ಕಾವ್ಯ ಸಂಗಾತಿ
ಗಿರಿಜಾ ಇಟಗಿಯವರ ಹೊಸ ಗಜಲ್
ಅರಳಿ ನಗುವ ಸಮಯ ಮೊಗ್ಗನೇ ಚಿವುಟಿ ವಿಕೃತಿ ಮೆರೆದೆಯಲ್ಲಾ ಸಖ
ಮನದ ಮೊಗ್ಗುಗಳು ಬಿರಿದು ಘಮಿಸುತಿರಲು ಮುಳ್ಳ ನೂಕಿದೆಯಲ್ಲಾ ಸಖ
ನಿನ್ನ ಜೊತೆ ಆಡಿದ ಆಟವೆಲ್ಲವೂ ಸೋಲು- ಗೆಲುವಿನ ಅತೀತವೆಂದು ಭಾವಿಸಿದೆ
ಬದುಕಿನ ಚೌಕಾಬಾರ ಆಟದಲಿ ಮೋಸ ಮಾಡಿದೆಯಲ್ಲಾ ಸಖ
ರೆಕ್ಕೆ ಬಲಿತ ಹಕ್ಕಿ ಸ್ವಚ್ಛಂದವಾಗಿ ಆಗಸದಲ್ಲಿ ಹಾರಾಡುತಲಿತ್ತು
ಜುಜುಬಿ ಕಾಳಿನ ಆಸೆ ತೋರಿಸಿ ರೆಕ್ಕೆ ಕತ್ತರಿಸಿದೆಯಲ್ಲಾ ಸಖ
ನನ್ನ ತುಡಿತ- ಮಿಡಿತಗಳಿಗೆಲ್ಲಾ ವೇದಿಕೆಯಾಗಿ ಮುನ್ನಡೆಸುತ್ತಿದ್ದೆ
ಭಾವನೆಗಳಿಗೆ ಘಾಸಿ ಮಾಡಿ ಅವಮಾನಿಸಿದೆಯಲ್ಲಾ ಸಖ
‘ ಗಿರಿ’ ಯ ನ್ಯಾಯಾಲಯದಲಿ ಯಾವಾಗಲೂ ನಿನ್ನ ನ್ಯಾಯಾಧೀಶನೆಂದು ನಂಬಿದ್ದೆ
ಕಟಕಟೆಯಲಿ ನಿಲ್ಲಿಸಿ ಸಾಕ್ಷಿಗಳ ತಿರುವು ಮಾಡಿ ಅಪರಾಧಿಯಾಗಿಸಿದೆಯಲ್ಲಾ ಸಖ