ಆಮೆಯೂ ಮೊಲವೂ

ಕಥನಕಾವ್ಯ

ಆಮೆಯೂ ಮೊಲವೂ

ಬೆಂಶ್ರೀ ರವೀಂದ್ರ

ಭಾಗ ಒಂದು

ಸ್ಪರ್ಧೆಗೆ ಆಮೆಯೂ ಮೊಲವು
ಟ್ರ್ಯಾಕಿನ ಗೆರೆಯಲಿ‌ ನಿಂತಿಹವು
ಓಟದ ರೇಸಿಗೆ ಅಣಿಯಾಗಿಹವು

ಇದೆಂತಹ ಆಟ ತಮಾಷೆ ಜೂಟಾಟ
ಮಜವಿದೆ ನೋಟ ಆಮೆ ಮೊಲದೋಟ
ಕಾಡಿನ ಪ್ರಾಣಿಗಳಿಗೆ ಮೋಜಿನ ಮಾಟ

ಕಿವಿಯನು ನಿಗುರಿಸಿ ಕಣ್ಣನು ಪಿಳುಕಿಸಿ
ಸಮ ಎನಗಾರೆಂದು ಬೀಗಿಹ ಭೂಪ
ಬೆಳ್ಳನೆ ಬೆಳುಪಿನ ಮೊಲ ಮಹರಾಯ

ಕಾಲನು ಜಾಡಿಸಿ ಕತ್ತನು ಆಡಿಸಿ
ಸುತ್ತಲೂ ನೋಡಿ ದೇವಗೆ ಪ್ರಾರ್ಥಿಸಿ
ಓಟಕೆ ಸಿದ್ದವಾದನು ಆಮೆರಾಯ

ಕತ್ತನು‌ ಕೊಂಕಿಸಿ ಕಾಲನು ಜಾಡಿಸಿ
ಕಣ್ಣನು ಕೀಲಿಸಿ ಟ್ರ್ಯಾಕನು ವೀಕ್ಷಿಸಿ
ಅಂಪೈರ್ ಸೀಟಿಯು ಜಿರಾಫೆರಾಯ

ಮಿಂಚಿನ ವೇಗದಿ ಓಡಿತು ಮೊಲವು
ತೆವಳುತ ಸಾಗಿತು ಗುರಿಯೆಡೆ ಆಮೆ
ಹೋ..ಎಂದಿತು ಪ್ರಾಣಿಯು ಗಿಡಮರ

ಅರ್ಧದಾರಿ ಓಡಿದ ಮೋಲವು
ಕಂಡಿತು ತುಂಬಿದ ಹಸಿರು ಕಾವಲು
ಹಿಂತಿರುಗಿ ನೋಡಲು ಪೋಟಿದಾರ

ಹಿಂದೆಲ್ಲೊ ಇಹನು ಈ ಆಮೆಭೂಪ
ಬರುವ ತನಕ ಇಲ್ಲಿಗೆ ವಿಶ್ರಾಂತಿ ಪಡೆವೆ
ಹುಲ್ಲೂ ನೀರು ಉಂಡು ಮಲಗಿದನು

ಮೊಲಕೆ ಬಂದಿತು ಗಡದ್ದು ನಿದ್ದೆ
ಕೇಳಿಸಿತೆಲ್ಲಡೆ ಗೊರಕೆಯ ಸದ್ದೆ
ನಡೆಯಿತು ಆಮೆ ಗುರಿಯೆಡೆಗೆ

ನಿದ್ದೆಲಿ ಮೊಲಕೆ ಗೆಲುವಿನ ಪದಕ
ಖುಷಿಯಲಿ ಮಾಡಿ ಮತ್ತಷ್ಟು ನಿದ್ದೆ
ಅಷ್ಟರಲಿ ಹೋ…ಎನ್ನುವ ಸದ್ದು

“ಗುರಿ ಮುಟ್ಟುವ ತನಕ ನಿಲ್ಲದಿರಿ”
ಮಾತನು ಮನಸಲಿ ಇಟ್ಟಿದ ಆಮೆ
ಸದ್ದಿಲ್ಲದೆ ಗೆಲುವಿನ ಕಂಬವ ದಾಟಿತ್ತು

ಕಾಡು ಪ್ರಾಣಿಗೀಣಿ ಹಕ್ಕಿಪಿಕ್ಕಿ ಕೂಡಿದವು
ಗೆಲುವಿನ ನಿಲುವಲಿ ಆಮೆಯ ನಿಲಿಸಿ
ಕತ್ತಿಗೆ ಪದಕವ ತೊಡಿಸಿದವು

ಸೋಮಾರಿಯಾಗದಿರಿ ಮಕ್ಕಳೆ
ಗೆಲುವಿನ ಗುರಿಯು ಮನದೊಳಗಿರಲಿ
ಶ್ರಮಕೆ ಫಲಸಿಗುವುದು ಶತಸಿದ್ದ.


ಭಾಗ ಎರಡು

ನೆನಪಿದೆಯೇ‌ ಮಕ್ಕಳೆ ನಿಮಗೆ
ಮೊಲದಾಮೆಯ ಓಟದ ಆಟ
ಕಾಡಿನಲಂತೂ ನಡೆದಿದೆ ಈಗ
ಅದೇ ಮಾತಿನ ಮೋಜಾಟ

ಓಟದ ವೀರ ಸೋತಿದ್ದೆಂತು
ತೆವಳುವ ಆಮೆ ಗೆದ್ದಿದ್ದೆಂತು
ಬುಡಮೇಲಾಗಿ ಲೆಕ್ಕಾಚಾರ
ಹೀಗೂ ಉಂಟೆ ಅಚ್ಚರಿ ಹೂಟ

ಹುಲ್ಲಿನ ಬಣಿವೆಲಿ ಚಿಗುರನು ಕಚ್ಚುತ
ಚಿಂತಿಸಿ ಮೊಲವು ಕಿವಿಯನು ನಿಗುರಿಸಿ
ಅರಿಯಿತು ಸೋಲಿನ ಗುಟ್ಟನು ಬಿಡಿಸಿ
ಹ್ಞಾ…ನಾ.‌‌.ಸೋಮಾರಿ ದುರಹಂಕಾರಿ

ವಿನಯದಿ ಆಮೆಯು ಗೆಲುವಿಗೆ ಬೀಗದೆ
ಯೋಚಿಸಿತು, ಗುರಿಯೆಡೆ ಲಕ್ಷವನಿಡದೆ
ಸೋತಿತು ಮೊಲವು ಓಟವನು, ಕಲಿತರೆ
ಬುದ್ದಿಯ ಒಳಿತಾಗುವುದು ಎಲ್ಲರಿಗೆ

ಸ್ನೇಹದಿ ಹೀಗಿರಲೊಮ್ಮೆ ಮೊಲವನು
ಆಮೆಯ ಕಾಡಿನ ರಾಜನು ಕರೆದಿಹನು
ಅವಸರದಿ ಹೋಗಿರಿ ಪಕ್ಕದ ಕಾಡಿಗೆ
ರಾಯಭಾರಿಯಾಗಿ ತುರ್ತುಚರ್ಚೆಗೆ

ತಲುಪಲೇ ಬೇಕು ನಾಳೆಯೆ ಅಲ್ಲಿಗೆ
ಕಾಡುಮೇಡು ಕೊರಕಲು ಕೆರೆ ನದಿಯು
ಕಣಿವೆಯು ಎಂತು ದೂರದ ಹಾದಿಯು
ಚಿಂತಿಸಿ ಹುಡುಕಿದರೊಂದು ಉಪಾಯ

ಬೆಳಗಿನ ಜಾವಕೆ ಮೊಲದ ಬೆನ್ನಲಿ
ಆಮೆಯು ಕುಳಿತು ಸವೆಯಿತು ಹಾದಿ
ಕಾಡು ಮೇಡಲಿ ಅಡ್ಡ ಬರಲು ನೀರು
ಮೊಲವೇರಿತು ಆಮೆಯ ಬೆನ್ನು

ಇಂತು ಉಪಾಯವ ಮಾಡಿದವು
ಪಕ್ಕದ ಕಾಡಿಲಿ ಸವಿನುಡಿಯಾಡಿದವು
ಕೆಲಸವ ಸಾಧಿಸಿ ಸಮಯ ಮೀರದೆ
ದೊರೆಗಿತ್ತವು ವರದಿಯ ಸಂಭ್ರಮದಿ

ಮಕ್ಕಳೆ ತಿಳಿಯಿರಿ ನಮ್ಮಯ ಶಕ್ತಿಗೆ
ಕೂಡಲು ಬೇಕು ಗೆಳೆಯರ ಬಲವು
ಒಗ್ಗಟ್ಟಲ್ಲುಂಟು ನಲಿವು ಗೆಲುವು
ಕೂಡಿ ಬಾಳಿದರೆ ಸ್ವರ್ಗ ಸುಖವು


2 thoughts on “ಆಮೆಯೂ ಮೊಲವೂ

Leave a Reply

Back To Top