ಎಲ್ಲಿದ್ದೇನೆ?

ಕಥೆ

ಎಲ್ಲಿದ್ದೇನೆ?

ಬಿ ಎನ್ ಭರತ್ 

person riding surfboard

ಮಲಗಿಕೊಂಡು ಇರುವಾಗ ಮನೆಯಿಂದ ತಂದು ಕೊಟ್ಟಿದ್ದ ಮೆಚೂರ್  ಆದ ಎನ್ ಎಸ್ ಸಿ ನೆನಪಾಯಿತು.ಎದ್ದು ಕುಳಿತು  ಪೆನ್ನಿಗಾಗಿ ತಡಕಾಗಿ ಸಹಿ ಮಾಡಿ ಎತ್ತಿಟ್ಟೆ.  ಆಸ್ಪತ್ರೆಯ ಬಿಲ್ಲು ಕಟ್ಲಿಕ್ಕೆ ಎಷ್ಟು ದುಡ್ದಿದ್ರೂ ಸಾಕಾಗ್ಲಿಕ್ಕಿಲ್ಲ. ಮಂಪರು ಬಂದ ಹಾಗೆ ಆಯಿತು.

  ” ಪೋಸ್ಟ್ ಮಾಷ್ಟ್ರು ಇಲ್ಲವಾ ” ವಿಟ್ಲ ಬಸ್ ಸ್ಟಾಂಡ್ ನ ಎದುರಿನ ಕಟ್ಟಡದ ಮಾಳಿಗೆಯಲ್ಲಿ ಹೋಗಿ ಕೇಳಿದೆ.  ಅಲ್ಲಿದ್ದವನು ಒಂಥರಾದಲ್ಲಿ ನನ್ನನ್ನೇ ನೋಡಿದ ” . ಕಾರಂತರು ರಜೆಯಲ್ಲಿದ್ದಾರಾ ” ಮತ್ತೆ ಕೇಳಿದೆ. ” ಬಟ್ಟೆಯಂಗಡಿಗೆ ಬಂದು ಇವನದ್ದೆಂತ? ಪೋಸ್ಟ್ ಅಂತೆ! ಪೆಟ್ಟು ಕಮ್ಮಿಯಾ ಅಂತ  ” ಅಲ್ಲಿಯವನು ಇನ್ನೊಬ್ಬನೊಟ್ಟಿಗೆ ಮಕ್ಕಾರು ಮಾಡಿದ.

ಮನೆಗೆ ಬಂದು ಅಪ್ಪ ಹೇಳಿದ್ದನ್ನು ಪೋಸ್ಟ್ ಮಾಷ್ಟ್ರನ್ನೇ ಕೇಳುವ ಅಂತ ನೋಡಿದ್ರೆ ಇದೆಂತ ಹೀಗೆ? ಪಾಪ ರಿಟೈರ್ ಮೆಂಟ್ ದುಡ್ಡಲ್ಲಿ ಸ್ವಲ್ಪ ದೊಡ್ಡ ಅಮೌಂಟನ್ನೇ ಎನ್ ಎಸ್ ಸಿ ಯಲ್ಲಿ ಹಾಕಿದ್ರು. ಇರುವ ಆರೇಳು ಸ್ಟಾಫ್ ಗೆ ಚಾ ತರ್ಲಿಕ್ಕೆ ಹೇಳಿದ್ರಂತೆ ಅಪ್ಪ. ಅಲ್ಲಿರುವ ಪಿಯೋನ್ ಮಹಾಶಯ ಹೋಗಿ ಮಾಲ್ಪುರಿ, ಮಸಾಲೆ ದೋಸೆ, ಸ್ಪೆಷಲ್ ಚಾ ವನ್ನೇ ತರಿಸಿದ. ಪಾಪ ರಿಟೈರ್ ಆದ ಅಪ್ಪನಿಗೆ ಎಕ್ಸ್ಟ್ರಾ ಟ್ಯಾಕ್ಸ್ ! ಪೋಸ್ಟ್ ಮಾಷ್ಟ್ರು ಎಲ್ಲ ಫಾರ್ಮ್ ಗಳಲ್ಲಿ ಸೈನ್ ತೆಕ್ಕೊಂಡರಂತೆ. ಅಲ್ಲಿಯ ಸ್ಟಾಫ್ ನಮ್ಮ ನೆರೆಕರೆಯ ಕಾರಂತರು. ಮನೆಯ ಹತ್ರ ಬಂದು ಆಮೇಲೆ ಅಪ್ಪನ ಹತ್ರ ಹೇಳಿದ್ರಂತೆ. ಪೋಸ್ಟ್ ಮಾಷ್ಟ್ರು ಅವರ ಹೆಂಡತಿ ಹೆಸರಲ್ಲಿ ಏಜೆಂಟ್ ಆಗಿ ಸಾವಿರಗಟ್ಲೆ ಎಕ್ಸ್ಟ್ರಾ ಸಂಪಾದನೆ ಮಾಡ್ತಾರಂತೆ. ” ಕಮಿಷನ್ ನಲ್ಲಿ ನಿಮಿಗೂ ಶೇರ್ ಕೊಡ್ಬೇಕಿತ್ತು ” ಅಂತ ಕಾರಂತರು ಅಪ್ಪನ ಹತ್ರ ಹೇಳಿದ ಮೇಲೆ ಅಪ್ಪನಿಗೂ ಛೇ ಅಂತ ಚಪ್ಪೆ ಆಯ್ತಂತೆ.  

ಹೋಗಿ ಆ ಬಗ್ಗೆ ವಿಚಾರಿಸುವ ಅಂತ ಮಾಡಿದ್ರೆ ಅಲ್ಲಿದ್ದವನು ಎಂತ ಹಾಗೆ ಪೆದಂಬು ಮಾತಾಡುದು.

” ಬಾಕಿಮಾರು ಗೆದ್ದೆಲಿ  ಇಂದು ಎಂತ ಆಟ  ಹೇಳಿ ಕೇಳಿಗೊಂಡು  ಬಾ ” ಅಂತ ಅಮ್ಮ ಹೇಳಿದ್ದು ನೆನಪಾಗಿ ಅಲ್ಲಿ ಪೇಪರ್ ಅಂಗಡಿಯ ಅಜ್ಜನ ಹತ್ರ ಕೇಳಿದಾಗ ದಪ್ಪ ಕನ್ನಡಕ ಸರಿ ಮಾಡಿ ” ಅಲ್ಲಿ ಗದ್ದೆ ಎಲ್ಲಿ ಉಂಟು ಈಗ? ಗವರ್ನಮೆಂಟ್ ಬಸ್ ಸ್ಟಾಂಡ್ ಆಗಿಯೇ ಮೂವತ್ತು ವರ್ಷಕ್ಕಿಂತ ಮೇಲೆ ಆಯ್ತಲ್ಲಾ? “ಅಂದ.  

” ಆಸ್ಪತ್ರೇಲಿ ಇದ್ದೀಯ ಅಂತ ಗೊತ್ತಾಯಿತು ಅದಕ್ಕೆ ಫೋನ್ ಮಾಡಿದ್ದು ” ಚಡ್ಡಿ ದೋಸ್ತಿ ಹರೀಶ ಫೋನ್ ಮಾಡಿ ” ಈಗ ಅಕ್ಕ ಅಷ್ಟು ಬರೆಯುವುದಿಲ್ಲವಾ ” ಎಂದು ಮಾತು ಮುಂದುವರಿಸಿದ. ನಿಜವಾಗಿಯೂ ಹೌದು ಆಗ ಅಕ್ಕ ಒಬ್ಬಳು ಉದಯೋನ್ಮುಖ ಬರಹಗಾರ್ತಿ. ಮತ್ತೆ ಎಲ್ಲ ಬತ್ತಿಯೇ ಹೋಗಿ ಬಿಟ್ಟಿತು, ಕೆಲವು ಕ್ರಿಕೆಟರ್ ಗಳು ಫಾರ್ಮ್ ಕಳಕೊಳ್ಳುವ ಹಾಗೆ.

 ಅಕ್ಕ ನವಭಾರತ ತರ್ಲಿಕ್ಕೆ ಹೇಳಿದ್ದು ನೆನಪಾಗಿ ಅವನ ಹತ್ರ ಕೇಳಿದಾಗ ” ಅದೆಲ್ಲಿ ಉಂಟು ಈಗ ” ಅಂತ ಹೇಳಿ ಒ೦ಥರಾದಲ್ಲಿ ನೋಡ್ತಾ  ಅವನು ಗಿರಾಕಿಗೆ ಯಾವುದೋ ಮ್ಯಾಗಝೀನ್ ಕೊಟ್ಟ.   ನನಗೆ ಹೇಗೆ ಹೇಗೋ ಆಯ್ತು.  ತಲೆ ಬುಡ ಅರ್ತ ಆಗದೆ ನಾನು ನಾಕು ಮಾರ್ಗದ ಗೋಡೆಯ ಮೇಲಿದ್ದ ಸಿನಿಮಾ ಪೋಸ್ಟರ್ ನೋಡ್ತಾ ಹಾಗೇ ನಿಂತೆ. ಅಕ್ಕ ನವಭಾರತ ಪೇಪರ್ ತರ್ಲಿಕ್ಕೆ ಯಾಕೆ ಹೇಳಿದ್ದು ಮತ್ತೆ?    ಕಳೆದ ವಾರ ಅಕ್ಕ ಬರ್ದ ಕಥೆ ಮ್ಯಾಗಝೀನ್ ವಿಭಾಗದಲ್ಲಿ ಪ್ರಕಟ ಆಗಿತ್ತು. ಅದಕ್ಕೆ ಓದುಗರ ಪ್ರತಿಕ್ರಿಯೆ ಉಂಟಾ ಅಂತ ನೋಡ್ಲಿಕ್ಕೆ ಇರ್ಬಹುದು.  

.

ಬಾಯಿಗೆ ಮಾಸ್ಕ್ ಹಾಕಿಕೊಂಡು ಸ್ಟೆತೋಸ್ಕೋಪ್ ನಿಂದ ನನ್ನ ಎದೆಯಲ್ಲಿ ಬಡಿತ ಚೆಕ್ ಮಾಡಿದ ಬಿಳೀ ಕೋಟ್ ಹಾಕಿದ ಡಾಕ್ಟ್ರು ನಸು ನಗುತ್ತಾ ” ಯು ಹ್ಯಾವ್ ಇಮ್ ಪ್ರೂವ್ಡ್ ಎ ಲಾಟ್ ”  ಎನ್ನುತ್ತಾ ಕಾಟ್ ನ ಪ್ಯಾಡ್ ನಲ್ಲಿ ಏನೋ ನೋಟ್ ಮಾಡಿ ಮುಂದಿನ ಬೆಡ್ ಗೆ ಹೋದರು.  ಎಂತ ಇಂಪ್ರೂವ್ ಮಣ್ಣಾ೦ಗಟ್ಟಿ! ಆಯಾಸವಾದಂತಾಗಿ ಮತ್ತೆ ಕಣ್ಣು ಮುಚ್ಚಿದೆ. ಯಾರೋ ಕಾಲಿಂಗ್ ಬೆಲ್ ಸದ್ದು ಮಾಡಿದ ಹಾಗೆಯೋ ಮಾರ್ಗದಲ್ಲಿ ಜೋರಾಗಿ ಸೈಕಲ್ ಬೆಲ್ ಕಿಣಿ ಕಿಣಿ ಅಂತ ಬಾರಿಸಿದ ಹಾಗೆಯೋ ಶಬ್ದ ಕೇಳ್ತಾ ಉಂಟಲ್ಲಾ?

ಬಸ್ ಸ್ಟಾಂಡ್ ನ ಹತ್ತಿರ ಇದ್ದ ಖಾಲಿ ಜಾಗದಲ್ಲಿ ಸೈಕಲ್ ಬ್ಯಾಲೆನ್ಸ್ ನೋಡ್ಲಿಕ್ಕೆ ಅಂತ ಸುಮಾರು ಹೊತ್ತು ನಿತ್ತುಕೊಂಡೇ ಇದ್ದೆ. ಪಳನಿ ಸ್ವಾಮಿ ಸೈಕಲ್ ನ ಪೆಡಲಲ್ಲಿ ನಿತ್ತುಕೊಂಡೇ ಕೊಡಪಾನ ದಿಂದ  ನೀರು ಸುರಿದು ಸ್ನಾನ ಮಾಡುದು, ಹ್ಯಾಂಡಲ್ ಮೇಲೆ ತಿರ್ಗಿ ಕೂತು ಪೆಡಲ್ ತುಳಿಯುವುದು ಇದೆಲ್ಲ ನೋಡ್ಲಿಕ್ಕೆ ಎಷ್ಟು ಚಂದ! ” ಮಕ್ಕಳೆಲ್ಲ ಜೋ …..ರಾ… ಗಿ ಚಪ್ಪಾಳೆ ಹೊಡೀರಿ ” ಅಂತ ಅವನು ಹೇಳುದನ್ನೇ ನಾವೆಲ್ಲ ಕಾಯ್ತಿದ್ದೆವು. ಒಂದು ವಾರ ಅವನು ಸೈಕಲ್ ನಿಂದ ಕೆಳಗೆ ಇಳೀಲಿಕ್ಕೆ ಇಲ್ಲ ಅಂತೆ. ರಾತ್ರಿ ಮಲಗ್ಲಿಕ್ಕೆ ಎಂತ ಮಾಡ್ತಾನೆ ಅಂತ. ಮತ್ತೆ ಒಂದು ಎರಡು ಎಲ್ಲಾ ಹೇಗೆ ಅಂತ?  ಶೆ! ಎಂಥ ಅವಸ್ಥೆ! 

” ನೀವು ಇನ್ನೂ ಮಾತ್ರೆ ತಿನ್ಲಿಲ್ವಾ , ಎಷ್ಟು ಸಲ ಹೇಳುದು ನಿಮಗೆ ” ಬಿಳೀ ಡ್ರೆಸ್ ನಲ್ಲಿದ್ದವಳು ಜೋರು ಮಾಡಿದಾಗ ” ಈವತ್ತು ಸೈಕಲ್ ಬ್ಯಾಲೆನ್ಸ್ ಇಲ್ವಾ ? ” ಅಂತ ಕೇಳಿದೆ. ಅದಕ್ಕವಳು ” ಸೈಕಲ್ ಬ್ಯಾಲನ್ಸ್ ಎಂತ ಅದು ” ಅಂತ ಕೇಳುದಾ? ಛೆ! ಪಳನಿ ಸ್ವಾಮಿ ಎಷ್ಟು ಚಂದ ಬ್ಯಾಲೆನ್ಸ್ ಮಾಡುದು. ಕೆಲವು ಸಲ ಸೈಕಲನ್ನು ಬ್ರೇಕ್ ಮತ್ತು ಪೆಡಲ್ ಮೂಲಕ ಬ್ಯಾಲೆನ್ಸ್ ಮಾಡುದು ನೋಡ್ಲಿಕ್ಕೆ ಎಷ್ಟು ಖುಷಿಯಾಗ್ತದೆ , ಇವಳಿಗೆ ಅದೆಲ್ಲಾ ಗೊತ್ತೇ ಇಲ್ವಾ ಅಂತ.    

ಪಕ್ಕದಲ್ಲಿ ಮಲಗಿದ್ದವರು ಮೊಬೈಲ್ ಫೋನ್ ನೋಡ್ತಾ ಹಾಸಿಗೆಯಿಂದ ಎದ್ದು ಕೂತು ” ಔಟ್ ” ಅಂದ್ರು. ” ತೆಂಡೂಲ್ಕರ್ ಔಟಾ ” ಅಂತ ಆಶ್ಚರ್ಯದಲ್ಲಿ ಕೇಳಿದೆ.  ” ತೆಂಡೂಲ್ಕರಾ ? ಪರಬ್ಬನಿಗೆ ಎಂತ ಆಗಿದೆ? ” ಅಂತ ತಲೆ ಮೀಸೆ ಎಲ್ಲ ಬಿಳಿಯಾದವನು ನನಗೆ ಕೇಳುದು ಮಾರಾಯ್ರೆ!  ಎಂತದೋ ಜೋರು ಬಚ್ಚುತಾ ಉಂಟು ಆಯ್ತಾ , ಹಾಗೇ ಸ್ವಲ್ಪ ಮಲಗ್ತೇನೆ.    

ಸಿದ್ದಾಪುರದಲ್ಲಿ  ಗ್ರೌಂಡಲ್ಲಿ ದೋಸ್ತಿ ಗಳೊಟ್ಟಿಗೆ ಬ್ಯಾಟ್ ಬಾಲ್ ಆಡಿದ ಮೇಲೆ ಸಾಯಂಕಾಲ  ತೆಂಗಿನ ಮರದ ಕಟ್ಟೆಯ ಹೋಟ್ಲಲ್ಲಿ ಒಂದು ಮಸಾಲೆ ದೋಸೆ ತಿಂದು, ರಾಗಿ ಮಾಲ್ಟ್ ಕುಡ್ದು ಇಪ್ಪತ್ತು ಪೈಸೆ ಕೊಟ್ಟೆ. ಕ್ಯಾಷಿಯರ್ ” ಎಲ್ಲಿಂದ ಎಲ್ಲ ಬರ್ತಾರೆ ಈ ಗಿರಾಕಿಗಳು ಅಂತ. ಕೊಡಿ ಮೂವತ್ತು ರೂಪಾಯಿ ” ಜೋರಲ್ಲೇ ಕೇಳಿದ. ”  ಶಂಕರ ನಾರಾಯಣ ಜಾತ್ರೆಗೆ ಹೋಗ್ಬೇಕು. ಶಂಕರ ವಿಠ್ಠಲ್ ಬಸ್ಸು ಎಷ್ಟು ಘಂಟೆಗೆ ” ಅಂತ ಕೇಳುವಾಗ ಅವನು ನನ್ನನ್ನೊಮ್ಮೆ ನೋಡಿ “ಶಂಕರ ವಿಠ್ಠಲಾ ಅದು ನಿಂತು ಹೋಗಿ ಮೂವತ್ತು ವರ್ಷ ಆಗಲಿಲ್ಲವಾ?  ಈ ಮರ್ಲ ಎಲ್ಲಿಂದ ಬಂದದ್ದು. ಹೋಗ್ತೀಯಾ ಇಲ್ವಾ ? ” ಜೋರು ಮಾಡಿದ. 

ಜೋರು ಕೂಗುದು ಕೇಳಿಸಿತು. ಪಕ್ಕದ ಬೆಡ್ ನವ, ನಿನ್ನೆ ಕ್ರಿಕೆಟ್ ನೋಡುವಾಗ ನನಗೆ ಮಕ್ಕಾರು ಮಾಡಿದವ, ಎಂತ ಆಯ್ತು ಅವನಿಗೆ ಅಂತ. ನನಗಿಂತ ಸಣ್ಣ ಅಂತ ಇತ್ತು ಅವನಿಗೆ. ಛೆ ಎಂತ! ಅವನ ಮೇಲೆ ಇಡೀ ಬಿಳೀ ಬಟ್ಟೆ ಹಾಕಿದ್ದಾರೆ. ಎಂತ ಆಯ್ತು? ಅವನ ಸುತ್ತಲೂ ಎಲ್ಲರೂ ಕೂಗಿಕೊಂಡು ಇದ್ದಾರೆ. ನೋಡ್ಲಿಕ್ಕೆ ಆಗುದಿಲ್ಲ.  ಪಕ್ಕಕ್ಕೆ ಹೊರಳಿ ಮತ್ತೆ ಮಲಗಿದೆ.  ಎಂತ ಅದು ಅಷ್ಟು ಉದ್ದ ಕ್ಯೂ? ನೋಟ್ ಎಕ್ಸ್ಚೇಂಜ್ ಮಾಡ್ಲಿಕ್ಕಾ? ಮನೆಯಲ್ಲಿರುವ ಎಲ್ಲ ಐನೂರು ರೂಪಾಯಿ ಬೇಗ ತರುದು ಒಳ್ಳೇದಾ ಅಂತ. ಬೇಗ ಬೇಗ ಮನೆ ಸಾಮಾನೂ ತರ್ಬೇಕು ಮತ್ತೆ ಲಾಕ್ ಡೌನ್ ಆದರೆ ಕಷ್ಟ ಅಲ್ವಾ?

ಗಾಳಿಯಲ್ಲಿ ತೇಲಾಡುವ ಹಾಗೆ ಆಗ್ತಾ ಇದೆ. ಎಂತ ಆಗ್ತಾ ಉಂಟು? ಯಾವ ಊರು ಇದು ಗೊತ್ತೇ ಆಗುದಿಲ್ಲ. ಸಮುದ್ರ, ಎಷ್ಟು ಒಳ್ಳೇ ಗಾಳಿ,  ಅದೆಂತ ಕಬ್ಬಿನ ಗದ್ದೆಯಾ, ಅದು ಅಡಿಕೆ ತೋಟವಾ, ಅದ್ಯಾವ ಸಂಕ, ಅಲ್ಲಿ ಅಷ್ಟು ದೊಡ್ಡ ಮೈದಾನ, ಮೈಕಲ್ಲಿ ಎಂತ ಭಜನೆಯಾ ಅದು, ಅಲ್ಲಿ ಮುಂದೆ ಅದೂ ..ಅದೂ ..ಎಂತ ಸರಿ ಕಾಣುದಿಲ್ಲ. ಹಾಂ …ಹಾಂ…  

**************************

 

Leave a Reply

Back To Top