ಗಝಲ್

Close-up Photograph of Flowers

ಗಝಲ್

ಸುಜಾತ ರವೀಶ್

ಬಾಳಬಾನಲಿ ಹೊಂಬೆಳಕಾಗಿ ಬಂದೆ ಏನಿರಲಿಲ್ಲ ಕಾರಣ
ಇಂದೀಗ ಅಮಾವಾಸ್ಯೆಯ ಕಗ್ಗತ್ತಲು ತಿಳಿಯುತ್ತಿಲ್ಲ ಕಾರಣ

ಜೀವನವನದಿ ಅರಳಿ ನಗುತ್ತಿದ್ದವು ಸುಂದರ ಹೂಗಳು
ಈಗೆಲ್ಲಾ ಬರೀ ಬೋಳು ಬರಡು ಅರಿಯಲಾಗುತ್ತಿಲ್ಲ ಕಾರಣ

ಜೀವ ವೀಣೆ ಮಿಡಿದು ಅಂದು ಹೊರಟಿತ್ತು ಒಂದು ಸುಶ್ರಾವ್ಯ ಗಾನ
ತಂತಿ ಏಕೋ ಮುರಿದು ಅಪಸ್ವರ ಕೇಳಲಾಗುತ್ತಿಲ್ಲ ಕಾರಣ

ಹೊಸ ಹೊಸ ಆಸೆ ತರಂಗಗಳು ಗಗನದೆತ್ತರ ವಿಸ್ತಾರ
ಅಗಲಿಕೆಯ ಬಿರುಗಾಳಿ ಏಕೆ ಹೇಳಲಾಗುತ್ತಿಲ್ಲ ಕಾರಣ

ಹಂಬಲಗಳ ನವ ಕನಸುಗಳು ಮೂಡಿಸಿದ್ದವು ಚಿತ್ತಾರ
ದುಃಖಿತೆ ವಿರಹಿಣಿ ಸುಜಿಗೆ ನೀ ಹೇಳಿಹೋಗಲಿಲ್ಲ ಕಾರಣ


Leave a Reply

Back To Top