ಪುಟ್ಟನ ಕನಸು’

ಪುಸ್ತಕ ಸಂಗಾತಿ

ಪುಟ್ಟನ ಕನಸು’     

ಅರಳಿದ ಮಕ್ಕಳ ಕವನಗಳು

ಪುಟ್ಟನ ಕನಸು

ಲೇ: ಗುರುನಾಥ ಸುತಾರ.        

ಪ್ರಕಟಣೆ: 2019               

ಪುಟಗಳು: 61                          

ಬೆಲೆ: 70 ರೂ.

ಸುತಾರೆ ಪ್ರಕಾಶನ

ಬಸವನಗರ ಹುಲ್ಯಾಳ ತಾ: ಜಮಖಂಡಿ ಜಿ: ಬಾಗಲಕೋಟಿ ಮೊ: 990129517

      ಮಕ್ಕಳ ಸಾಹಿತ್ಯ ಬೆಳೆಯಬೇಕು. ನಾವಿನ್ಯತೆ ಒಳಗೊಂಡಿರಬೇಕು ಎನ್ನುವ ಮಾತುಗಳ ನಡುವೆ ಇಂದು ಅನೇಕರು ಕವಿತೆಗಳನ್ನು, ಕೆಲವರು ಕಥೆಗಳನ್ನು, ಬೆರಳೆಣಿಕೆಯಷ್ಟು ನಾಟಕ, ಕಾದಂಬರಿಗಳನ್ನು ರಚಿಸುತ್ತಿದ್ದಾರೆ. ಇತ್ತಿತ್ತಲಾಗಿ ಹೊಸ ಮಾದರಿಯ ಕೃತಿಗಳು ಬರುತ್ತಿವೆ. ಹೀಗಾಗಿ ಮಕ್ಕಳ ಓದಿಗೆ ಹೊಸತನ ದೊರಕುತ್ತಿದೆ. ಮಕ್ಕಳ ಸಾಹಿತ್ಯದಲ್ಲಿ

ಹೊಸ ಅಲೆ ಆವರಿಸಿಕೊಳ್ಳುತ್ತಿದೆ. ಅದನ್ನು ಗುರುತಿಸುವ ಕೆಲಸ ಆಗಬೇಕಷ್ಟೆ. ದೊಡ್ಡವರ ಸಾಹಿತ್ಯದಂತೆ ಮಕ್ಕಳ ಸಾಹಿತ್ಯದ ಕೃತಿಗಳ ಪರಿಚಯ, ವಿಮರ್ಶಾತ್ಮಕ ಲೇಖನಗಳು ಹೆಚ್ಚುಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗಬೇಕಿದೆ. ಇದಕ್ಕಾಗಿ ವಿಮರ್ಶಕರು ಸಹೃದಯ ತೋರಬೇಕಿದೆ. ಅಂದಾಗ ಓದುಗರ ವಲಯಕ್ಕೆ ಹೊಸಕೃತಿಗಳ ಪರಿಚಯವಾಗಿ ಒಂದಿಷ್ಟು ಮಕ್ಕಳ ಸಾಹಿತ್ಯದ ವಿಸ್ತಾರ ಹಿಗ್ಗುತ್ತದೆ.

   ಮಕ್ಕಳ ಸಾಹಿತ್ಯದ ಸೃಷ್ಟಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಬಳಗದ್ದು ಸಿಂಹಪಾಲು. ಅದರಲ್ಲೂ ವಿಜಯಪುರ ಹಾಗೂ ಬಾಗಲಕೋಟಿ ಪ್ರಾಂತ್ಯಗಳ ನಾಡು ಮಕ್ಕಳ ಸಾಹಿತಿಗಳ ಕಣಜ ಎನ್ನಬಹುದು. ಶಿಶು ಸಂಗಮೇಶ, ಶಂ,ಭು ಬಿರಾದಾರ, ಕಂಚ್ಯಾಣಿ ಶರಣಪ್ಪ, ಇತ್ತಿತ್ತಲಾಗಿ ಸೋಮಲಿಂಗ ಬೇಡರ, ಶಂಕರ ಲಮಾಣಿ, ಬಸವರಾಜ ಕುಕ್ಕುಂದ ಹೀಗೆ ಸಾಲು ಸಾಲು ಹೆಸರು ಬರೆಯಬಹುದು. ಅದರ ಸಾಲಿನಲ್ಲಿ ಜಮಖಂಡಿಯ ಗುರುನಾಥ ಸುತಾರ ಕೂಡಾ ಒಬ್ಬರು.  ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಲೇಖಕರಾಗಿ, ಚಿಂತಕರಾಗಿ,ವಿಮರ್ಶಕರಾಗಿ, ಕವಿಯಾಗಿ ಓದುಗರ ವಲಯಕ್ಕೆ ಚಿರಪರಿಚಿತರಾಗಿದ್ದಾರೆ. ‘ ಜ್ಞಾನ ದೀಪ’ ಧಾರ್ಮಿಕ ಕವನ ಸಂಕಲನ, ಸೂಕ್ಷ್ಮತೆಯ ಅರಿವು” ಚಿಂತನಶೀಲ ಲೇಖನಗಳು ಇವು  ಪ್ರಕಟಿತ ಪುಸ್ತಕಗಳು.

      ‘ ಪುಟ್ಟಣ’ ಕನಸು’ ಇವರ ಮೊದಲ ಮಕ್ಕಳ ಕವನಸಂಕಲನವಾಗಿದೆ. ಈ ಸಂಕಲನದ ಬಹುತೇಕ ಕವನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರ ಮನ ಗೆದ್ದಿವೆ. ಕವಿಗಳು ಮೊದಲ ಪ್ರಯತ್ನದಲ್ಲಿ ಯಶ ಕಂಡಿದ್ದಾರೆ ಎನ್ನುವುದಾಗಿ ಮುನ್ನುಡಿಯಲ್ಲಿ ಸಾಹಿತಿ ಶ್ರೀಶೈಲ ಬರೆದು ಪ್ರೋತ್ಸಾಹಿಸಿದ್ದಾರೆ.  ಸುತಾರ ಅವರ ಕ್ರಿಯಾಶೀಲತೆ ಹಾಗೂ ಸಾಹಿತ್ಯ ಅಭಿರುಚಿಯ ಕುರಿತಾದ ಮಾತುಗಳನ್ನು  ಜಮಖಂಡಿಯ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿ,ಎಂ, ನ್ಯಾಮಗೌಡ ಅವರು ಬೆನ್ನುಡಿಯಲ್ಲಿ ಮೆಚ್ಚುಗೆ ಮಾತುಗಳನ್ನು ದಾಖಲಿಸಿದ್ದಾರೆ.

   ಸಂಕಲನದ ಕವಿತೆಗಳತ್ತ ಕಣ್ಣು ಹಾಯಿಸಿದಾಗ ಕೃತಿಯಲ್ಲಿ ಐವತ್ತುಮೂರು ಕವನಗಳಿವೆ. ಶಾಲೆ, ಗುರುಗಳು, ಜಾತ್ರೆ, ಕನ್ನಡ ನುಡಿ, ಮಗುವಿನ ಅಭಿಲಾಶೆಗಳು, ಪ್ರಾಣಿ, ಪಕ್ಷಿ ಪ್ರಪಂಚಗಳು ಹೀಗೆ ಮಕ್ಕಳು ಗಮನಿಸಬಹುದಾದ ಹತ್ತಾರು ವಿಷಯಗಳತ್ತ ಕವನಗಳು ಸಂಚರಿಸುತ್ತವೆ. ಪ್ರಾಥಮಿಕ ಶಾಲೆಯ ಆರಂಭಿಕ ತರಗತಿಯ ಮಕ್ಕಳು  ಸುಲಭವಾಗಿ ರಾಗಬದ್ದವಾಗಿ ಹಾಡಿ ನಲಿಯಬಹುದಾದ ಗೀತೆಗಳಿವು. ಈ ಹಾಡುಗಳ ಮೂಲಕ ಮಕ್ಕಳು ಅನೇಕ ಸಂಗತಿಗಳನ್ನು ಕಲಿಯುತ್ತಾರೆ.

   ಕನ್ನಡ ಶಾಲೆಯಲ್ಲಿ ಓದಬೇಕೆನ್ನುವ ಮಕ್ಕಳ ಹಂಬಲದ  ಆಶಯ ‘ ಪುಟ್ಟನ ಆಸೆ’ ಕವನದಲ್ಲಿ ಮೂಡಿಬಂದಿದೆ.

    ‘ ಅಮ್ಮ ನನಗೆ ಪ್ರೈವೇಟ್ ಸ್ಕೂಲಿಗೆ ಕಳಿಸುವೆ ಯಾಕಮ್ಮ…. ಗಿಳಿಥರಾ ಪಾಠಾ ಅಂದ್ರ ನನಗ ತುಂಬಾ ಕೋಪಾಮ್ಮಾ….

       ಕನ್ನಡ ತಾಯಿಯ ಹೆಮ್ಮೆಯ ಪುತ್ರಗೆ ಇಂಗ್ಲೀಷ ಹೊರೆ ಏಕಮ್ಮಾ…..?

   ಎನ್ನುವ ಪ್ರಶ್ನೆಗಳ ಮೂಲಕ ಮಗು ಮಾತೃಭಾಷೆಯ ಮೂಲಕ ಶಿಕ್ಷಣ ಕಲಿಕೆಯ ಅಗತ್ಯತೆಯನ್ನು ಕವನ ಸಾರುತ್ತದೆ. ಈ ಕುರಿತು ಗುರುನಾಥ ಸುತಾರ ಕವನದ ಮೂಲಕ ಪಾಲಕರನ್ನು ಪರೋಕ್ಷವಾಗಿ ಎಚ್ಚರಿಸಿದ್ದಾರೆ.

   ಅಜ್ಜನ ಊರು ಎಂದರೆ ಎಲ್ಲರಿಗೂ ಖುಶಿ. ಇದಕ್ಕೆ ಯಾರೂ ಹೊರತಲ್ಲಾ. ಆದರೆ ಈ ಆಧುನಿಕ ಕಾಲಘಟದಲ್ಲಿ ತಂತ್ರಜ್ಞಾನ ಮುಂದುವರೆದಂತೆ ಸಂಬಂಧಗಳು ಕಳಚುತ್ತಿರುವ ಬಗ್ಗೆ ಲೇಖಕರಿಗೆ ಆತಂಕವಿದೆ. ಹಿಂದೆ ಅಜ್ಜನೂರಿಗೆ ಹೋಗಿ ಮನದುಂಬಿ ಹರುಷವ ಪಡೆವ ಕಾಲೊಂದಿತ್ತು. ಆದರೆ ಇಂದಿನ ಮಕ್ಕಳಿಗೆ ಅಂತಹ ಆನಂದ ಇಲ್ಲಾ ಎನ್ನುವ ಕಳಕಳಿಯನ್ನು ‘ ನನ್ನ ಅಜ್ಜನ ಊರು’ ಕವನದ ಮೂಲಕ ಕಟ್ಟಿಕೊಟ್ಟಿದ್ದಾರೆ.

    ” ಹಿಂದೆ ಎಂಥ ಚಂದದೂರು ಅಜ್ಜ ಅಜ್ಜಿ ಇದ್ದರು ಸಾಲದನೆಗೆ ನಾಲಿಗೆ ಬಣ್ಣಿಸಲು ಕಲ್ಪತರು’ ಎಂದಿದ್ದಾರೆ.

   ಅವಿಭಕ್ ಕುಟುಂಬದ ಕಾರಣದಿಂದ ಅಜ್ಜ, ಅಜ್ಜಿ ಅಂದ್ರ ಹೆಂಗ್ ಇರತಾರ ಎನ್ನುವ ಮಕ್ಕಳ ಪ್ರಶ್ನೆಗೆ ಉತ್ತರ ಕೊಡುವುದು ಕಠಿಣವಾಗಿದೆ. ಇಂಥಹ ಹಲವಾರು ಪ್ರಶ್ನೆಗಳನ್ನು ಕವಿ ಕವನದಲ್ಲಿ ಕೇಳಿ ಜಾಗೃತಗೊಳಿಸಿದ್ದಾರೆ.

   ಜೀವನದಲ್ಲಿ ಚಿಕ್ಕ ಚಿಕ್ಕ ಸಂಗತಿಗಳು ಬಹು ಮುಖ್ಯ. ಯಾವುದನ್ನು ಕನಿಷ್ಠವಾಗಿ ಕಾಣಬಾರದು. ಯಾರನ್ನು ಗೌಣವಾಗಿ ನೋಡಬಾರದು ಎನ್ನುವ ಸಂದೇಶವನ್ನು ಕವಿ ಸುತಾರ  ಅವರು ಪೊರಕೆಯನ್ನು ಸಂಕೇತವಾಗಿ ಬಳಿಸಿ ” ಪೊರಕೆ’ ಕವನ ಮಕ್ಕಳ ಕೈಗೆ ನೀಡಿದ್ದಾರೆ. ಕವನದ. ಆಶಯ ಹೀಗೆ ಇದೆ

   ‘ ಮನೆ ಬೀದಿ ದೇಗುಲದಲಿ ನಿರುತ ಸೇವೆಯು ಪ್ರತಿಪಲಾಕ್ಷೆ ಇಲ್ಲದಿರುವ ನಿಸರ್ಗ ದೈವವು’ ಪೊರಕೆಯನ್ನು ಎಲ್ಲಂದರಲ್ಲಿ ಬಳಕೆಯಾಗುವ ಮೌನವಾಗುವ ಪರಿಯನ್ನು ಸೂಚಿಸಿದ್ದಾರೆ. ಇದಲ್ಲದೆ ತಮ್ಮೂರಾದ ಜಮಖಂಡಿಯ ವರ್ಣನೆಯನ್ನು ಕವಿತೆಯಲ್ಲಿ ಮನೋಹರವಾಗಿ ಕಟ್ಟಿದ್ದಾರೆ.

   ಕೃಷ್ಣೆಯ ತಟದಲಿ ಸೃಷ್ಠಿಯ ಸೊಬಗಿನಲಿ ಅಂದದ ಚೆಂದದ ನಗರವಿದು ಜಂಬುಕಳಿದ್ದ ಜಮಖಂಡಿ ಪ್ರಾದೇಶಿಕ ಪ್ರೇಮ ಎಲ್ಲರಲ್ಲಿರಲಿ’ ಎನ್ನುವ ಭಾವ ಅವರದು.

   ವೈವಿದ್ಯಮಯ ವಿಷಯಗಳಿಂದ ರಚನೆಗೊಂಡ ಈ ಕವಿತೆಗಳು ಓದುಗರನ್ನು ನಿರಾಶೆಗೊಳಿಸುವುದಿಲ್ಲಾ.

      ‘ ಬಣ್ಣಕ್ಕಿಂತ ಮಿಗಿಲು’ ‘ ಭಾರತೀಯರು’ ‘ ನಮ್ಮವರು’ ಇವು ವಿಶಿಷ್ಠ ಬಗೆಯ ಕವಿತೆಗಳು. ಪ್ರತಿ ಕವನಗಳು ಮಕ್ಕಳ ಮನೋ ಲೋಕವನ್ನು ವಿಕಾಸಗೊಳಿಸುವಂತಿವೆ. ಕವಿ ಗುರುನಾಥ ಸುತಾರ ಅವರು ಪ್ರಾಸಕ್ಕೆ ಕಟಿ ಬಿದ್ದು ಕವನಗಳನ್ನು ರಚಿಸಿದಂತೆ ಇವೆ. ಸಹಜವಾಗಿ ಮಕ್ಕಳ ಕುತೂಹಲ ವಿಜ್ಞಾನದ ಬೆರಗುಗಳು, ಅವರ ಮಾತುಕತೆಗಳು ಕವಿತೆಗಳಲ್ಲಿ ತೆರದುಕೊಳ್ಳುವಂತಾಗಲಿ, ಇನ್ನಷ್ಟು ಸ್ಫೂರ್ತಿದಾಯಕ, ನಾವಿನ್ಯತೆ ಗುಣಹೊಂದಿದ ಹೊಸ ಮಾದರಿಯ ಕವಿತೆಗಳನ್ನು ರಚಿಸುವಂತಾಗಲಿ. ಈ ಮುಖೇನ ಮಕ್ಕಳ ಸಾಹಿತ್ಯದಲ್ಲಿ ಹೊಸತನ ತರುವ ಪ್ರಯತ್ನ ಗುರುನಾಥ ಸುತಾರ ಅವರು ಮಾಡಲಿ ಎಂದು ಆಶಿಸಿ ಶುಭಕೋರುವೆ.


  ವೈ,ಜಿ,ಭಗವತಿ.

4 thoughts on “ಪುಟ್ಟನ ಕನಸು’

  1. ನಿಜ ಸರ್. ಮಕ್ಕಳ ಸಾಹಿತ್ಯ ಬೆಳೆಯಬೇಕು. ಎಲ್ಲರೂ ಬರೆಯಬೇಕು…

  2. ಮಕ್ಕಳ ಮನಸ್ಸು ಅರಳಿಸುವ ಕೃತಿಗಳು ವಿನೂತನವಾಗಿ ಹೊರಬರಬೇಕು,ಅವರ ಮನೋ ಲೋಕದ ಕಲ್ಪನೆಗಳಿಗೆ ವಾಸ್ತವತೆಯ ನಿಜಾಂಶ ಪರಿಚಯಿಸುತ್ತಾ ಪ್ರಬುದ್ಧಗೊಳಿಸುವ ಕೆಲಸ ಮಕ್ಕಳ ಸಾಹಿತಿಗಳಿಂದಾಗಬೇಕು ಎಂಬ ಕಳಕಳಿಯ ಆಶಯದಿಂದ ಮೂಡಿ ಬಂದ ಲೇಖನ ಉತ್ತಮವಾಗಿದೆ ಸರ್. ಅಭಿನಂದನೆಗಳು.

Leave a Reply

Back To Top