ಕಾವ್ಯ ಸಂಗಾತಿ
ಅರೆ ತೆರೆದ ಬಾಗಿಲು
ಮಮತಾ ಶಂಕರ್
ಎಷ್ಟೊಂದು ಸಾಧ್ಯತೆಗಳ ಹೊತ್ತು
ಶಿಥಿಲಗೊಂಡ ಸಂಬಂಧಗಳಂತಿರುವ
ಚೌಕಟ್ಟಿಗೆ ಒರಗಿ ತುಕ್ಕಿನ ಮೊಳೆಗಳ
ಹಿಡಿದು ನಿಂತಿದೆ ಅರೆತೆರೆದ ಬಾಗಿಲು
ಯಾರೂ ಮುಟ್ಟಿದ್ದು, ಅತ್ತಿದ್ದು, ಕದ್ದು ಸಂದಿಯಿಂದ ನೋಡಿದ್ದು ಮುದ್ದು ಮಾಡಿದ್ದು ಯಾವ ಗುರುತುಗಳನ್ನೂ ಅದೀಗ ಉಳಿಸಿಕೊಂಡೇ ಇಲ್ಲಾ
ಬಾಗಿಲ ಹೊರಗೂ,ಒಳಗೂ ಸುಖವಿಲ್ಲದ ಹೆಣ್ಣು
ಬಾಗಿಲ ಹೊರಗೂ ಒಳಗೂ ಬೆರಗಿಲ್ಲದ ಗಂಡು
ಬಾಗಿಲ ಹೊರಗೂ ಒಳಗೂ ನೆಲೆಯಿಲ್ಲದ ವೃದ್ದಾಪ್ಯ
ಬಾಗಿಲ ಹೊರಗೂ ಒಳಗೂ ಮಕ್ಕಳ ಹೆಗಲೇರಿದ ಶಾಲೆ
ಇದೆಲ್ಲಾ ಲೆಕ್ಕಕ್ಕಿಲ್ಲದಂತೆ ಅದರ ಲೆಕ್ಕದ ಲೆಡ್ಜರಿನ ಮಾಸಲು ಹಾಳೆಯಲ್ಲಿದೆ…
ಎದಿರಾಗುವ ಬಿಸಿಲು ಮಳೆ ಗಾಳಿ ಚಳಿಗೆ ಮೈಯ್ಯೊಡ್ಡಿ ಬಣ್ಣ ಮಾಸಿಹೋಗಿ
ಚಿತ್ತಾರವೆಲ್ಲಾ ಅಳಿಸಿ ನುಣುಪಾಗಿ ನಿಂತ ಬಾಗಿಲಹಿಡಿಗೆ ಈಗ ಸ್ವಲ್ಪ ಸಡಿಲಿಕೆ
ಒಳಗೂ ಹೊರಗೂ ಅಗುಳಿ ಇರುವ ಬಾಗಿಲಿಗೆ ಇತ್ತೀಚೆಗೆ ಅಷ್ಟೇನೂ ಖಬರಿದ್ದಂತಿಲ್ಲ ಒಳಬರುವವರ, ಅಥವಾ ಹೊರ ಹೋಗುವವರ ಕುರಿತು..,..
ಅದರ ದಿವ್ಯ ಮೌನ ನೋಡಿ ಹೋಗಿ
ತಬ್ಬಿಕೊಂಡು ನೇವರಿಸಿದರೆ
ಸಣ್ಣಗೆ ನಿಟ್ಟುಸಿರನೇ ಉಸಿರಾಡಿದಂತೆನಿಸಿದೆ..
ಈಗ ಈ ಅರೆ ತೆರೆದ ಬಾಗಿಲಿಗೆ ಹುಡುಕಬೇಕಾಗಿದೆ ಹೊಸ ವ್ಯಾಖ್ಯಾನವೊಂದು
ಚೆಂದದ ಕವಿತೆ ಮಮತಾ
ಥ್ಯಾಂಕ್ಯೂ ಸ್ಮಿತಾ
Excellent
ಧನ್ಯವಾದಗಳು
ಸುಂದರ ಕವಿತೆ. ಶೀರ್ಷಿಕೆಯಿಂದ ಹಿಡಿದು ಸಾಲಿರುವೆ ಅಕ್ಷರಗಳ ಗೆರೆ ಗೆರೆಗಳಲ್ಲಿ ಪ್ರತಿಮೆಗಳು, ರೂಪಕಗಳು.
ಬಾಗಿಲನ್ನು ದಾಟಿ ವಿಶಾಲಕ್ಕೆ ಹೆಗಲೊಡ್ಡಿದ್ದೀರಿ. ಅಭಿನಂದನೆಗಳು, ಮಮತಾ ಅವರೇ.
ಧನ್ಯವಾದಗಳು ಸರ್ ನಿಮ್ಮ ಮೆಚ್ಚುಗೆಯ ಮಾತುಗಳಿಗೆ