ಕಾವ್ಯಯಾನ
ಮೊದಲಗುರು ತಾಯಲ್ಲವೆ?
ಚಂದ್ರು ಪಿ ಹಾಸನ್
ತನ್ನ ಉಸಿರಲ್ಲಿ ಬಿಗಿದಪ್ಪಿ
ನೋವು-ನಲಿವುಗಳ ನಡುವಲ್ಲಿ
ಸಾವು ಗೆದ್ದು ನಿನಗೆ ಜನ್ಮವಿತ್ತವಳು
ಹೆಣ್ಣಲ್ಲವೇ? ನಿನ್ನ ತಾಯಲ್ಲವೆ?
ಅಮ್ಮ ಎಂದೊಡೆ ಆಲಿಸಿ
ಅತ್ತಾಗ ಒಡಲಲ್ಲಿರಿಸಿ ಮುದ್ದಿಸಿ
ಮಡಿಲಲ್ಲಿ ತೂಗಿ ಹಾಡಿದವಳು
ಮಮತೆ ಕಲಿಸಿದವಳು ಮೊದಲ ಗುರುವಲ್ಲವೇ?
ಹಸಿದಾಗ ಹಾಲು ಕೊಟ್ಟು
ಪ್ರೀತಿಯ ಅಮೃತವನ್ನು ನೀಡಿ
ಮಮತೆಯಿಂದ ಸಾಕಿದವಳು
ಹೆಣ್ಣಲ್ಲವೇ ? ನಿನ್ನ ತಾಯಿಯಲ್ಲವೇ?
ನಿನ್ನ ನಗುವಲ್ಲೇ ಅವಳ ಬಾಳು
ಮರೆತಳು ತನ್ನೆಲ್ಲಾ ಕಣ್ಣೀರು ಗೋಳು
ತನ್ನ ಕನಸುಗಳ ನಿನ್ನಲ್ಲಿ ಕಾಣುವಳು
ಹೆಣ್ಣಲ್ಲವೇ? ಅವಳು ತಾಯಿಯಲ್ಲವೇ?
ಒಂಬತ್ತು ತಿಂಗಳು ಹೊತ್ತದ್ದು ಮರೆವೆ
ತುತ್ತು ಕೂಳಿಗೂ ಕಣ್ಣೀರ ತರುವೆ
ಇತ್ತಾದರೂ ಹಾರೈಸುವ ಬಡಜೀವವೂ
ತಾಯಲ್ಲವೇ? ನಿನ್ನ ಗುರು ಅಲ್ಲವೇ?
ಕೊನೆಯಿಲ್ಲದ ಅವಳ ಮಮತೆ
ಕಡಲಷ್ಟು ಪ್ರೀತಿಯ ನಿನ್ ಜನ್ಮದಾತೆ
ದೂರದಿರು, ತಳ್ಳದಿರು, ದೂಡದಿರು
ಅವಳೊಂದು ಹೆಣ್ಣು ನಿನ್ನ ತಾಯಿ ನಿನ್ನ ಗುರು
***********************