ಕವಿತೆ
ತಣಿಸಬಾರದೇ
ಶಾಲಿನಿ, ಕೆಮ್ಮಣ್ಣು
ಮುಂಗಾರಿನ ಮುಂಜಾನೆ
ಮಳೆಯಲಿ ಮಿಂದ ಎಲೆಗಳ ಮೇಲೆ
ಹಾಯಾಗಿ ಚೀಂವ್ ಗುಟ್ಟುತ್ತಾ ಕಚಗುಳಿಯಿಡುವ
ಪುಟ್ಟ ಗುಬ್ಬಚ್ಚಿ ಮರಿಯೇ
ಮೇಘ ರಾಶಿಯಂಚಿಂದ ತೇಲಿ ಚಿಮ್ಮುತ್ತಿರುವ
ಜಿನುಗು ಮಳೆಹನಿಗೆ ಮೈಗೊಡವಿ ಕುಣಿದು ಗಿಜಿಗಿಟ್ಟುತ್ತಿಹ
ಗೀಜಗನೇ,
ಚುಂಬನವೀಯುತ ಜೇನನು ಸವಿಯುತ,
ಸುಮಗಳ ಮೇಲೆ ಪುಕ್ಕವ ಬಿಚ್ಚಿ
ಕುಪ್ಪಳಿಸುವ ಸೊಬಗಿನ ಪಾತರಗಿತ್ತಿಯೇ,
ಚಂಗನೆ ಜಿಗಿಯುತ್ತ ಹಾರುತ ಚಿಲಿಪಿಲಿ
ಹಾಡುವ ನಿಮ್ಮ ವೈಯ್ಯಾರವ ಕಾಣಲು,
ಅರುಣಗಿರಣಗಳ ನಡುವೆ
ಕರಿ-ಬಿಳಿ ಮೋಡ ಕೂಡ ಚೆಲ್ಲಾಟವಾಡುವಂತಿದೆ,
ಕಲರವ ಸದ್ದಿಗೆ ಸೆಳೆಯುವ ಬಣ್ಣಗಳಂದ,
ನೇಸರ ತನ್ನ ತೀಕ್ಷ್ಣತೆಯ ಮರೆಮಾಚಿದಂತಿದೆ,
ಮೋಹಕ ಆಟಕೆ ಮಧುರ ನಿನಾದಕೆ,
ಮೈಯೊಡ್ಡಿ ನಿಂದಿರುವ ವ್ರಕ್ಷ ಸಾಲು
ಪುಷ್ಪಗಳ ವರ್ಣಚಿತ್ತಾರವ ಬಣ್ಣಿಸಿದಂತಿದೆ,
ಅರಳಿರುವ ಸುಮ ನಾಚಿ ಮೊಗ್ಗಾಗುವಂತಿದೆ,
ಮೊಗ್ಗರಳಲು ಪವಡಿಸಿದಂತಿದೆ,
ಭಾಸ್ಕರನ ಮಂದಹಾಸಕ್ಕೆ, ತಂಗಾಳಿಯ ಸ್ಪರ್ಶಕ್ಕೆ ,
ನಿಸರ್ಗ ವೈಭವಕ್ಕೆ ಮೈಮರೆತ ಮಯೂರ ಮೈಮರೆತು ನಾಟ್ಯವೆಯ್ಯಲು ಸ್ವರ್ಗವೇ ಧರೆಗಿಳಿದಂತಿದೆ
ಸೊಬಗ ಸವಿಯಲು ಕಾಲವೇ ನೀ ಈ ಕ್ಶಣ ನಿಲ್ಲಬಾರದೇ
ಮದುವಣಗಿತ್ತಿಯ ಮೈಮಾಟವ ಹೃದಯದಿ ತುಂಬಿಕೊಳುತ ಮೈಮನ ತಣಿಸಬಾರದೇ.
?*****************************