ವಾರ್ಷಿಕ ವಿಶೇಷ-2021
ಸಾಹಿತ್ಯ ಮತ್ತು ಧರ್ಮ
ಸುಮಾವೀಣಾ
ಸಾಹಿತ್ಯ ಪದವೆ ಅತ್ಯಂತ ಚೇತೋಹಾರಿಯಾದದ್ದು. ಭಾರತೀಯ ಸಾಹಿತ್ಯ ಚರಿತ್ರೆಯ ಮೂಲ ಬೇರು ವೈದಿಕ ಸಾಹಿತ್ಯವೆ. ವೇದಗಳು,ಉಪನಿಷತ್ತುಗಳು. ರಾಮಾಯಣ, ಮಹಾಭಾರತಗಳು, ಸ್ಮೃತಿಗಳು, ಆಗಮಗಳು ಇತ್ಯಾದಿಗಳನ್ನು ಇಲ್ಲಿ ಸಾಮಯಿಕವಾಗಿ ತೆಗೆದುಕೊಳ್ಳಬಹುದು. ಭಕ್ತಿ ಆಚರಣೆಗಳನ್ನು ಹೊರತು ಪಡಿಸಿಯೂ ದೇಸಿ-ಮಾರ್ಗ, ಲೌಕಿಕ-ಆಗಮಿಕ,ಶಿಷ್ಟ-ಪರಿಶಿಷ್ಟ, ಭಕ್ತಿ-ಅನುಭಾವಗಳೂ ಸಾಹಿತ್ಯ ಚರಿತ್ರೆಯ ಅವಿಭಾಜ್ಯ ಅಂಗವಾಗಿವೆ ಎನ್ನಬಹುದು.
ಕಾಲಾನುಕ್ರಮಣಿಕೆಯ ದೃಷ್ಟಿಯಿಂದ ಸಾಹಿತ್ಯ ಚರಿತ್ರೆಯಲ್ಲಿ ಅತ್ಯಂತ ಪ್ರಾಚೀನವಾದ ಜೈನಧರ್ಮ ಹಾಗು ಜೈನ ಸಾಹಿತ್ಯವಲ್ಲದೆ ಕಲೆ ಹಾಗು ವಾಸ್ತುಶಿಲ್ಪಕ್ಕೆ, ಸಾಂಸ್ಕೃತಿಕ ವಲಯಕ್ಕೂ ನೀಡಿರುವ ಕೊಡುಗೆ ಅಪಾರವಾದದ್ದು. ‘ಜೈನ’ ಪದದ ಮೂಲ ಧಾತು ‘ಜಿನ’ ಎಂಬುದಾಗಿ ಅಂದರೆ ಗೆದ್ದವರು ಎಂದು. ಅರ್ಥಾತ್ ಕಠಿಣ ತಪಶ್ಚರ್ಯ, ಇಂದ್ರಿಯ ನಿಗ್ರಹ ಮಾಡಿ ನಿರ್ವಾಣವನ್ನು ಗಳಿಸಿಕೊಂಡವರು ಎಂಬುದಾಗಿ . ಜೈನ ಧರ್ಮಕ್ಕೆ ಹೇಗೆ ವರ್ಧಮಾನ ಮಹಾವೀರ ಮೂಲನೋ ಹಾಗೆಯೇ ಸಾಹಿತ್ಯಕ್ಕೂ ಅವನೆ ಮೂಲ. ಭದ್ರಬಾಹು ಎಂಬ ಜೈನ ಮುನಿ ತನ್ನ ಅಪಾರ ಶಿಷ್ಯ ವರ್ಗದೊಂದಿಗೆ ಶ್ರವಣಬೆಳಗೊಳಕ್ಕೆ ಬಂದಿದ್ದೆ ಕರ್ನಾಟಕದಲ್ಲಿಯೂ ಜೈನ ಧರ್ಮ ನೆಲೆ ಊರಲು ಕಾರಣವಾಯಿತು. ತಲಕಾಡಿನ ಗಂಗರು, ರಾಷ್ಟ್ರಕೂಟರು, ಹೊಯ್ಸಳರು ಈ ಧರ್ಮಕ್ಕೆ ರಾಜಾಶ್ರಯವನ್ನು ನೀಡಿದರು . ಪೂರ್ವದ ಹಳಗನ್ನಡ ದಾಟಿ ಹಳಗನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದರೆ ಕನ್ನಡ ಸಾಹಿತ್ಯದ ಗಟ್ಟಿತನಕ್ಕೆ ಜೈನ ಧರ್ಮದ ಪ್ರೇರಣೆ, ಪ್ರಬಾವಗಳು ಮುಖ್ಯ ಕಾರಣಗಳು ಎನ್ನಬಹುದು. ಜೈನ ಧರ್ಮ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ . ಇಲ್ಲಿ ಕನ್ನಡದ ಮೊದಲ ಗ್ರಂಥ ಕವಿರಾಜ ಮಾರ್ಗವೂ ಜೈನರ ಕೊಡುಗೆಯೇ . ಕನ್ನಡ ನಾಡು ನುಡಿ ,ಒಳನುಡಿಗಳ ಬಗ್ಗೆ ಈ ಕೃತಿಯ ಕರ್ತೃ ಶ್ರೀವಿಜಯ ಕವಿಗಳಿಗೆ ರಾಜಮಾರ್ಗವನ್ನು ಒದಗಿಸಿಕೊಟ್ಟಿದ್ದಾನೆ ಎನ್ನಬಹುದು. ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ನಮಗೆ ಮುಂದೆ ನೆನಪಾಗುವ ಕವಿಯೆಂದರೆ ನಾಗರಾಜ ಕವಿ ಆತನಾಡಿದ “ಪಸರಿಪ ಕನ್ನಡಕ್ಕೊಡಯನೋರ್ವನೆ ಪಂಪನಾವಗಂ” ಎಂಬ ಮಾತು. ಮಾರ್ಗದೊಳ್ ಪೊಕ್ಕು ದೇಸಿಯೊಳ್ ಪುಗುವಂತೆ, ಇಹಕ್ಕೊಂದು ಪೆಕ್ಕೊಂದು ಎಂಬಂತೆ ಬೃಹತ್ ಮತ್ತು ಮಹತ್ ಎಂಬಂತೆ ರಚಿತವಾದ ‘ವಿಕ್ರಮಾರ್ಜುನ ವಿಜಯಂ’ ಮತ್ತು ‘ಆದಿಪುರಾಣ’ ಕಾವ್ಯಗಳು ಮುಂದಿನ ಕವಿಗಳಿಗೆ ಅನುಸರಣೆಗೆ ಕೈದೀವಿಗೆಗಳಾದವು ಎನ್ನಬಹುದು. ಇವನ ರಸ ಪಥ, ಧರ್ಮಪಥದಲ್ಲಿಯೇ ಕಾವ್ಯ ಸೃಜಿಸಿದ ಇತರ ಕವಿಗಳು ಹಾಗು ಅವರ ಕೃತಿಗಳೆಂದರೆ ಪೊನ್ನ- ಶಾಂತಿನಾಥ ಪುರಾಣ, ಭುವನೈಕ ರಾಮಾಭ್ಯುದಯ,ರನ್ನ- ಅಜಿತನಾತಪುರಾಣ, ಗದಾಯುದ್ಧ,ನಾಗಚಂದ್ರ- ಮಲ್ಲಿನಾಥ ಪುರಾಣ, ರಾಮಚಂದ್ರಚರಿತಪುರಾಣ,ಜನ್ನ- ಅನಂತನಾಥ ಪುರಾಣ , ಯಶೋಧರ ಚರಿತೆ,ನೇಮಿಚಂದ್ರ- ನೇಮಿನಾಥ ಪುರಾಣ, ಲೀಲಾವತಿ ಪ್ರಬಂಧ,ನಯಸೇನ-ಧರ್ಮಾ ಮೃತ,ಬ್ರಹ್ಮ ಶಿವನ -ಸಮಯ ಪರೀಕ್ಷೆಗಳನ್ನು ಉದಾಹರಿಸಬಹುದು.ಗದ್ಯ ಕೃತಿಗಳಿಗೆ ಬಂದರೆ ಶಿವಕೋಟ್ಯಾಚಾರ್ಯರ ‘ವಡ್ಡಾರಾಧನೆ’ ಮುಖ್ಯವಾದದ್ದು. ಇದರಲ್ಲಿ ಕನ್ನಡತನವೆ ಕನ್ನಡಿಸಿದೆ ಎನ್ನಬಹುದು. ತದನಂತರದಲ್ಲಿ ಚಾವುಂಡರಾಯ ವಿರಚಿತ ‘ಚಾವುಂಡರಾಯ ಪುರಾಣ’ ಮತ್ತು ನೋಂಪಿಯ ಕಥೆಗಳನ್ನು ನೋಡಬಹುದು.
ಹಳೆಗನ್ನಡ ಸಾಹಿತ್ಯ ಎಂದರೆ ಇಲ್ಲಿನ ಶೈಲಿ ಚಂಪೂ ಮತ್ತು ಅಕ್ಷರಗಣ ಛಂದಸ್ಸು, ಖ್ಯಾತಕರ್ಣ ಕರ್ನಾಟಕ ವೃತ್ತಗಳು ನೆನಪಾಗುತ್ತವೆ. ಸಂಸ್ಕೃತ ಭೂಯಿಷ್ಟ ಕಾವ್ಯದ ನಿರಂತರತೆ ಕಡಿಮೆಯಾಗಿದ್ದು ಪಂಪನನಿಂದಲೇ ಎನ್ನಬಹುದು. ಇದಲ್ಲದೆ ರತ್ನಾಕರವರ್ಣಿ ಬರೆದಿರುವ ‘ಭರತೇಶ ವೈಭವ’ ಕನ್ನಡದ ಅಪ್ರತಿಮ ಕಾವ್ಯಗಳಲ್ಲಿ ಒಂದಾಗಿದೆ.ರಾಮಾಯಣ ಮಹಾಭಾರತಗಳು ಕನ್ನಡಕ್ಕೆ ಬರಲು ಜೈನಕವಿಗಳೆ ಕಾರಣ ಎನ್ನಬಹುದು. ಬೇರೆ ಬೇರೆ ಆಯಾಮಗಳಲ್ಲಿ ರಾಮಾಯಣದಂತಹ ಕಾವ್ಯವನ್ನು ನೋಡಿ ‘ರಾಮಚಂದ್ರಚರಿತ ಪುರಾಣ’ವೆಂಬ ಅಮೂಲ್ಯ ಕೃತಿ ನೀಡಿದ್ದು ನಾಗಚಂದ್ರನ ಹೆಗ್ಗಳಿಕೆ ಎನ್ನಬಹುದು. ಇದೇ ಅವಧಿಯಲ್ಲಿ ಮೊದಲ ಪ್ರೇಮ ಕಾವ್ಯವಾಗಿ ‘ಲೀಲಾವತಿ’ ಮತ್ತು ಪ್ರಣಯ ಕಾವ್ಯವಾಗಿ ಬಂದ ಯಶೋಧರ ಚರಿತೆಗಳು ಇಂದಿಗೂ ಸಂಶೋಧಕರ ಪ್ರಮುಖ ದ್ರವ್ಯ ಎನ್ನಬಹುದು. ಅಚ್ಚಗನ್ನಡವನ್ನೆ ಬಳಸುವೆ ಎಂದು ಪಣ ತೊಟ್ಟ ಆಂಡಯ್ಯನ ‘ಕಬ್ಬಿಗರ ಕಾವ’ವೂ ಸಾಹಿತ್ಯ ಚರಿತ್ರೆಯ ದೃಷ್ಠಿಯಿಂದ ಪ್ರಮುಖವೇ ಸರಿ!ಹೀಗೆ ಜೈನ ಸಾಹಿತ್ಯ ಹತ್ತನೆ ಶತಮಾನದ ಆದಿಯಿಂದಲೂ ತನ್ನ ಪ್ರಾಬಲ್ಯವನ್ನು ಕಂಡುಕೊಂಡಿತ್ತು ಎನ್ನಬಹುದು. ಹಾಗಾಗಿ ಈ ಯುಗವನ್ನೆ ‘ಜೈನಯುಗ’, ‘ಪಂಪ ಯುಗ’ ಎಂದು ಕರೆಯುವುದು.
ವಚನ ಸಾಹಿತ್ಯ
ಜೈನ ಸಾಹಿತ್ಯದ ನಂತರ ಜನಸಾಮಾನ್ಯರ ಸಾಹಿತ್ಯ ಅರ್ಥಾತ್ ವಚನ ಸಾಹಿತ್ಯ ಚಳವಳಿ. ಈ ಸಾಹಿತ್ಯವನ್ನು ಗುರುಮನೆ ಅರಮನೆ ದಾಟಿ ನೆರೆಮನೆಗಳಿಗೂ ಹರಿದು ಬಂದ ಜನಸಾಮಾನ್ಯರ ಸಾಹಿತ್ಯವೆಂದೇ ಕರೆಯುತ್ತೇವೆ. ಇಲ್ಲಿ ಕೊಂಡಗುಳಿ ಕೇಶಿರಾಜ, ಜೇಡರ ದಾಸಿಮಯ್ಯ, ಬಸವಣ್ಣ, ಅಕ್ಕಮಹಾದೇವಿ ಮೊದಲಾದವರ ಹೆಸರುಗಳು ಕೇಳಿ ಬರುತ್ತವೆ. ಜನರಾಡುವ ಮಾತಿನ ಶೈಲಿಯಲ್ಲಿಯೇ ಜೀವನ ದರ್ಶನ, ಸಾಹಿತ್ಯದರ್ಶನ ಮೌಲ್ಯಗಳ ದರ್ಶನ ಮಾಡಿದ ಹೆಗ್ಗಳಿಕೆ ಈ ಸಾಹಿತ್ಯಕ್ಕಿದೆ.
ಕ್ರಿಶ. 1230 ರಲ್ಲಿ ಅವಧಿಯಲ್ಲಿ ಆದಯ್ಯ ನೆಂಬ ವಚನಕಾರ ವೀರಶೈವ ಎಂಬ ಪದವನ್ನು ಮೊದಲಿಗೆ ಬಳಸುತ್ತಾನೆ. ಇದೇ ವೀರಶೈವ ಪದದ ಮೊದಲ ಉಲ್ಲಕೇಖವಾದರೆ ವೀರಶೈವ ಧರ್ಮದ ದಾಖಲೆಗಳು ಕ್ರಿ.ಶ 1160 ರ ಸುಮಾರಿಗೆ ದೊರೆಯುತ್ತವೆ. ಧರ್ಮ- ವೇದ ಮತ್ತು ಉಪನಿಷತ್ಗಳ ಸಾರವನ್ನು ಹೀರಿ ಬೆಳೆದ ಧರ್ಮ ಇದು ಎನ್ನಬಹುದು. ಅಷ್ಟಾವರಣಗಳು ಪಂಚಾಚಾರಗಳು , ಷಟ್ಸ್ಥಲಗಳು ಇಲ್ಲಿನ ಪ್ರಮುಖ ಅಂಶಗಳು. ಬಸವ ಅಲ್ಲಮಾದಿ ವಚನಕಾರರ ನೇತ್ರತ್ವದ ವಿರಶೈವಧರ್ಮದ ಶ್ರೇಷ್ಟತೆ ಅಡಗಿರುವುದು ವಿಶ್ವಪ್ರೇಮ, ಜಾತ್ಯಾತೀತತೆ, ಲಿಂಗಾರಾಹಿತ್ಯತೆ , ಪ್ರಾಮಾಣಿಕತೆಗಳೆ ಇಲ್ಲಿನ ಪ್ರಮುಖ ವಿಚಾರ ಧಾರೆಗಳು.
ಕನ್ನಡ ಸಾಹಿತ್ಯಕ್ಕೆ ವೀರ ಶೈವ ಧರ್ಮದ ಕೊಡುಗೆ ಎಂದರೆ ವಚನಗಳು, ರಗಳೆಗಳು ಚಂಪೂ ಕಾವ್ಯಗಳು ಅದರಲ್ಲಿಯೂ ಪ್ರ,ಮುಖ ಕೊಡುಗೆ ಎಂದರೆ ಭಾರತೀಯ ಸಾಹಿತ್ಯ ಮಾತ್ರವಲ್ಲದೆ ವಿಶ್ವ ಸಾಹಿತ್ಯಕ್ಕೆ ವಚನಗಳು. ವಚನ ಎಂದರೆ ಭಾಷೆ ಕೊಟ್ಟ ಮಾತು. Given words ಎನ್ನುತ್ತಾರೆ. ನಾವಾಡುವ ಮಾತುಗಳಲ್ಲಿಯೇ ವಚನಕಾರರು ತಮ್ಮ ಮನದಿಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಸಂಸ್ಕೃತದ ‘ದಂಡಕ’ಗಳು, ತಮಿಳಿನ ‘ತೇವಾರಂ’ನ ಮೂಲವನ್ನು ಇಲ್ಲಿ ಕಾಣಬಹುದು. ಆದ್ಯ ವಚನಕಾರನೆಂದು ದಾಸಿಮಯ್ಯನವರನ್ನು ಹೇಳಿದರು “ನಿಮ್ಮ ಶರಣರ ಸೂಳ್ನುಡಿಯನೊಂದರಗಳಿಗೆಯಿತ್ತಡೆ ಕಾಣಾ ರಾಮನಾಥ” ಎಂದಿರುವಲ್ಲಿ ‘ಸೂಳ್ನುಡಿ’ ಎಂಬ ಪದ ದಾಸಿಮಯ್ಯನವರಿಗಿಂತಲೂ ಹಿಂದೆಯೇ ವಚನಕಾರರು ಇದ್ದರು ಎಂಬ ಮಾಹಿತಿಯನ್ನು ಹೇಳುತ್ತದೆ.
ವಚನಕಾರರೆಂದರೆ ಕಾಯಕನಿಷ್ಠೆ, ದುಡಿದೇ ತಿನ್ನುವ ಸಮಾಜವಾದದ ಸ್ಪಷ್ಟ ಅನುಯಾಯಿಗಳೆಂದು ಇಲ್ಲಿ ತಿಳಿದುಬರುತ್ತದೆ. ಇಲ್ಲಿ ಕಾಯಕ ಜೀವಿಗಳೆಂದು ಅವರು ಮಾಡುವ ಕೆಲಸಗಳಿಂದಲೇ ಅವರನ್ನು ಗುರುತು ಹಿಡಿಯಲಾಗುತ್ತಿತ್ತು. ವೈದ್ಯ ಸಂಗಣ್ಣ, ಮಡಿವಾಳ ಮಾಚಿದೇವ, ಸೂಳೆ ಸಂಕವ್ವೆ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ , ಹಡಪದ ಅಪ್ಪಣ್ಣ, ಮುಂತಾಗಿ ಅಂದರೆ ವಚನಕಾರರು ತಮ್ಮನ್ನು ಕಾಯಕದ ಮೂಲಕವೇ ಗುರುತಿಸಿಕೊಳ್ಳಲು ಬಯಸುತ್ತಿದ್ದರು. ಇದು ಅವರ ಕಾಯಕದ ನಿಷ್ಟೆ ಮತ್ತು ಒಲವನ್ನು ನಾವಿಲ್ಲಿ ಅಸನುಸಂಧಾನಿಸಬಹುದು.
ವಚನಗಳು ಸಾಮಾಜಿ ಚಿಂತನೆಗಳು
ವಚನಕಾರರು ಯಾವಾಗಲೂ ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಿದ್ದರು. ಸಮಾಜದಲ್ಲಿ ಸರಳ ಮತ್ತು ಪ್ರಾಮಾಣಿಕವಾಗಿ ಬದುಕಲು ಕರೆ ಕೊಟ್ಟು ಸರ್ವರಲ್ಲೂ ಪ್ರೀತಿಯ ಹೊನಲನ್ನು ಕಂಡವರು. ಎಂದು ಹೇಳುವ ಮೂಲಕ ಸಮಾಜದಲ್ಲಿ ವ್ಯಕ್ತಿಯ ನಡವಳಿಕೆ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟವರು. ಕೊಲುವನೆ ಮಾದಿಗ ಹೊಲಸು ತಿಂಬುವನೆ ಹೊಲೆಯ, ಕುಲವೇನೋ ಆವಂದಿರ ಕುಲವೇನೋ ಎಂಬಲ್ಲಿ ಜಾತಿ ಪದ್ಧತಿಯ ತಿರಸ್ಕಾರ,ಲೋಕದ ಡೊಂಕ ನೀವೇಕೆ ತಿದ್ದುವಿರಿ, ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬಲ್ಲಿ ಸಾಮಾಜಿಕರ ಬದುಕು ಹೇಗಿರಬೇಕೆಂದು ಎಂದು ಅನುಸಂಧಾನಿಸಿದವರು.
ವಚನಗಳು ಮತ್ತು ಧಾರ್ಮಿಕ ಚಿಂತನೆಗಳು
ಮಾನವ ಧರ್ಮವೇ ಅತ್ಯಂತ ಮುಖ್ಯವೆಂದು ಒಕ್ಕೊರಲಿನಿಂದ ತಮ್ಮ ವಚನಗಳ ಮೂಲಕ ಸಾಮಾಜಿಕರಿಗೆ ಅರುಹಿದ್ದಾರೆ. ಸತ್ಯ, ದಯೆ, ಅಹಿಂಸೆ, ವಿನಯ, ಮೃದು ನಡವಳಿಕೆ ಆತ್ಮಾವಲೋಕನ ಮುಂತಾದ ಅನೇಕ ಪರಿಭಾವನೆಗಳ ಬಗ್ಗೆ ವಚನಕಾರರು ಹೇಳಿದ್ದಾರೆ. ‘ದಯವಿಲ್ಲದ ಧರ್ಮ ಯಾವುದಯ್ಯಾ’, ‘ಸತ್ಯವ ನುಡಿವುದೇ ದೇವಲೋಕ’ ಮುಂತಾದ ವಚನಗಳು ಅವರ ಧರ್ಮದ ನೆಲೆಯನ್ನು ತೋರುತ್ತದೆ. ಅಲ್ಲದೆ ಈ ವಚನಕಾರರು ಪ್ರಖರವಾಗಿ ಡಾಂಭಿಕ ಭಕ್ತಿಯನ್ನು ಖಂಡಿಸುತ್ತಾರೆ. ಇದಕ್ಕೆ ಉದಾಹರಣೆ ‘ಕಲ್ಲ ನಾಗರ ಕಂಡರೆ ಹಾಲನೆರೆ’ ಎಂಬರು, ಬೆತ್ತಲೆ ಇದ್ದವರೆಲ್ಲಾ ಕತ್ತೆಯ ಮಕ್ಕಳು, ಒಲವಿಲ್ಲದ ಪೂಜೆ ಮುಂತಾದ ವಚನಗಳು ಉಳ್ಳವರು ಶಿವಾಲಯವ ಮಾಡುವರು ಇದು ವಚನಕಾರರ ದೇಗುಲ ಕಲ್ಪನೆಯೇ ಸರಿ! ಇಲ್ಲಿ ವಿಗ್ರಹಾರಾಧನೆಯನ್ನು ವಿರೋಧಿಸುವುದನ್ನು ಕಾಣಬಹುದು..
ವಚನಗಳು ಮತ್ತು ರಾಜಕೀಯ ಚಿಂತನೆಗಳು ಎಂದಾಗ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸೆಣೆಸಲು ಇವರು ಮುಂದಾಗುತ್ತಾರೆ. ಕೆಂಬಾವಿ ಬೋಗಣ್ಣ ಆಗಿನ ಕಾಲದಲ್ಲಿಯೇ ಅರಸೊತ್ತಿಗೆಯ ವಿರುದ್ಧ ತಿರುಗಿ ನಿಂತವರು. ಬಸವಣ್ಣನವರೂ ಕೂಡ “ಆನು ಬಿಜ್ಜಳಂಗೆರಗುವೆನೆ ಅಯ್ಯಾ” ಎಂದು ನೇರವಾಗಿ ಅರಸುತನಕ್ಕೆ ವಿರೋಧತ್ವವನ್ನು ವ್ಯಕ್ತಪಡಿಸಿದ್ದಾರೆ. “ವ್ಯಾಧನೊಂದು ಮೊಲನ ತಂದರೆ ………” “ಕೆಟ್ಟಿತ್ತು ಕಲ್ಯಾಣ ಹಾಳಾಯ್ತು ನೋಡಾ…” ಎಂಬಂತಹ ವಚನಗಳಲ್ಲಿ ಅರಸುತನ ಮತ್ತು ರಾಜತ್ವದ ವಿರುದ್ಧ ಪ್ರತಿಭಟನೆ ಇರುವುದನ್ನು ನೋಡುವುದು ಅರಸರುಗಳಿಗೆ ತಲೆಬಾಗುವುದನ್ನು ಗುಲಾಮತನ ಎಂದೇ ಭಾವಿಸಿದ್ದರು. ಒಟ್ಟಾರೆಯಾಗಿ ವೀರಶೈವ ಧರ್ಮ , ವಚನಕಾರರ ಮಾತು ಮತ್ತು ವಚನಗಳ ಮುಖಾಂತರವಾಗಿ ರಾಜಕೀಯವಾಗಿ ಧಾರ್ಮಿಕವಾಗಿ ಸಾಮಾಜಿಕವಾಗಿ ಮತ್ತು ಸಾಹಿತ್ಯಿಕವಾಗಿ ಕನ್ನಡ ನಾಡು ಮತ್ತು ಭಾಷೆಗೆ ಹೊಸ ತಿರುವನ್ನು ಕೊಟ್ಟಿತು. ವ್ಯಷ್ಟಿ ಹಿತಕ್ಕಿಂತ ಸಮಷ್ಟಿ ಹಿತ ಇಲ್ಲಿ ಮುಖ್ಯವಾಯಿತು. ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು ಎಂಬಂತಹ ವಿಚಾರವನ್ನು ತಮ್ಮಲ್ಲಿ ಅಂತರ್ಗತ ಮಾಡಿಕೊಂಡು ಅಗಲೇ ಬದುಕಿದ್ದವರು ಇವರು.
ವೈದಿಕ ಧರ್ಮ ಮತ್ತು ಕನ್ನಡ ಸಾಹಿತ್ಯ
ಭಾರತದಲ್ಲಿನ ಅತಿ ಪ್ರಾಚೀನ ಧರ್ಮಗಳಲ್ಲಿ ವೈದಿಕ ಧರ್ಮವೂ ಒಂದು. ಆರಂಭಿಕ ಹಂತದಿಂದಲೂ ಇದು ಇಡೀ ಭಾರತಾದ್ಯಾದ್ಯಂತ ತನ್ನ ಪ್ರಭಾವ ಶಾಲಿ ಹಿಡಿತವನ್ನು ಹೊಂದಿದೆ. ಭಾರತದ ಪ್ರಾಚೀನ ಸಂಸ್ಕೃತಿಯ ಕುರುಹು ಮತ್ತು ಆಗರಗಳಾದ ವೇದ ಉಪನಿಷತ್ ರಾಮಾಯಣ, ಮಹಾಭಾರತ, ಸ್ಮೃತಿಗಳು ಮುಂತಾದ ಪಠ್ಯಗಳು ವೈದಿಕ ಧರ್ಮದ ಕೊಡುಗೆಯೇ . ವೈದಿಕ ಧರ್ಮದಲ್ಲಿ ಅದ್ವೈತ, ದ್ವೈತ ಮತ್ತು ವಿಶಿಷ್ಟಾದ್ವೈತ ಮುಂತಾದ ಶಾಖೆಗಳನ್ನು ನೋಡಬಹುದು.ಸಾಹಿತ್ಯಿಕವಾಗಿ ವೈದಿಕ ಧರ್ಮದ ಕೊಡುಗೆ ಕನ್ನ ಡ ಸಾಹಿತಚ್ಯಕ್ಕೆ ಗುಣ ಮತ್ತು ಗಾತ್ರದಲ್ಲಿ ಮಹತ್ತರವಾದುದಾಗಿದೆ, ಈ ಸಾಹಿತ್ಯವನ್ನು ಎರಡು ಭಾಗಗಳಾಗಿ ಸಮೀಕ್ಷಿಸಬಹುದು ಎನಿಸುತ್ತದೆ. ಪರಂಪರೆಯ ಮುಂದುವರಿಕೆಯಾಗಿ ಬಂದ ಸಾಹಿತ್ಯ ಜಗನ್ನಾಥವಿಜಯ, ಕುಮಾರವ್ಯಾಸಭಾರತ, ಜೈಮಿನಿಭಾರತ, ದಾಸಸಾಹಿತ್ಯ ದಾಸರುಗಳ ಕೀರ್ತನೆ, ಉಗಾಭೋಗ, ಸುಳಾದಿ ಇತ್ಯಾದಿಗಳನ್ನು ಉಲ್ಲೇಖಿಸಬಹುದು.
ವಚನಸಾಹಿತ್ಯದ ನಂತರದಲ್ಲಿ ಜನಸಾಮಾನ್ಯರಿಗಾಗಿ ರಚಿಸಿದ ಸಾಹಿತ್ಯವೆಂದರೆ ದಾಸ ಸಾಹಿತ್ಯ. ಧರ್ಮಪ್ರಸಾರ ಮತ್ತು ಕಾವ್ಯಪ್ರಸಾರ ಎರಡೂ ದಾಸ ಸಾಹಿತ್ಯದ ಉದ್ದೇಶವಾಗಿತ್ತು. ಹರಿಭಕ್ತಿ ಪಾರಮ್ಯ, ಕೃಷ್ಣನ ಲೀಲೆ ಸಾಮಾಜಿಕ ಡಂಭಾಚಾರ ಮತ್ತು ಮೂಢನಂಬಿಕೆಗಳ ಬಗೆಗೆ ವಿಡಂಬನೆ ಹಾಗು ಖಂಡನೆ ಆತ್ಮ ನಿರೀಕ್ಷಣೆ ಹಾಗು ಭಾಗವತತತ್ವ ಇವು ಮುಖ್ಯವಾಗಿ ದಾಸರ ಕೀರ್ತನೆಯ ವಸ್ತುಗಳು. ಸುಮಾರು 14 ,1 5ನೆ ಶತಮಾನದ ನರಹರಿ ತೀರ್ಥರಿಂದ ಮೊದಲಾಗಿ ಶ್ರೀಪಾದರಾಯರು ಕನಕದಾಸರಿಂದ ಕೀರ್ತನ ಸಾಹಿತ್ಯ ವಿಫುಲವಾಗಿ ಬೆಳೆಯಿತು, ನಂತರ ಇವರಲ್ಲೆ ದಾಸಕೂಟ, ವ್ಯಾಸಕೂಟಗಳೆಂಬ ಧರ್ಮ ಏರ್ಪಟ್ಟಿತು. ‘ದಾಸರೆಂದರೆ ಪುರಂದರದಾಸರಯ್ಯಾ’ ಎಂಬ ಮಾತುಗಳು ಪುರಂದರದಾಸರಿಗೆ ಅನ್ವರ್ಥವಾಗಿ ಬಂದವು. ತನ್ನ ಕೀರ್ತನೆಗಳ ಮೂಲಕ ಜನರಲ್ಲಿ ಧಾರ್ಮಿಕ ಬುದ್ಧಿಯನ್ನು ಜಾಗೃತಗೊಳಿಸಿದರು ‘ಆಡಿಸಿದೆಳೋಶೋದೆ’, ‘ರಾಗಿ ತಂದೀರಾ’, ‘ಉದರವೈರಾಗ್ಯವಿದು..’ ಮುಂತಾದ ಕೀರ್ತನೆಗಳು ಇಲ್ಲಿ ಬರುತ್ತವೆ. ಕರ್ನಾಟಕ ಶಾಸ್ತ್ರೀಯ ರಾಗಗಳಿಗೆ ಅನ್ವಯಿಸಿ ಹಾಡಬಹುದು. ಆದ್ದರಿಂದ ಇವರನ್ನು ಕರ್ನಾಟಕ ಸಂಗೀತ ಪಿತಾಮಹಾ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಆತ್ಮನಿವೇದನೆ, ಮಾಧ್ವ ಸಿದ್ದಾಂತದ ಪ್ರಚಾರ, ಸಾಮಾಜಿಕ ವಿಡಂಬಣೆ ಮತ್ತು ಅಂಧ ಶ್ರದ್ಧೆಯನ್ನು ಖಂಡಿಸುವ ಅಂಶಗಳನ್ನು ಪುರಂದರರ ಕೀರ್ತನೆಗಳು ಒಳಗೊಂಡಿವೆ.
ಕನಕದಾಸರು ದಾಸರಲ್ಲಿ ಅಪಾರವಾದ ಕೀರ್ತನೆಗಳೊಂದಿಗೆ ಮಹತ್ವದ ಕೃತಿಗಳನ್ನು ರಚಿಸಿದವರು. ಸಾಮಾಜಿಕವಾಗಿ ಕೆಳಹಂತದ ವರ್ಗದಿಂದ ಬಂದ ಇವರ ಕೀರ್ತನೆಗಳಲ್ಲಿ ತೀವ್ರವಾದ ಚಿಕಿತ್ಸಕ ದೃಷ್ಟಿಕೋನವಿದೆ ಹಾಗಾಗಿ ಇವರನ್ನು ದಾಸರಲ್ಲಿ ಕ್ರಾಂತಿಕಾರಿಗಳು ಎಂದು ಬಿಂಬಿತವಾಗಿದ್ದಾರೆ.
ತಮ್ಮ ಕೃತಿಗಳಲ್ಲಿ ಡಾಂಭಿಕ ಭಕ್ತಿ ಮತ್ತು ಮೂಢನಂಬಿಕೆಗಳು ಮುಂತಾದ ಸಾಮಾಜಿಕ ಅನಿಷ್ಟಗಳನ್ನು ಟೀಕಿಸಿದ್ದಾರೆ. ತಲ್ಲಣಿಸದಿರು ಕಂಡ್ಯಾ ತಾಳುಮನವೆ ಕುಲಕುಲವೆಂದು ಹೊಡೆದಾಡದಿರಿ, ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಕೀರ್ತನೆಗಳನ್ನು ಹೆಸರಿಸಬಹುದು.
ಜನತಾ ದೃಷ್ಟಿ ಜನಾರ್ಧನ ದೃಷ್ಟಿ ಎರೆಡೂ ಈ ಕಾಲಘಟ್ಟದಲ್ಲಿ ಹರಳುಗಟ್ಟಿದ್ದವು ಎನ್ನಬಹುದು. ಕನ್ನಡ ಸಾಹಿತ್ಯಕ್ಕೆ ಸುಳಾದಿಗಳು, ಉಗಾಭೋಗಗಳು ಮುಂಡಿಗೆಗಳು ಈ ಕಾಲದಲ್ಲಿಯೇ ಬಂದವು. ತಾಳ, ಲಯ, ಸಂಗೀತ, ಪ್ರಧಾನ ಕೀರ್ತನೆಗಳು ಇಲ್ಲಿ ಬಂದವು ಮನಸ್ಸು ಹಗುರಾಗಿಸಿ ಸಮಾಜಕ್ಕೆ ಅಂಟಿದ್ದ ಜಾಡ್ಯವನ್ನು ಹೋಗಲಾಡಿಸುವ ಸಾಮಾಜಿಕ ಸುಧಾರಣೆ, ಮೂಡನಂಬಿಕೆ, ಅಂಧ ಶ್ರದ್ಧೆಗಳನ್ನು ಇಲ್ಲವಾಗಿಸುವ ಕುರಿತು, ಮಾನವೀಯವಾದ ಉತ್ತಮ ಬದುಕನ್ನು ಬದುಕುವ ಬಗ್ಗೆ ಶಿಕ್ಷಣ ನೀಡಿದರು ದಾಸರು.
ಕ್ರೈಸ್ತ ಧರ್ಮ ಮತ್ತು ಕನ್ನಡ ಸಾಹಿತ್ಯ
ಸುಮಾರು ಕ್ರಿಶ. 12600 ಸುಮಾರಿಗೆ ಭಾರತಕ್ಕೆ ಆಗಮಿಸಿದ ಪಾಶ್ಚಾತ್ಯರೊಂದಿಗೆ ಕ್ರೈಸ್ತ ಧರ್ಮ ಭಾರತಕ್ಕೆ ಕಾಲಿಟ್ಟಿತು. ವ್ಯಾಪಾರದೊದ್ದೇಶಕ್ಕೆ ಬಂದ ಪಾಶ್ಚಾತ್ಯರು ಧರ್ಮ ಪ್ರಸಾರಕ್ಕೂ ಒತ್ತು ಕೊಟ್ಟರು. ಹೀಗೆ ಪಾಶ್ಚಾತ್ಯರ ಆಗಮನ ಭಾರತದಲ್ಲಿ ಪಾಶ್ಚಾತ್ಯೀಕರಣ ಮತ್ತು ಸಂಸ್ಕೃತಿಕರಣಗಳಿಗೆ ಕಾರಣವಾಯಿತು. ಈ ಮೂಲಕ ಭಾರತೀಯುರು ಪಾಶ್ಚಾತ್ಯ ಶಿಕ್ಷಣದ ಮೂಲಕ ಹೊಸ ವಿಚಾರಗಳಿಗೆ ತಮ್ಮನ್ನು ತೆರೆದುಕೊಂಡು ಅದೇ ವೇಳೆಗೆ ಆಡಳಿತದ ಅನುಕೂಲತೆಗೋ ಅಥವಾ ಮತ್ತೊಂದಕ್ಕೋ ಕಾರಣವೇನೇ ಇರಲಿ ಪಾಶ್ಚಾತ್ಯರು ಭಾರತೀಯ ಸಂಸ್ಕೃತಿಯ ವೇದ ಉಪನಿಷತ್, ಪುರಾಣ, ಸಂಶೋಧಿಸಿ ಅಭ್ಯಾಸ ಕೈಗೊಂಡರು ಇದರ ಸಂಗಡ ಪ್ರಾಂತೀಯ ಭಾಷೆಗಳು ಮತ್ತು ಸಂಸ್ಕೃತಿಯ ವೈಜ್ಞಾನಿಕ ಅಧ್ಯಯನವನ್ನು ಪ್ರಾರಂಭಿಸಿ ಆ ಮೂಲಕ ಆಯಾ ವಲಯಗಳ ಬಗ್ಗೆ ಬೆಳಕು ಚೆಲ್ಲಿದರು. ಇದರ ಪ್ರಭಾವ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ವಲಯಗಳ ಮೇಲೆ ಅಮೂಲಾಗ್ರ ಬದಲಾವಣೆಗಳಾದವು. ಮುಖ್ಯವಾಗಿ ಭಾಷಾ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆ ಅನನ್ಯ. ಕನ್ನಡದ ಅನೇಕ ಶಾಸನಗಳನ್ನು ಸಂಗ್ರಹಿಸುವ ಎಫಿಗ್ರಾಫಿಯಾ ಕರ್ನಾಟಕದ ಕೆಲವು ಸಂಪುಟಗಳನ್ನು ತಂದರು. ಬಿ.ಎಲ್. ರೈಸ್, ಫ್ಲೀಟ್ ಮುಂತಾದ ಸೇವೆ ಇಲ್ಲಿ ಸ್ಮರಣೀಯವಾದದ್ದು ಪ್ರಾಚೀನ ಕನ್ನಡ ಸಾಹಿತ್ಯದ ಅನೇಕ ಮುಖ್ಯ ಕಾವ್ಯಗಳನ್ನು ಛಂದಸ್ಸು ಮತ್ತು ವ್ಯಾಕರಣ ಗ್ರಂಥಗಳನ್ನು ಸಂಪಾದಿಸಿ ಸಂಶೋಧಿಸಿ ಬೆಳಕಿಗೆ ತಂದು ಅನೇಕ ಕೈಫಿಯತ್ತುಗಳು ಬಖೈರುಗಳು. ಜಾನಪದ ಗೀತೆಗಳು ಲಾವಣಿ ಇತ್ಯಾದಿಗಳನ್ನು ಸಂಗ್ರಹಿಸಿ ಕನ್ನಡ ಸಂಸ್ಕೃತಿಯ ದಾಖಲೆಗಳನ್ನು ಜತನಗೊಳಿಸಿದ್ದಾರೆ. ಬೆಂಜಮಿನ್ ರೈಸ್ ಜರ್ಮನ್ ವಿದ್ವಾಂಸ . ಈತ ತಮಿಳು, ತೆಲುಗು, ಕನ್ನಡ, ಸಂಸ್ಕೃತ, ಪರ್ಶಿಯನ್, ಲ್ಯಾಟಿನ್, ಜರ್ಮನ್ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದುಕೊಂಡಿದ್ದವನು. ಈತ ವೇದಸಾರ ಜ್ಞಾನೋಪದೇಶ ಎಂಬ ಕೃತಿಗಳನ್ನು ಛಂದಸ್ಸು ಹಾಗು ಕಾವ್ಯ ಮೀಮಾಂಸೆಯ ಗ್ರಂಥಗಳನ್ನು ಸಂಪಾದಿಸಿದ್ದಾನೆ. ಅವುಗಳಲ್ಲಿ ಮುಖ್ಯವಾಗಿ ಕರ್ಣಾಟಕ ಭಾಷಾಭೂಷಣ,. ಕರ್ನಾಟಕ ಶಬ್ದಾನುಶಾಸನ ,ಕವಿರಾಜ ಮಾರ್ಗ ಮುಂತಾದವು ಸೇರಿವೆ.
ರೆವೆರಂಡ್ ಎಫ್ ಕಿಟೆಲ್ ಕನ್ನಡ ನಿಘಂಟು ಕ್ಷೇತ್ರದಲ್ಲಿ ಬಹಳ ದೊಡ್ಡದು ಈತನೂ ಬಹುಭಾಷಾ ಕೋವಿದ. ಈತ ಜರ್ಮನಿಯ ಬಾಸೆಲ್ ಮಿಷನ್ನಿನ ವಿದ್ಯಾರ್ಥಿ. ಕನ್ನಡ ಸಂಕೇತಗಳು, ಅರುಣೋದಯ ಮುಂತಾದ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿ ಭಾಷಾ ಬೆಳವಣಿಗೆಯ ಬಗ್ಗೆ ಉಪಕ್ರಮಗಳನ್ನು ತೆಗೆದುಕೊಂಡ ಎನ್ನಬಹುದು.. ಕನ್ನಡ ನಿಘಂಟು ಈತನ ದೊಡ್ಡ ಕೊಡುಗೆ ಹಳಗನ್ನಡ ಜನಪದ ಸಾಹಿತ್ಯಕ್ಷೇತ್ರ ಕಾರ್ಯಗಳಿಂದ ಅನೇಕ ಪದಗಳನ್ನು ಕ್ರೋಢೀಕರಿಸಿದ್ದು ಇಂದಿಗೂ ಅದು ಅಧಿಕೃತವಾಗಿದೆ. ‘ಛಂದೋಂಬುಧಿ’, ‘ಛಂದಶ್ಯಾಸ್ತ್ರ’ ಈತನ ಸಂಪಾದಿತ ಕೃತಿಗಳಾಗಿವೆ.
ಈ.ಪಿ. ರೈಸ್ ಕನ್ನಡ ಸಾಹಿತ್ಯದ ಚರಿತ್ರೆ ರಚನೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದವನು. Histiory of Kannada Litreture ಎಂಬುದು ಈತನ ಕೃತಿ. ಬೈಬಲಿನ ಮೊದಲ ಭಾಗ ಹಳೆಯ ಒಡಂಬಡಿಕೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾನೆರ ಕಿತ್ತೂರು ಕವನ, ರಾಯಣ್ಣನ ದಂಗೆ, ನರಗುಂದದ ವಶ ಮೊದಲಾದ ಲಾವಣಿಗಳನ್ನು ಜೆ.ಎಫ್. ಫ್ಲೀಟ್ ಸಂಗ್ರಹಿಸಿ ಪ್ರಕಟಿಸಿರುವುದಲ್ಲದೆ ಅನೇಕ ಶಾಸನಗಳನ್ನು ಶೋಧಿಸಿ ಎಫಿಗ್ರಾಫಿಯಾ ಕರ್ನಾಟಕದಲ್ಲೂ ಪ್ರಕಟಿಸಿದನು.ಕನ್ನಡದ ನವೋದಯ ಕವಿಗಳು ಯೇಸು ಜೀವನದಿಂದ ಬಹಳ ಪ್ರಭಾವಿತರಾಗಿ ಗೋವಿಂದ ಪೈ, ಕುವೆಂಪು, ಸುರಂ ಎಕ್ಕುಂಡಿ ಎಂ.ವೀ. ಸೀತಾರಾಮಯ್ಯ, ಬೇಂದ್ರೆ ಮುಂತಾದವರು ಆತನನ್ನು ಆಧರಿಸಿ ಕಾವ್ಯ ರಚಿಸಿದ್ದಾರೆ.
ಒಟ್ಟಾರೆಯಾಗಿ ಪಾಶ್ಚಾತ್ಯರು ಮತ್ತು ಅವರು ಅನುಸರಿಸುತ್ತಿದ್ದ ಕ್ರೈಸ್ತ ಧರ್ಮ ಭಾರತದ ಮೇಲೆ ಕನ್ನಡ ನಾಡಿನ ಮೇಲೆ ಅಪಾರ ಪ್ರಾಭವ ಬೀರಿದೆ.
ಇಸ್ಲಾಂ ಧರ್ಮ ಮತ್ತು ಕನ್ನಡ ಸಾಹಿತ್ಯ.
ಭಾತರದಲ್ಲಿರುವ ಹಲವು ಮತಗಳಲ್ಲಿ ಇಸ್ಲಾಂ ಮತವೂ ಸಹ ಮುಖ್ಯವಾದುದು. 1026ರ ವೇಳೆಗೆ ಇಸ್ಲಾಂ ಧರ್ಮ ಭಾರತಕ್ಕೆ ಪ್ರವೇಶಿಸಿತು ಎನ್ನಬಹುದು. ಆದರೆ ಅದಕ್ಕೂ ಮೊದಲೆ ವ್ಯಾಪಾರದ ಉದ್ದೇಶದಿಂದ ಮಹಮದೀಯರ ಹಡಗು ಕರ್ನಾಟಕದ ರೇವು ಪಟ್ಟಣದ ಬಳಿ ಬಂದಿತ್ತೆಂದು ಊಹಿಸುತ್ತಾರೆ. ಹೀಗೆ ಕರ್ನಾಟಕವನ್ನು ಪ್ರವೇಶಿಸಿ ದ ಇಸ್ಲಾಂ ಮತ ಇಲ್ಲಿನ ಜನ ಜೀವನ ಸಂಸ್ಕೃತಿ ಸಾಹಿತ್ಯ ಸಮಾಜ ಹಾಗು ರಾಜಕೀಯದ ಮೇಲೆ ಗಣನೀಯವಾದಂತಹ ಪ್ರಭಾವ ಬೀರಿದ್ದಾರೆ. ಕರ್ನಾಟಕದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮಹಮದ್ ತುಘಲಕ್ ನ ದಂಡಯಾತ್ರೆಗಳಿಂದ ಪ್ರಭುಶಕ್ತಿಯೊಡನೆ ಇಸ್ಲಾಂ ಧರ್ಮ ಪ್ರವೇಶಿಸಿತು. ಆನಂತರ ಸುಮಾರು 14ನೆ ಶತಮಾನದಲ್ಲಿ ಹಸನ್ ಗಂಗೂವಿನ ಕಾರಣದಿಂದಾಗಿ ಬಹಮನಿ ಸಾಮ್ರಾಜ್ಯದಲ್ಲಿ ಇಸ್ಲಾಂ ಧರ್ಮ ನೆಲೆಯೂರಿತು. ಇಸ್ಲಾಂ ಧರ್ಮದ ಪ್ರವೇಶದೊಂದಿಗೆ ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ತಿರುವುಂಟಾಯಿತು. ಅದು ಅಲ್ಲಿನ ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯಿಕ, ಜನಾಂಗಿಕ ಸಾಮಾಜಿಕ, ಧಾರ್ಮಿಕ ಪರಿಸ್ಥಿತಿಯ ಸ್ವರೂಪವನ್ನೇ ಗಣನಿಯವಾಗಿ ಬದಲಾಯಿಸಿತು. ಇದೂ ಕೂಡ ವಿಭಿನ್ನ ಸಂಸ್ಕೃತಿಗಳ ಸ್ವರೂಪವನ್ನೆ ಗಣನೀಯವಾಗಿ ಬದಲಾಯಿಸಿತು ಮತ್ತು ವಿಭಿನ್ನ ಸಂಸ್ಕೃತಿಗಳ ನಡುವಣ ಭಾಂದವ್ಯಕ್ಕೆ ದಾರಿ ಮಾಡಿಕೊಟ್ಟಿತು. ಇಸ್ಲಾಂ ಧರ್ಮದ ಆಗಮನದೊಂದಿಗೆ ಉರ್ದು ,ಪರ್ಶಿಯಾ, ಅರಬ್ಬೀ ಭಾಷೆಗಳ ಸಾಹಿತ್ಯಿಕ ಬಳಕೆ ಪ್ರಾರಂಭವಾಯಿತು. ಅದರಲ್ಲಿ ಮುಖ್ಯರಾದವರೆಂದರೆ ಗೋಲ್ಕೊಂಡ, ಬಿಜಾಪುರ ಮುಂತಾದ ಬಹುಮನಿ ಸಾಮ್ರಾಜ್ಯದ ಆಶ್ರಿತ ಕವಿಗಳು. ಎರಡನೆಯದಾಗಿ ಸುಮಾರು 18ನೆ ಶತಮಾನಾನಂತರ ಅನೇಕ ಮುಸ್ಲಿಂ ಕವಿಗಳು ಅದರಲ್ಲಿಯೂ ಮುಖ್ಯವಾಗಿ ಸೂಫಿ ತತ್ವ ಪದಕಾರರು ಕವಿಗಳು ಕನ್ನಡದಲ್ಲಿ ಸಾಹಿತ್ಯ ರಚನ ,ಮಾಡಿದರು. ಇದರಲ್ಲಿ ಮುಖ್ಯರಾದವರು ಸಂತ ಶಿಶುನಾಳ ಶರೀಫರು .ಹಿಂದೂ ಮುಸ್ಲಿಂ ಕೋಮುಗಳ ಸಾಮರಸ್ಯದ ಪ್ರತೀಕವಾದ ಇವರು ಗೋವಿಂದ ಗುರುವಿನಿಂದ ದೀಕ್ಷೆ ಪಡೆದು ಶೀಶುನಾಳಾದೀಶನ ಭಕ್ತನಾಗಿದ್ದನು. ‘ಗಿರಣಿ ವಿಸ್ತಾರ ನೋಡಮ್ಮ’, ‘ಕೋಡಗನ ಕೋಳಿ ನುಂಗಿತ್ತಾ’, ‘ಎಲ್ಲರೆಂಥವರಲ್ಲ ನನಗಂಡ’, ‘ಮೋಹದ ಹೆಂಡತಿ ತೀರಿದ ಬಳಿಕ’.. ಮುಂತಾದ ಜನಪ್ರಿಯ ಗೀತೆಗಳು ಈತನವು. ಜೀವನದ ದೈನಂದಿನ ಅನುಭವವವನ್ನು ಇವು ಹೇಳುವಂತೆ ತೋರಿದರೂ ಇವುಗಳಲ್ಲಿ ತತ್ವ ಚಿಂತನೆಗಳಿವೆ.
ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಿಸಾರ್ ಅಹಮದರು ಮುಖ್ಯವಾಗಿ ಮುಸಲ್ಮಾನ ಕವಿಗಳ ಸಾಲಿನಲ್ಲಿ ಬರುತ್ತಾರೆ ಇವರೊಂದಿಗೆ ರಹಮತ್ ತರೀಕೆರೆ, ರಂಜಾನ್ ದರ್ಗಾ, ಸಾರಾ ಅಬೂಬಕರ್, ಬೋಳುವಾರು ಮಹಮದ್ ಕುಂಞ, ಫಕೀರ್ ಮಹಮದ್ ಕಟ್ಪಾಡಿ, ಅಕಬರ್ ಅಲಿ, ಅಬ್ದುಲ್ ರಶೀದ್, ಕೆ.ಷರೀಫಾ, ಪೀರ್ ಬಾಷಾ, ಆರಿಫ್ ರಾಜಾ, ಮುಂತಾದವರನ್ನು ಹೆಸರಿಸಬಹುದು. ಈ ಲೇಖಕರ ಮೂಲಕ ಮುಸ್ಲಿಂ ಜನಾಂಗದ ಅವರ ಸಂಸ್ಕೃತಿಯ ಅನುಭವ ಲೋಕವೊಂದು ಕನ್ನಡ ಸಾಹಿತ್ಯಕ್ಕೆ ಪರಿಚಯವಾಯಿತು. ಮುಸ್ಲಿಂ ಮಹಿಳಾ ಲೇಖಕಿಯರ ಮುಖಾಂತರ ಈ ಜನಾಂಗದ ಮಹಿಳೆಯರ ಜೀವನ, ಅವರ ಸಂವೇದನೆಗಳನ್ನು ಕನ್ನಡಿಗರು ಓದುವಂತಾಯಿತು. ಇಲ್ಲಿನ ಕತೆಗಳು ಚಲನ ಚಿತ್ರಗಳಳಾಗಿಯೂ ಪ್ರೇಕ್ಷಕರನ್ನು ಆಕರ್ಷಿಸಿವೆ. ಒಟ್ಟಾರೆಯಾಗಿ ಇಸ್ಲಾಂ ಧರ್ಮ ಕರ್ನಾಟಕದಲ್ಲಿ ಮತ್ತು ಕನ್ನಡ ಸಾಹಿತ್ಯದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಒಂದು ಸಂವೇದನೆಯಾಗಿ ತನ್ನದೇ ಆದ ಪಾತ್ರವಹಿಸಿ ಪ್ರಭಾವ ಬೀರಿದೆ ಕನ್ನಡ ಸಾಹಿತ್ಯಕ್ಕೆ ತನ್ನಕೊಡುಗೆ ನೀಡಿದೆ.
ಭಾಷೆಯೊಂದು ತನ್ನ ಗರ್ಭದಲ್ಲಿ ಅಡಗಿಸಿಕೊಂಡ ಸಾಹಿತ್ಯ ವಿಚಾರಧಾರೆಗಳು ಸಾರ್ವಕಾಲಿಕವಾದವು. ಧರ್ಮಜಾತಿಗಳನ್ನು ಮೀರಿ ಸಾಹಿತ್ಯ ಚರಿತ್ರೆಯ ಕಾಲಾನುಕ್ರಮಣಿಕೆಯ ಭಾಗವಾಗಿಯೇ ಜೈನ,ಶೈವ, ವೈದಿಕ ಸಾಹಿತ್ಯವೂ ವೈವಿಧ್ಯಮಯವಾಗಿ ಛಂದಸ್ಸು ಅಲಂಕಾರಗಳೊಂದಿಗೆ ಅನೂಚಾನವಾಗಿ ಬಂದಿರುವುದು ಕನ್ನಡ ಸಾಹಿತ್ಯದ ಹೆಗ್ಗಳಿಕೆ.
===================
ಅಧ್ಯಯನ ಪೂರ್ಣ ಹಾಗೂ ಮಾಹಿತಿಪೂರ್ಣ ಲೇಖನ
ಅಭಿನಂದನೆ ಸುಮಾವೀಣಾ