ಕಾವ್ಯಯಾನ

Image result for images of fetus

ಭ್ರೂಣ ಕಳಚುವ ಹೊತ್ತು

ಬಿದಲೋಟಿ ರಂಗನಾಥ್

ಭ್ರೂಣ ಕಳಚುವ ಹೊತ್ತು

ಗಂಡು ಕೂಸಿಗಾಗಿ ಬಯಕೆ ಬಾಯಾರಿ
ಹುಟ್ಟಿದ ಹೆಣ್ಣುಕಂದಮ್ಮಗಳ ಭ್ರೂಣಗಳನ್ನು
ಯಾವುದೋ ಗುದ್ದರಗಳಲ್ಲಿ ಹೂತು
ಮಣ್ಣೂ ತಿನ್ನಲಾರದೆ
ನಾಯಿಗಳು ವಾಸನೆ ಹಿಡಿದು
ಎರಡೂ ಕಾಲುಗಳಲ್ಲಿ ಬಗೆ ಬಗೆದು
ಕಚ್ಚಿ ಕಚ್ಚಿತಿನ್ನುತ್ತಿವೆ ಇಟ್ಟಾಡಿಕೊಂಡು ಹಸಿಮಾಂಸವೆಂದು.!

ರಕ್ತಸೇರಿ ಮಾಂಸ ತುಂಬಿ
ಆಕಾರ ಮೂಡಿ
ತಾಯಿಯೊಳಗಿನ ಅಂತಃಕರಣ ತುಂಬಿ
ಜೀವ ಪಡೆದು ಹೆಣ್ಣು ಕೂಸು
ಅಂದಾಕ್ಷಣ ಕಣ್ಣುಗಳಲ್ಲಿ ಬೆಂಕಿಯುಂಡೆ ಉರುಳಿ
ಮನಸುಗಳನ್ನು ಸುಡುವ ಮುಟ್ಟಾಳತನ

ಅಳುವ ಮಗುವಿನ ದ್ವನಿ ಕೇಳಿಸಿಕೊಳ್ಳುತ್ತಲೇ
ಎದೆಯಲ್ಲಿ ಉಕ್ಕುವ ಹಾಲು ಹಿಂಡುತ
ಹೆತ್ತೊಡಲು ನೊಂದು
ಅಯ್ಯೋ ! ಎನ್ನುವ ಆ ಮಾತೆಯ ನೋವು,ನೀಟ್ಟುಸಿರು
ಎಲ್ಲ ಹೆತ್ತಮ್ಮರ ನಿಟ್ಟುಸಿರು

ಯೋನಿ ಬಾಯಿಯ ನೋವು
ಮಾಗುತ್ತಿರುವಾಗಲೇ
ಮತ್ತೆ ನಿನ್ನ ಶಿಶ್ನದ ಆರ್ಭಟ
ವಿರ್ಯ ಸುರಿಸುವ ಹಂಬಲ
ಮತ್ತೆ ಮೊಳಕೆ !
ನಿನ್ನ ದುರದೃಷ್ಟವೋ ಏನೋ
ಅದೂ ಹೆಣ್ಣು ಶಿಶುವೆ..
ಛೇ !ಮತ್ತೆ ಮಣ್ಣಿನ ಸ್ಪರ್ಶ
ನಾಯಿ ನರಿ ಹದ್ದು ಕಾಗೆಗಳಿಗೆ ಆಹಾರ
ನೋಡುವ ಕಣ್ಣುಗಳ ನರಗಳು
ಸೋತು ಸುಣ್ಣವಾಗುವ ಬೆಳಗು

ಹೆಣ್ಣು ಕೂಸುಗಳ ಹೂತ ಜಾಗದ ಸೆಳೆತಕೆ ಸೋತು
ರಕ್ತ ಗರೆಗಟ್ಟಿ ಇನ್ನಾರೋ ನೋಡದಿರಲೆಂದು
ಹೊಸಮಣ್ಣನು ಬಗೆದು ಆಲದ ಗಿಡ ನೆಟ್ಟು
ಮಳೆಯೇ ಬಾ ಬಿದ್ದ ರಕ್ತ ತೊಳೆದು
ಗಿಡದ ಪಾಜಿಗೆ ನೀರು ಬೀಳೆಂದು ಪ್ರಾರ್ಥಿಸಿದೆ

ಮೂರ್ಖನೇ !
ನೀನೆ ಆ ಆಲದ ನೆರಳಲ್ಲಿ
ಬಿಸಿಲು ತಡೆಯದೇ ನಿಂತಿದ್ದು ನೋಡಿದೆ
‘ಅಪ್ಪಾ… ‘ಅನ್ನುವ ಆ ಮಕ್ಕಳ ಕೂಗು
ಬಯಲ ತುಂಬುತ್ತಲೇ ಇತ್ತು
ಅದು ಬಿಡುವ ಗಾಳಿ ನೀನು ಕುಡಿಯುತ್ತಲೇ ಇದ್ದೆ
ಎದೆಯಲ್ಲಿನ ಆ ಮಾಯದ ನೋವು
ನನ್ನೊಳಗೆ ಇಳಿಯುತ್ತಲೇ ಇತ್ತು
ಪಶು ಪಕ್ಷಿಗಳು ಆ ಮರದ ನೆತ್ತಿ ಮೇಲೆ ಕೂತು
ಹಣ್ಣುಗಳ ಕುಕ್ಕಿ ತಿನ್ನುವ ದೃಶ್ಯ
ಕಾಣುತ್ತಲೇ ಇತ್ತು ಕನ್ನಡಿಯಾಗಿ…

***************************************************

Leave a Reply

Back To Top