ವಸುಂಧರಾ ಕದಲೂರು ಕವಿತೆಗಳು

ವಸುಂಧರಾ ಕದಲೂರು ಕವಿತೆಗಳು

ಒಡಲುರಿ

ಒಗ್ಗರಣೆಗಿಟ್ಟ ಎಣ್ಣೆ ಸಿಡಿದು
ಚರ್ಮ ಸುಟ್ಟಿ ಮೈ ತರಗುಟ್ಟಿತು
ತಣ್ಣನೆ ನೀರು ಸುರಿದರೂ
ಉಪಶಮನವಾಗದು ಉರಿ

ಅಬ್ಬಬ್ಬೋ..! ಬರ್ನಾಲು
ಹಚ್ಚಿ ತೆಂಗಿನೆಣ್ಣೆ ಸವರಿ,
ತಣ್ಣಗಾಗುವಂತೆ ಕಾಣಲಿಲ್ಲ ಉರಿ.
ಇಡೀ ದಿನ ಸಣ್ಣ ನೋವು ಕಿರಿಕಿರಿ.

ದಿನ ಕಳೆದು ಚರ್ಮ ಕೆಂಪಗೆ
ಚೆಂದ ಕಾಣ್ತು! ಇನ್ನೆರಡು ದಿನಕೆ
ಕಪ್ಪಗೆ ಸುಲಿದು ಪೊರೆ ಕಳಚಿತು.

ಸುಮ್ಮನಿರಲಾರದೆ ಸಂಕಟಕೆ
ಉಗುರಲಿ ಬೆಂಟಿ ಹಳೆಯ
ನೋವು ಕೆದಕುತ್ತಿದ್ದೆ.. ಸುಟ್ಟ
ಚರ್ಮ ಸುಲಿದಲ್ಲಿ ಹುಟ್ಟಿತಲ್ಲಿ
ಮಾಯಕದ ಹೊಸ ಚರ್ಮ!

ನಡುವೆ ಏಕೋ ನೆನಪಾಯ್ತು
ಸತಿಯ ಚಿತೆಗೆ ನೂಕುತ್ತಿದ್ದ ಹಳೆ
ಕಟ್ಟುಪಾಡಿನ ಕರ್ಮ….


ಉಳಿದ ಬೆಳಕು

ಒಳ್ಳೆಯ ಕವಿತೆಯಾಗುತ್ತಿತ್ತು
ಆಗಲೇ ಬರೆದಿದ್ದರೆ. ಭಾವ
ಬರಹವಾಗಿ ತಕ್ಷಣ ಹಾಳೆಗಿಳಿದಿದ್ದರೆ..

ಒಳ್ಳೆಯ ಕವಿತೆಯೇ ಅದು;
ಒಂದರೆಕ್ಷಣ ಮಕ್ಕಳ ರಚ್ಚೆ ನಿಂತಿದ್ದರೆ,
ಮನೆಮಂದಿ ಬಾಯಿ ಚಪಲ
ಕಟ್ಟಿದ್ದರೆ; ತುಸು ಹೊತ್ತು ಬಿಟ್ಟು
ಹಾಲು ಕಾಯಿಸಿದ್ದರೆ..

ಮಂದಿಗೇನು, ‘ಅವಳು ಅಡುಗೆ
ಮನೆಯಿಂದಾಚೆಯೇ ಬರಲಿಲ್ಲ’
… ಗೊಣಗುತ್ತಾ, ಬರೆದುದೂ
‘ಪಕ್ಕಾ ಅಡುಗೆಮನೆ’ಯೇ –
ಕುಹಕ ನಗೆಯ ಅಳೆದು ಸುರಿಯುತ್ತಾ
ಓದುವ ಮುನ್ನ ಮೂಗು ಮುರಿದು
ಲೇಬಲ್ಲು ಹಚ್ಚಿರುತ್ತಾರೆ…

ಕೊಂಕಿಗೆ ಪದಾರ್ಥ ಹೆಚ್ಚಿ ಕೊಡಬೇಕೆ,
ಕುಟ್ಟಬೇಕೆ? ಸೋಸಿ, ಹದಮಾಡಿ
ಅರೆಯಬೇಕೆ..! ಹಂಗಿಸುವವರು
ಹಸಿವಿಗೆ ಗಾಳಿ ತಿನ್ನುತ್ತಾರೆ..!!

ಅರೆ ಕ್ಷಣ ಮಸಾಲೆ, ಒಗ್ಗರಣೆ
ಘಾಟಿನ ಸುಳಿಯಿಂದ, ಅಡುಗೆ
ಮನೆಯೊಳಗಿಂದ ಹೊರಗೆ ಬಂದು
ತಾಜಾ ಹವೆಗೆ ಮೂಗರಳಿಸುವಳೇ
ನಿರ್ವಾತದ ಬಯಲಲಿ.?

ಚಾಕು ತುರಿಮಣೆ ಕುಕ್ಕರು ಮಿಕ್ಸಿ
ಹತಾರಗಳ ಹಿಡಿದವಳ ಕಂಡು
ಹೆದರಿ ಅವಿತುಕೊಂಡು ಕವಿತೆಗಳು
ಕಳ್ಳಾಟವಾಡುತವೆ.. ಹೀಗೆ,
ತಪ್ಪಿಸಿಕೊಂಡ ಸಾಲು ಹುಡುಕಲು ಪೋಲೀಸರನ್ನೋ ಪತ್ತೆದಾರರನ್ನೋ
ಅಟ್ಟಿದರೆ ಆದೀತೆ..!?

ಆಗಲೇ ಬರೆದಿದ್ದರೆ ಅದೊಂದು
ಬಹಳ ಉತ್ತಮ ಕವಿತೆ..

ಅವಳ ಕೆಲವು ಕವಿತೆಗಳು
ಊರ ಜಾತ್ರೆಯ ಆರತಿಗೆ ತಂಬಿಟ್ಟು,
ತೇರು, ಸೆಗಣಿ ನೀರು, ರಂಗೋಲಿ,
ಹಬ್ಬದಡುಗೆ ತಯಾರಿಯಲಿ,
ನೆಂಟ- ಸರೀಕರನು ಸರಿದೂಗಿಸುವ
ಆಟಗಳ ನಡುವಲ್ಲಿ, ನುಸುಳುತ್ತವೆ.

ನುಗ್ಗಿದ ಕೆಲವು ಸಾಲುಗಳು
ಮುಲಾಜಿಲ್ಲದೆ ಅವಳ ದಿವ್ಯ
ನಿರ್ಲಕ್ಷ್ಯಗೆ ಗುರಿಯಾಗಿ -ಮೂಗಿನ
ಸಿಂಬಳವಾಗಿ, ಕಣ್ಣಂಚಿನ ಹನಿಯಾಗಿ
ಹಣೆ ಮೇಲೆ ಬೆವರಾಗಿ, ಸೀರೆ ಅಂಚಿಗೆ
ಅಂಟುತವೆ.. ತಪ್ಪಿಸಿಕೊಂಡ ಕೆಲವು
ಸಾಲು ಭವ್ಯ ತೇರಿನ ಚಕ್ರದಡಿಗೆ;
ದೇವರ ಉತ್ಸವ ಮೂರ್ತಿಗೆ ಮುಟ್ಟಿದ
ಆರತಿಯ ಬೆಳಕಾದವು…

****************************

5 thoughts on “ವಸುಂಧರಾ ಕದಲೂರು ಕವಿತೆಗಳು

  1. Simple yet effective! ವಾಸ್ತವದ ಸರಳ ಚಿತ್ರಣದ ಜೊತೆಗೆ ಚಿಂತನೆಗೆ ದೂಡುವಂತಹ ಕವನಗಳು. ಬದಲಾವಣೆ ಕಂಡ ಈ ಕಾಲದಲ್ಲೂ ಬದಲಾಗಿರುವುದೇ ಹೆಣ್ಣಿನ ಬದುಕು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಲೇ ಇಲ್ಲ! ಒಟ್ಟಿನಲ್ಲಿ ಉರಿದು ಹೋಗುವುದು ಅಥವಾ ಆರತಿಯ ಬೆಳಕಾಗುವುದು ಆದರೆ ತಾವೇನಾಗಬೇಕೆಂದು ಬಯಸುವರೋ ಅದು ಗಗನ ಕುಸುಮವಾಗುವುದು! ಲೈಫ್ ಅಂದ್ರೆ ಇಷ್ಟೇನೆ ಅನ್ನಿಸಿಬಿಟ್ಟಿತು…

  2. ಎಲ್ಲಿ ಹುಡುಕೋಣ ಕಳೆದ ಕವಿತೆ ಸಾಲುಗಳನ್ನು? ಅಜ್ಞಾತ ದಾರಿ ನಿಟ್ಟುಸಿರುಡುತಿವೆ..‌.. ನಮ್ಮಂತೆ ನಮ್ಮ ಉತ್ತಮ ಕವಿತೆ ಸಾಲುಗಳು….. ಒಳ್ಳೆಯ ಕವಿತೆಗಳು ಮೇಡಂ ಅಭಿನಂದನೆಗಳು

  3. ವಾವ್ ಮೇಡಂ ಬಹಳ ಚೆನ್ನಾಗಿವೆ.. ಒಡಲೂರಿಯಾ ಕೊನೆ ಎರಡು ಸಾಲುಗಳಿನ ನೋವು ಕಣ್ಮುಂದೆ ಕಟ್ಟಿ ನಮ್ಮನ್ನೇ ಸುಡುತ್ತದೆ.. ಎರಡನೆಯದು ಅಧ್ಭುತ..

Leave a Reply

Back To Top