್ಟರೆ ಅಲ್ಲೊಂದು ಯುದ್ಧ ನಿಶ್ಚಿತ.ಅಪರೂಪಕ್ಕೆ ಎಲ್ಲರ ಅಡುಗೆಯೂ ಕೆಡುತ್ತದೆ, ಸ್ವಲ್ಪ ಉಪ್ಪು ಜಾಸ್ತಿಯೋ ಖಾರ ಜಾಸ್ತಿಯೋ ಆಗಿ ಬಿಡುತ್ತದೆ. ಅದನ್ನೇ ಹೇಳಿ ತಿವಿಯುವವರೂ ಇದ್ದಾರೆ ಬಿಡಿ. ಆದ್ರೆ ಅದಲ್ಲ ನಾನು ಹೇಳ್ತಾ ಇರೋದು.
ಅಡುಗೆ ಎನ್ನುವುದು ಗಂಡನ ಗೆಲ್ಲುವ, ಮಕ್ಕಳನ್ನು ಖುಷಿ ಗೊಳಿಸುವ ಒಂದು ಅಸ್ತ್ರ ಕೂಡಾ.ಬೇಕಾದಷ್ಟು ಜನ ಮಹಿಳೆಯರು ಉದ್ಯೋಗ ವಿರಲಿ, ಕೃಷಿ ಇರಲಿ, ಮನೆಯ ಒಳಗೂ, ಹೊರಗೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ.ಆದರೆ ಕೆಲವು ಮಹಿಳೆಯರು, ನಾನೇಕೆ ಅಡುಗೆ ಮಾಡಬೇಕು ಎಂದೋ, ನನಗೆ ಅಡುಗೆ ಮಾಡಲು ಬರುವುದಿಲ್ಲ ಎಂದೋ ,ತನ್ನಿಂದ ಇವೆಲ್ಲ ಆಗದು ಎಂದೋ ಅಡುಗೆ ಮನೆಯಿಂದ ದೂರವೇ ಉಳಿಯುತ್ತಾರೆ. ಆಗಲೇ ಇಡೀ ಮನೆಯ ಆರೋಗ್ಯ ಸಣ್ಣಗೆ ಹದತಪ್ಪಲು ಶುರುವಾಗುವುದು.
ನಮ್ಮ ಅಮ್ಮ, ಅಜ್ಜಿಯಂದಿರೆಲ್ಲ. ಯಾವುದೇ ಉಪಕರಣಗಳಿಲ್ಲದೆ ಎಷ್ಟೆಲ್ಲಾ ಕಷ್ಟ ಪಟ್ಟು ರುಚಿಯಾದ ಅಡುಗೆ ಮಾಡ್ತಾ ಇದ್ರು. ಅಯ್ಯೋ ಇಂದು ಅಡುಗೆ ಮಾಡೋಕೆ ಆಗಲ್ಲ ಅನ್ನುವ ಮಾತನ್ನು ಅವರ್ಯಾರೂ ಆಡಿಯೇ ಇಲ್ಲವೇನೋ. ಈಗ ಹಾಗಲ್ಲ ಎಲ್ಲದಕ್ಕೂ ಯಂತ್ರದ ವ್ಯವಸ್ಥೆ ಇದೆ. ಆದರೂ ಅಡುಗೆ ಮಾಡೋಕೆ ಮಾತ್ರ ಬೇಜಾರು ಅಂತ ಕಳ್ಳ ನೆವ ಹುಡುಕುತ್ತೇವೆ.
ಪುಟ್ಟ ಪುಟ್ಟ ಮಕ್ಕಳ ಬಾಯಲ್ಲೂ ಕೇಳುತ್ತಿದ್ದೇವೆ, “ನಮ್ಮಮ್ಮನಿಗೆ ರುಚಿಯಾದ ಅಡುಗೆ ಮಾಡೋಕೆ ಬರಲ್ಲ” ಎಂದು.ಮುಂದೊದು ದಿನ “ಅಮ್ಮನ ಕೈ ರುಚಿ” ಎನ್ನುವ ಮಾತು ಮತ್ತು ರುಚಿ ಮಾಯವಾದರೂ ಅಶ್ಚರ್ಯವಿಲ್ಲ.
ಏನೇನೆಲ್ಲ ವಿದ್ಯೆಗಳನ್ನು ಕಲಿಯುವ ನಾವು ರುಚಿ ರುಚಿಯಾದ ಅಡುಗೆ ಮಾಡುವುದನ್ನು ಮಾತ್ರ ಕಲಿಯುವ ಗೋಜಿಗೆ ಹೋಗೋದೇ ಇಲ್ಲ.ಹೊಟ್ಟೆಗಾಗಿಯೇ ಹಗಲು ರಾತ್ರಿ ದುಡಿಯುವ ನಾವು ಮಾಡಿಕೊಂಡು ತಿನ್ನಲು ಮಾತ್ರ ಹಿಂದೇಟು ಹಾಕುತ್ತೇವೆ.ಇಡೀ ಮನೆಯ ಹೃದಯ ಭಾಗವಾದ ಅಡುಗೆ ಮನೆಯ ಜಾಗ ಕಿರಿದಾಗಿ ವಾಷ್ ರೂಮು ದೊಡ್ಡದಾಗುತ್ತಿದೆ.
ಇದರರ್ಥ ನಾವು ತಿನ್ನುತ್ತಿದ್ದೇವೆ. ಆದ್ರೆ ಮನೆಯಲ್ಲಿ ಅಲ್ಲ ಅಷ್ಟೆ.ಹಾಗಂತ, ಮಾನೆಯಲ್ಲಾಗಲಿ ಹೊರಗಾಗಲಿ ತಿನ್ನುವುದೇ ಬದುಕಲ್ಲ.
ಊಟ ಬಲ್ಲವನಿಗೆ ರೋಗವಿಲ್ಲ.
ಮಾತು ಬಲ್ಲವನಿಗೆ ಜಗಳವಿಲ್ಲ. ಎನ್ನುವ ಮಾತೂ ಇದೆ.
ಹಾಗೇ ಅಡುಗೆ ಬಲ್ಲವ ಎಲ್ಲಿ ಬೇಕಾದರೂ ಬದುಕಬಲ್ಲ ಅನ್ನುವುದು ಕೂಡ ಸತ್ಯ.ದೇಹಕ್ಕಗಾಲಿ ಮನಸಿಗಾಗಲಿ ಮನೆಯ ಊಟದಷ್ಟು ಖುಶಿ ಮತ್ತು ತೃಪ್ತಿ ಹೊರಗಿನ ಊಟ ಕೊಡೋದಿಲ್ಲ. ಎಲ್ಲೋ ಅಪರೂಪಕ್ಕೆ ಅನಿವಾರ್ಯವಾದಾಗ ತರಿಸಿ ಕೊಂಡೋ ಅಥವಾ ಹೊರಗೆ ಹೋಗಿಯೋ ತಿನ್ನಬಹುದು. ಆದರೆ
ನಿತ್ಯವೂ ಹೊರಗಡೆ ತಿನ್ನುವುದು ಅನಿವಾರ್ಯವಾದರೆ ನೆಮ್ಮದಿ ಹಣ ಆರೋಗ್ಯ ಎಲ್ಲವೂ ಹಾಳು. ಹೊರಗಡೆಯೇ ಊಟ ಮಾಡುವ ಪ್ರವೃತ್ತಿಯವರನ್ನೂ ರುಚಿಕರವಾದ ಊಟದಿಂದ ಮನೆಯತ್ತ ಸೆಳೆಯುವ ಶಕ್ತಿ ಹೆಣ್ಣಿಗಿದೆ. ಕಲಿಯಬೇಕು ಅಷ್ಟೇ.
ಗಂಡಾಗಾಲಿ ಹೆಣ್ಣಾಗಲಿ ನಮ್ಮ ನಮ್ಮ ಊಟವನ್ನು ಸಿದ್ದ ಮಾಡಿಕೊಳ್ಳಬಲ್ಲ ಕಲೆ ಗೊತ್ತಿರಬೇಕು. ಒಂದೇ ಕೈ ರುಚಿ ತಿಂದು ತಿಂದು ಬೋರ್ ಆಗೋದು ಸಹಜ. ಆಗ ಹೆಂಡತಿಯ ಬದಲು ಗಂಡ ಮಕ್ಕಳು ಮನೆಯ ಯಾರು ಕೂಡಾ ಅಡುಗೆ ಮಾಡಬಹುದು. ಆಗ ಅಡುಗೆಯ ಕಷ್ಟ ಸುಖ ಮತ್ತು ಊಟದ ಕಷ್ಟ ಸುಖ ಎಲ್ಲರಿಗೂ ಅರಿವಾಗುವುದು.
ಹೌದು ಹೆಣ್ಣಿನ ಕೈ ರುಚಿಯೇ ಮನೆಯವರ ಮನಸ್ಸು ಮತ್ತು ಆರೋಗ್ಯವನ್ನು ಕಾಪಾಡುವುದು ಅದಕ್ಕೇ ಅಲ್ಲವೇ ಅವಳು ಅನ್ನಪೂರ್ಣೇ.ಚೆನ್ನಾಗಿದೆ ಲೇಖನ.
ಸೂಪರ್ ಬ್ಯಾಲೆನ್ಸ್ ಬರಹ, ಅಡುಗೆ ಮನೆಯಿಂದ ಒಗ್ಗರಣೆ ಘಾಟು, ಬಾಯಲ್ಲಿ ನೀರಾಡಿಸುವ ಸಖತ್ ಸುವಾಸನೆ, ಆರೋಗ್ಯ, ರುಚಿಗೆ , ಬಡತನ , ಸಿರಿತನಕ್ಕೆ ಯಾವ ಹಂಗು ಇಲ್ಲ ಎನ್ಮುವ ಅಡುಗೆ ಮನೆ ಸಿದ್ದಾಂತದ ಹೊಸ ಭಾಷ್ಯ ಈ ಬರಹ ಚನ್ನಾಗಿದೆ, ಅರಿವು ಮೂಡಿಸುವ ಬರಹ .