ಕಾವ್ಯಯಾನ
ಮಜಲು
ಲಕ್ಷ್ಮೀ ಮಾನಸ
ಬೃಂದಾವನದಲ್ಲಿ
ಹೊಳೆಯುವ ಕಂಗಳು,
ಒರಟಾದ ಕೈಗಳಿಂದ
ವಿಹರಿಸುತ್ತಿರಲು…,
ಅಲ್ಲಿನ ಮೊಗ್ಗಾಗಿರುವ
ದಾಸವಾಳಗಳು ಇನ್ನೂ
ಮೈಯೊಡ್ಡಲಲ್ಲ ಮಳೆಯ
ತುಂತುರು ಹನಿಗಳಿಗೆ ….,
ಅರಳಿದ ಗುಲಾಬಿ
ಹೂವಿನ ಪಕಳೆಗಳು
ಇನ್ನೂ ಹೆಪ್ಪುಗಟ್ಟಿರಲಿಲ್ಲ
ಮಂಜಿನ ಮಳೆಯಲ್ಲಿ,
ಸುಗಂಧ ಬೀರುವ ಮಲ್ಲಿಗೆ,
ಮನಸೆಳೆದರೂ,
ಅರಿಯದೇ ಪಾತಾಳಕ್ಕೆ
ಜಾರುತಲಿದೆ,
ತಾನು ಚೆಲುವೆ ಎಂಬ
ಹಮ್ಮಿನಲ್ಲಿ..,
ಒಮ್ಮೆಗೆ ಬೀಸಿದ
ಬಿರುಗಾಳಿಯಲ್ಲಿ,
ಸ್ಪರ್ಶಿಸಿದವು
ನನ್ನೀ ಪಾದಗಳನ್ನು,
ಸೇವಂತಿಗೆ ಗಿಡದ
ಹಳದಿ ಎಲೆಗಳು…,
ಹಲವು ಮೈಲುಗಳು
ದಣಿವನ್ನರಿಯದೇ ಸಾಗುತ್ತಿರಲು,
ಹೆಜ್ಜೆ ಹಾಕದಾಯಿತು ಮನ,
ಕೀಟಗಳ ಪಿಸುಮಾತನಾಲಿಸಿ,
ಬರಮಾಡಿಕೊಂಡಿತು ಎನ್ನ,
ಬಾಡಿದ ಕಮಲವೊಂದು..,
ಆತುರದಲ್ಲಿಯೇ ಪ್ರಶ್ನಿಸಿದೆ
ಆ ಕ್ಷಣ,
“ಕರೆಯಲಿಲ್ಲವೇ ನಿನ್ನೀ ಅಂತ್ಯಕ್ರಿಯೆಗೆ,
ದಾಸವಾಳ, ಗುಲಾಬಿ,ಮಲ್ಲಿಗೆ,
ಸೇವಂತಿಗೆಯನ್ನು…!?
******