ಕಿಡಿ

ಕಾವ್ಯಯಾನ

ಕಿಡಿ

ಲಕ್ಷ್ಮೀ ಮಾನಸ

ಬಣ್ಣ ಬಣ್ಣದ ಪಂಜರದೊಳಗೆ,
ಗಾಜಿನ ಚೂರುಗಳ
ಎಲ್ಲೆಯೊಳಗೆ
ಹಾರಾಡುತಲಿದೆ ಪಕ್ಷಿಯೊಂದು,
ಚೂರುಗಳು
ಹಿಂದಿಗಿಂತಲೂ ಚೂಪಾಗಿ ತೋರಿದರೂ…..

ಎಂದೂ ಅರಿಯಲಿಲ್ಲ
ಆ ಪಕ್ಷಿ..
ಆ ಗಾಜಿನ ಚೂರುಗಳಿಗೆ
ಕಪ್ಪು ಹಾಗೂ ರಕ್ತ ವರ್ಣವ
ಪೂಸಿದವರಾರೆಂದು..?
ವಸಂತ, ಶರತ್ಕಾಲ
ಶಿಶಿರ ಋತುಗಳು
ದಾಟಿದರೂ,
ಬಣ್ಣವೇಕೆ ಮಾಸಲಿಲ್ಲವೆಂದು….

ಹಾರಾಡುತಿರಲೊಮ್ಮೆ,
ಗಾಜಿನ ಚೂರುಗಳು
ಎದೆಗೆ ಚುಚ್ಚಲು,
ಅರಯತೊಡಗಿತು ಪಕ್ಷಿ…,

ಅವು ತಾವು ಹಾಕಿದ
ಹಾದಿ ಮರೆತಯವರ
ರಕ್ತಚರಿತ್ರೆಯ ಬರೆದವೆಂದು,
ಈಜುವ ಹಂಸಗಳ
ಅಗ್ನಿಗೆ ಎಸೆದವೆಂದು,
ಮೊಗ್ಗುಗಳಿಗೆ ಅರಿತೇ
ಬೇಲಿ ಬಿಗಿದವೆಂದು..
ಹಾರುವ ಆಸೆಗಳ
ರೆಕ್ಕೆ ಮುರಿದವೆಂದು…..

ಪ್ರಾಚೀನ ಕಿಟಕಿಗಳು
ಸದ್ದು ಮಾಡಿದವು
ಆ ಕ್ಷಣದಲ್ಲಿ….
“ಹಳೆಯ ಗಾಳಿಯನ್ನೇ ಉಸಿರಾಡಬೇಕೆಂದು”….,

ಕಣ್ಣೀರ ಹನಿಯಲ್ಲಿ ಹೆಜ್ಜೆಯನಿಡುತ
ಕಾಣದ ಸಂಘರ್ಷದಲ್ಲಿ ಮುಳುಗಿತು
ತನ್ನ ಅಂತರಾಳದ ಆಗಸದೊಂದಿಗೆ…..

ತನ್ನ ಅಸ್ತಿತ್ವ ಪೊರೆಯುತಲೇ
ಪಕ್ಷಿಯ ಕನಸ ಬಳ್ಳಿ
ಚೂರುಗಳ ದಾಟ ಬಯಸುತಲಿದೆ…
ನೂತನ ಶೈಲಿಯಲ್ಲಿ
ಪಂಜರ ನಿರ್ಮಿಸಲು,
ಮಾಸದ ಬಣ್ಣಗಳ
ಅಳಿಸಿಹಾಕಲು..,
ಅಳಿಸಲಾಗದ ಸಾಲುಗಳ
ಬರೆಯಲು,
ನದಿಯೊಳಗಿನ ಹಂಸದ
ಒಡಗೂಡಿ ಈಜಲು,
ಆಗಸದೆತ್ತರಕ್ಕೆ
ಬೆಂಕಿಯ ಮಳೆಯಲ್ಲೂ
ಹಿಂಜರಿಯದೇ ಹಾರಲು…..

****

Leave a Reply

Back To Top