ಗಜಲ್ ಜುಗಲ್ ಬಂದಿ
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್-14
ಮೌನವನೇ ಧರಿಸುವುದು ಸಾಧನೆಯಲ್ಲ
ಮಾತೇ ಮುರಿಯುವುದು ಸಾಧನೆಯಲ್ಲ
ಅಂತರಂಗದ ದಾರಿಗೆ ಈಗ ಬಾಗಿಲುಗಳಿಲ್ಲ
ಕನಸುಗಳ ಲೆಕ್ಕ ಹಾಕುವುದು ಸಾಧನೆಯಲ್ಲ
ಉಳಿದೇ ಇತ್ತು ತುತ್ತು ಬೊಗಸೆಯೊಳಗೆ
ತಿರಸ್ಕರಿಸಿ ನಡೆಯುವುದು ಸಾಧನೆಯಲ್ಲ
ದುರ್ಗುಣ ಬದುಕ ಹೆಡೆಮುರಿ ಕಟ್ಟುವುದು.
ಕಣ್ಣಿದ್ದೂ ಕುರುಡಾಗುವುದು ಸಾಧನೆಯಲ್ಲ
ಕನವರಿಸುತ್ತ ಜೀವ ಸವೆಯುತ್ತದೆ ಮಾಧವ
ಸತ್ಯವನು ಸುಳ್ಳಾಗಿಸುವುದು ಸಾಧನೆಯಲ್ಲ
ಸ್ಮಿತಾ ಭಟ್
ಕಹಿ ಬೆಳೆದು ಹಂಚುವುದು ಸಾಧನೆಯಲ್ಲ
ಮಾತಿನಲ್ಲೇ ಇರಿಯುವುದು ಸಾಧನೆಯಲ್ಲ
ಪ್ರೀತಿ ಹರಡಲು ಗಡಿಗಳ ಮೀರುವುದು ಶ್ರೇಷ್ಠ
ರಕ್ತ ಹೀರಿ ಯುದ್ಧ ಗೆಲ್ಲುವುದು ಸಾಧನೆಯಲ್ಲ
ಗಟ್ಟಿ ಬೀಜವಾಗಿ ಬೇರೂರಬೇಕಲ್ಲವೇ ಇಲ್ಲಿ
ಜೊಳ್ಳಾಗಿ ಅಲೆಯುವುದು ಸಾಧನೆಯಲ್ಲ
ಗೇರುಬೀಜ ಹಣ್ಣಿಗಂಟಿದ್ದಂತೆ ಬದುಕಬೇಕು
ಬೇರ್ಪಟ್ಟು ಬದುಕಿಬಿಡುವುದು ಸಾಧನೆಯಲ್ಲ
‘ರೇಖೆ’ ಕತ್ತಲದಾರಿಗೆ ಕುಡಿಬೆಳಕಾದರೂ ಸಾಕು
ಹಗಲಿಗೆ ದೀಪ ತೋರುವುದು ಸಾಧನೆಯಲ್ಲ
ರೇಖಾ ಭಟ್
****************