ಕಾವ್ಯ ಸಂಗಾತಿ
ವಿಳಾಸ
ದೇವರಾಜ್ ಹುಣಸಿಕಟ್ಟಿ
ಕಣ್ಣ ರೆಪ್ಪೆಯಡಿ
ಅರಮನೆ ಕಟ್ಟಿ ಕೊಂಡವಳ
ವಿಳಾಸ ಹುಡುಕ ಹೊರಟ ವಿಷಯ ಹಳತಲ್ಲ..
ನಿದ್ದೆ ಕದ್ದವಳಿಗೆ
ಸ್ವಪ್ನ ಸ್ಕಲನದ ಅಪವಾದ
ಹೊಸತಲ್ಲ…
ಅವಳು ಕಂಗಳಿಂದ
ಬರೆದ ಪತ್ರಗಳಿಗೆ ಇನ್ನೂ ಉತ್ತರಿಸಲಾಗಿಲ್ಲ..
ಕಣ್ಣು ಮುಚ್ಚುವುದ ಕಾಯುತ್ತ
ತಡ ಮಾಡದೆ ಅಡಿಯಿಟ್ಟು
ಕಣ್ಣಲ್ಲಿ ದೀಪದಂತೆ ತಣ್ಣಗೆ
ಬೆಳಕಾದವಳ ವಿಳಾಸ ಗೊತ್ತೇ…?
ನಿತ್ಯ ಇರುಳ ರಾಣಿಯ
ಹಕೀಗತ್ತಿಗೆ…
ಹೃದಯ ಒತ್ತೆ ಇಟ್ಟವನ ಸ್ವತ್ತು ಗೊತ್ತೇ…?
ಸಮಾಧಿ ಮೇಲೆ
ಅರಳಿದ ಹೂವುಗಳ ಕುರುಹು
ಮಜನೂಗಳ ಲೆಕ್ಕ ಕೊಡಲಿಲ್ಲ..
ಇತಿಹಾಸದಿ ದಫನ್ ಆದ
ತಾಜ ಮಹಲ್ ಗಳಿಗೆ ಲೆಕ್ಕವಿಲ್ಲಾ…
ಅವಳ ವಿಳಾಸ ಹುಡುಕುವುದು
ಇನ್ನೂ ನಿಂತಿಲ್ಲ….
ಭಗ್ನ ಪ್ರೇಮಿಯ
ಕಂಗಳಿಂದ ಇಳಿದು
ನೆಲತಬ್ಬಿದ ಅಮೃತ ಬಿಂದುವಿನಲ್ಲಿ
ಅವಳ ಹೃದಯದ ವಿಳಾಸ
ಸಿಗುವುದು ಯುಗ ಯುಗಗಳಿಂದ
ಇನ್ನೂ ನಿಂತಿಲ್ಲ….!!
ಪ್ರೀತಿಯ ನಗರಿಯಲಿ
ವಿಳಾಸವಿಲ್ಲದ ಮಹಲುಗಳಿಗೆ
ಬೀಗಗಳ ಅಗತ್ಯವಿಲ್ಲ….
ಮಾರಾಟವಾದ ಅಂತರಂಗದ ಸರಕಿಗೆ
ಹರಾಜು ಕೂಗುವ ಲೋಕ ರೂಢಿಯ
ತಪ್ಪಿಸುವವರಾರು….?
ಹೃದಯದ ಬದಲಾಗಿ
ಹೃದಯವನ್ನೆ ವಿಳಾಸ ಮರೆತು ಒಪ್ಪಿಸುವರಾರು…?
ಬಹಳ ಚೆನ್ನಾಗಿದೆ.