ಬದುಕಲು ಕಲಿತಿರುವೆ

ಕಾವ್ಯಯಾನ

ಬದುಕಲು ಕಲಿತಿರುವೆ

ಡಾ.ಪುಷ್ಪಾವತಿ ಶಲವಡಿಮಠ

Sculptures of abstraction | Glass artwork, Abstract sculpture, Glass art

ಕಷ್ಟ ನೀಡಿದ ದಿನಗಳೆಂದು
ದೂರಲಾರೆ ನಿಮ್ಮನು
ಕಷ್ಟಗಳ ಸಹಿಸುವ ಶಕ್ತಿ
ನೀಡಿದವರು ನೀವುಗಳು

ನಿಂದಿಸಿ ನೋಯಿಸಿದವರೆಂದು
ಜರಿದು ದೂರ ಸರಿಸಲಾರೆ ನಿಮ್ಮನು
ನೋವುಗಳ ನುಂಗಿ ಜಯಿಸಿ ಬರಲು
ಕಾರಣರಾದವರು ನೀವುಗಳು

ಬೆನ್ನ ಹಿಂದೆ ಕತ್ತಿ ಮಸೆದವರೆಂದು
ಮುನಿಸಿಕೊಳ್ಳಲಾರೆ ನಾನು
ಮೈ ಮರೆಯದಂತೆ ಜಾಗ್ರತೆಯಾಗಿರಲು
ಕಲಿಸಿದ ಮಹಾ ಗುರುಗಳು ನೀವುಗಳು

ಹೆಜ್ಜೆ ಹೆಜ್ಜೆಗೆ ಮುಳ್ಳು ಚೆಲ್ಲಿದವರೆಂದು
ನಿಮ್ಮನಗಲಿ ಇರಲಾರೆನು ನಾನು
ಮುಳ್ಳುಗಳ ತುಳಿದರೂ
ಮುಗುಳ್ನಗುತಿರಬೇಕೆಂದು ಕಲಿಸಿದವರು ನೀವುಗಳು

ಅಪವಾದದ ಕಟಕಟೆಯಲಿ ನಿಲ್ಲಿಸಿದಿರೆಂದು
ಕೊರಗಲಾರೆನು ನಾನು
ಒಳಗಿನ ಸತ್ಯವ ಬಹಿರಂಗಗೊಳಿಸಿ
ಪುಟಕ್ಕಿಟ್ಟ ಚಿನ್ನವಾಗಿಸಿದವರು ನೀವುಗಳು

ಬೈದವರೆ ಬಂಧುಗಳು ಹೊಡೆದವರೆ ಪೊರೆದವರೆಂದು
ಅಣ್ಣ ಬಸವಣ್ಣನಿಂದ ಕಲಿತಿರುವೆ
ಪ್ರಭುಏಸುವಿನ ಕ್ಷಮೆಯ ಬೆಳಕಿನಲಿ ವಿಶ್ರಮಿಸುತಿರುವೆ
ಮಮತೆಯಲಿ ಬುದ್ಧ ನಗುತ
ಮುದ್ದಿಸುತಿರುವಾಗ ಅಳುವ ಮರೆತಿರುವೆ

ಮನಸು-ಕನಸುಗಳಿಲ್ಲಿ
ಜಾಜಿ ಮಲ್ಲಿಗೆಯಾಗಿರಲು
ಮನದ ಮಂಕು ಕರಗಿದೆ
ಜಗದ ಪಾಠಶಾಲೆಯಲಿ
ಅಲ್ಲಮನ ಬಯಲು ಕಂಡಿರುವೆ

ಉಳಿಪೆಟ್ಟುಗಳ ನೀಡಿ ಮೂರ್ತಿಯಾಗಿಸಿದ
ಕೈಗಳ ಮುದ್ದಿಸುತಿರುವೆ
ಒಲವ ತೋಟದಲಿ
ಶಾಂತಿಮಂತ್ರವ ಪಠಿಸುತಿರುವೆ
ಬದುಕಲು ಕಲಿತಿರುವೆ.

**********************

6 thoughts on “ಬದುಕಲು ಕಲಿತಿರುವೆ

  1. “ಸಂಗಾತಿ”ಯಲ್ಲಿ ಪ್ರಕಟವಾದ ಡಾ. ಪುಷ್ಪಾ ಶಲವಡಿಮಠ ಅವರ ಕವಿತೆ “ಬದುಕಲು ಕಲಿತಿರುವೆ” ಓದಿದೆ.
    ಉಳಿಯ ಪೆಟ್ಟು ಸುಂದರ ಮೂರ್ತಿಯಾಗಿಸುತ್ತೆ.
    ಹೆಣ್ಣು ರಾಮಾಯಣ ಕಾಲದಿಂದಲೂ ಹಲವು ಪರೀಕ್ಷೆಗಳಿಗೆ ತುತ್ತಾಗಿದ್ದಾಳೆ. ಛಲ, ಆತ್ಮವಿಶ್ವಾದಿಂದ ಬೆಳೆದ ಆಕೆಯ ಬದುಕಿನ‌ ಚಿತ್ರಣ ವಿಷಾದದ ಛಾಯೆಯಲ್ಲು ನಗುವರಳಿಸಿದೆ. ಅಭಿನಂದನೆ.

  2. ಕ್ಷಮೆಯ ಬೆಳಕಿನಲಿ ವಿಶ್ರಮಿಸುತಿರುವೆ..

    ಚೆನ್ನಾಗಿದೆ ಮೇಡಮ್

Leave a Reply

Back To Top