ಕಾವ್ಯಸಂಗಾತಿ
ಅಮ್ಮಂದಿರ ದಿನದ ವಿಶೇಷ
ತಾಯ್ತನ
ಪ್ರೊ ರಾಜನಂದಾ ಘಾರ್ಗಿ
ಸದ್ದಿಲ್ಲದೆ ಒಡಲು ತುಂಬಿದ ಜೀವ
ಜಗವನ್ನೇ ಗೆದ್ದಂಥ ಹಿರಿಯ ಭಾವ
ಹೊಸತನದಿ ರೋಮಾಂಚಿತ ದೇಹ
ಮನ ಆವರಿಸಿದ ಸಾರ್ಥಕಭಾವ
ಒಡಲ ಆವರಿಸುತ್ತ ಬೆಳೆದಂತೆ ಜೀವ
ತೆರೆದುಕೊಂಡಿತು ಬಯಕೆಗಳ ದ್ವಾರ
ಹರಿದು ಬಂದ ಮಮತೆಯ ಮಹಾಪೂರ
ತೇಲುತ್ತ ಮುಳುಗುತ್ತ ಮರೆತ ಇಹಪರ
ಕ್ಷಣ ಕ್ಷಣ ಇರುವ ಅರಿವನ್ನು ಮೂಡಿಸಿ
ಅಸ್ತಿತ್ವದ ಅಣು ಅಣುಗಳ ಆವರಿಸಿ
ಜೀವನಕ್ಕೆ ಹೊಸ ಅರ್ಥವ ಮೂಡಿಸಿ
ಮನದಲ್ಲಿ ಬಣ್ಣದ ಚಿತ್ತಾರವ ಬಿಡಿಸಿ
ಹಿಂಡುವ ನೋವಿಗೆ ನೀಡಿದ ಹೊಸತನ
ದೇಹದಿಂದ ಹೊರದೂಡಿ ಕಳೆಯದ ತನ್ನತನ
ಬೆಳೆದರೂ ಒಡಲಲ್ಲಿ ಬಚ್ಚಿಡಲು ತುಡಿಯುವ ಮನ
ಜೀವನದ ಉತ್ಕೃಷ್ಟ ಅನುಭವ ಈ ತಾಯ್ತನ