ಗಜಲ್
ನಯನ . ಜಿ . ಎಸ್
ಮೂಡಣದ ಬಾಂದಳವು ಕೆಂಪೇರಿರಲು ಕಳಚಿತು ತಮದ ರಜಾಯಿ
ಸೂರ್ಯ ತಾ ಮೂಡಿ ಬೆಳಕ ಹರಿಸಿರಲು ಕಳಚಿತು ತಮದ ರಜಾಯಿ !
ಕಲರವದ ಕೂಗು ಮುಗಿಲ ಮುಟ್ಟುತ ಮಾರ್ದನಿಸಿದೆ ಮತ್ತೆ ಮತ್ತೆ
ಸುಮಗಳು ಬಿರಿದು ಸೌಗಂಧ ಪಸರಿಸಿರಲು ಕಳಚಿತು ತಮದ ರಜಾಯಿ !
ಬಾನ ಮಂಟಪಕೆ ಶೋಭೆಯನು ತಂದಿಹನು ಅರ್ಕ ನವೋಲ್ಲಾಸದಿ ಮಿನುಗಿ
ಭೃಂಗಗಾನ ಝೇಂಕರಿಸಿ ರಂಜಿಸುತಿರಲು ಕಳಚಿತು ತಮದ ರಜಾಯಿ !
ನಭವ ವ್ಯಾಪಿಸಿ ಹೊಳೆಯುತಿಹ ನೇಸರ ಬಾನ ಮಣಿಯಾಗಿ ಅಂದದಿ
ಸುತ್ತೆಲ್ಲಾ ಉಷಾಕಿರಣ ಆವರಿಸಿರಲು ಕಳಚಿತು ತಮದ ರಜಾಯಿ
ನಿಸರ್ಗದ ವಿಸ್ಮಯವ ಕಂಡು ಸ್ಮಿತ ವದನೆಯಾಗಿಹಳು ‘ನಯನಾ’
ಈ ಚೆಲುವ ಜಾಡಿನಲಿ ಬಾಳು ಸಾಗುತಿರಲು ಕಳಚಿತು ತಮದ ರಜಾಯಿ !!
******************