ಪ್ಯಾರಿ ಪದ್ಯ

ಪುಸ್ತಕ ಸಂಗಾತಿ

ಪ್ಯಾರಿ ಪದ್ಯ

ನಾನಿವತ್ತು ಓದಿದ ಪುಸ್ತಕ

      ” ಪ್ಯಾರಿ ಪದ್ಯ “

********

ಎ.ಎಸ್.ಮಕಾನದಾರರು ಉತ್ತರ ಕರ್ನಾಕಟದಲ್ಲಿ ಅಪಾರ ಪ್ರೀತಿ ಗೌರವಕ್ಕೆ ಕಾರಣರಾದ ಸಾಹಿತಿಗಳ ಒಡನಾಡಿಗಳು.ಸೃಜನಶೀಲ ಸಾಹಿತಿಗಳಾಗಿ,ವಿಮರ್ಶಕರಾಗಿ,ಚಿಂತಕರಾಗಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಸರಳ ಸಜ್ಜನಿಕೆಯ ವ್ಯಕ್ತಿಗಳು.ವೃತ್ತಿಯಿಂದ ಕೌಟುಂಬಿಕ ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕರಾಗಿ(ಗದಗ) ಸೇವೆ ಸಲ್ಲಿಸುತ್ತಾ,ಪ್ರವೃತ್ತಿಯಲ್ಲಿ ಉತ್ತಮ ಬರಹದ ಹತ್ತಾರು ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.ಎ.ಎಸ್.ಮಕಾನದಾರರು,ಕೇವಲ ಸಾಹಿತಿಗಳಷ್ಟೇ ಅಲ್ಲ.ಸ್ವತಹಃ ನಿರಂತರ ಪ್ರಕಾಶನದ ಸ್ಥಾಪಕರು.ಈ ನಿರಂತರ ಪ್ರಕಾಶನಕ್ಕೂ ಕವಿ ಸಾಹಿತಿಗಳಿಗೂ ಅಳಿಸಲಾಗದ ಸಂಬಂಧವಿದೆ.ಅನೇಕ ಉತ್ತಮ ಬರಹಗಾರರ ಕೃತಿಗಳನ್ನು ಕನ್ನಡ ಪುಸ್ತಕ ಲೋಕಕ್ಕೆ ಮೌಲಿಕ ಕೊಡುಗೆ ಕೊಟ್ಟ ಕೀರ್ತಿಯು ಎ.ಎಸ್.ಮಕಾನದಾರರ ಮುಡಿಗೇರಿದೆ.

     2020-21 ರ  ವರುಷಗಳ ಕರೋನಾ ಭೀತಿಯ ಸವಾಲು ಎದುರಿಸಿಕೊಂಡು,ಕಷ್ಟ ಕಾಲದಲ್ಲಿಯೂ ಓದು ಬರಹವನ್ನು ತಪಸ್ಸಿನಂತೆ ಮಾಡಿಕೊಂಡಿದ್ದರ ಸಿದ್ಧಿಗೆ ಪ್ಯಾರಿ ಪದ್ಯ ಕಾವ್ಯ ಸಂಕಲನವು ಮಾನವೀಯ ಮೌಲ್ಯಗಳ ನೈಜ ಚಿತ್ರಣವನ್ನೊಳಗೊಂಡು ರೂಪ ತಾಳಿದೆ.

ಆಶಯ,ವಸ್ತು,ರೂಪ-ಸ್ವರೂಪಗಳ ಪ್ಯಾರಿ ಪದ್ಯ ವು ಪರಿಮಳ ಚೆಲ್ಲಿದ ಕಾವ್ಯ ಗಂಧವಾಗಿದೆ.ಕೃತಿಯು ಒಂದು ಅನುಪಮ ಮನೋಪಕಾರಗಳ ಕಾಣಿಕೆಯಾಗಿದೆ.ಪುಸ್ತಕದೊಳಗೆ ಬಿಡಿಸಿದ ಚಿತ್ರಗಳಿಗೂ ನುಡಿಗಳಿಗೂ ವಿಚಾರಗಳ ನಂಟಿದೆ.ಈ ಬಗೆಯ ಪದ್ಯಗಳು ಕನ್ನಡದಲ್ಲಿ ಹೊಸತನ ಮತ್ತು ಹಿರಿದರ್ಥ ನೀಡುವ ಸಾರ್ಥಕ ಪ್ರಯತ್ನವೆನ್ನಬಹುದು.ಓದುಗರ ಕುತುಹಲವನ್ನು ಜಾಗೃತಗೊಳಿಸಿ ಅಭಿಮಾನ  ಹೆಚ್ಚಿಸುತ್ತದೆ.

ರಚನೆಯಾದ ಸಾಲುಗಳಲ್ಲಿ ಕಣ್ಣಾಯಿಸೋಣ.

ನೀನು ಸೂಜಿ

ನಾನು ದಾರ

ಹೊಲಿಯೋಣ ಗಡಿಗಳನು

ಗಂಟೆಗಟ್ಟಲೇ ಕತೆ ಹೇಳಬೇಕಿಲ್ಲ.ಗಡಿ ಸಮಸ್ಯೆಯ ಅಪವಾದ ವಿವಾದಗಳನು ಊಹಾಪೋಹಗಳಿಂದ ಲೇಖಿಸುವುದು ಬೇಕಿಲ್ಲ. ಜಟಿಲವಾದ ಸಂಗತಿಯನ್ನು ಮೃದು ಮಾತಿನಲಿ ಬಿಡಿಸಿದ್ದಾರೆ.ಗಡಿಯ ವಿವಾದಗಳೆಂದರೆ ನಾವೆಲ್ಲರೂ ಹಲುಬುತ್ತೇವೆ.ಮನುಷ್ಯ-ಮನುಷ್ಯರಿಗಿಂತ ಹಿರಿದಾದ್ದೇನಿಲ್ಲ.ಈ ಮಣ್ಣಿನ  ಋಣ,ಭ್ರಾತ್ರುತ್ವದ ನೋವು ನಲಿವುಗಳನು,ಬೆರಳಿಗೆ ಸೂಜಿಯ ಮೊನಚು ತಾಕದಂತೆ ಹೊಲಿಯುವ ನಿಲುವನ್ನು ಕಲಾತ್ಮಕವಾಗಿ ಪ್ರಕಟಪಡಿಸಿದ್ದಾರೆ.

ಎ.ಎಸ್.ಮಕಾನದಾರರ ಅನುಭವ ಅಸೀಮವಾದದ್ದು.ಇವರ ಸ್ವಪ್ರತಿಭೆಯು ಓದುಗರ ಅನುರಾಗ ಸೆಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿ

ಬುದ್ಧನಾಗಲು ಭೋದಿವೃಕ್ಷವೇ ಬೇಕಿಲ್ಲ

ಅರ್ಧಾಂಗಿ ಕರುಳ ಕುಡಿಯೂ ತ್ಯಜಿಸಬೇಕಿಲ್ಲ

ಮೌನದ ಹಾದಿಯಲಿ ಹಾಡಿದರೆ ಸಾಕು

ಕೈಗೆಟುಕದ ಕನಸನ್ನರಸುತ್ತಾ,ಜೀವನವನ್ನು ಕಳೆದುಕೊಳ್ಳುವುದು ಮೂರ್ಖತನವೆ.ಅವರಿವರು ಹುರಿದುಂಬಿಸಿ ಆಕಾಶಕ್ಕೆ ಏಣಿ ಹಾಕುವ ಪೊಳ್ಳು ಮಾತುಗಾರರು ಅಧಿಕವಾಗಿದ್ದಾರೆ.ಬುದ್ಧ,ಬಸವ,ಗಾಂಧಿ,ಮತ್ತು ಅಂಬೇಡ್ಕರ್ ಅವರಂತಾಗಲು ಸಾಧ್ಯವಾಗದಿದ್ದರೂ,ಅವರ ನಡೆ,ನುಡಿಯನು ಜೀವನದಲ್ಲಿ ಪಾಲಿಸಿದರೆ ಸಾಕು. ಸಧ್ಯದಲಿ ನಮಗೆ ಲಭಿಸಿದ ಅವಕಾಶ,ನಮಗಿರುವ ಇತಿಮಿತಿಯನ್ನು ಹಿರಿದುಗೊಳಿಸಿ ಬದುಕಿದರೆ ಸಾಕೆನ್ನುವ  ಕವಿಯ ಚಿಂತನಾ ಕ್ರಮವಾಗಿದೆ.

” ಶಬ್ದಗಳನು ಜಾಲಾಡಿದೆ

ಕೋಶವೆಲ್ಲ ತಿರುವಿದೆ

ಕಿರು ನಗೆ-

ಭೋಧಿ ವೃಕ್ಷವಾಯಿತು

*ದೀಪವು ಮತ್ತೊಂದು ದೀಪವನು ಬೆಳಗಿಸುವಂತೆ., ಕಾಡುಗಲ್ಲಿಗೆ ಆಕಾರ ನೀಡುವ ಶಿಲ್ಪಿಯಂತೆ.,ಹೂವುಗಳ ಪೋಣಿಸಿ ಮಾಲೆ ಮಾಡಿದಂತೆ, ಶಬ್ದಗಳ ಕಟ್ಟುವಿಕೆಯೂ ಕವಿಯ ಚಾಣಾಕ್ಷತನ.ಪ್ರಗತಿಪರ ಬರಹಗಾರರ ಆಳವಾದ ಅರಿವು ಕಾಣುತ್ತದೆ.

ಇರಿಯಲು ಬಂದ ಚೂರಿಗೆ ಮುತ್ತಿಕ್ಕಿದೆ

ಮುತ್ತಿನ ಮತ್ತಿನಲಿ ಚೂರಿ ಮೆತ್ತಗಾಯಿತು

ಹಣ,ಹೆಸರು,ಸ್ಥಾನಮಾನ ಹೊಂದಿದವರು ನಾಗರೀಕತೆಯ ಹಮ್ಮಿನಲ್ಲಿರುವವರೀಗ ವಿರಳವೇನಿಲ್ಲ.ಪ್ರಬಲ ಶಕ್ತಿಯ ವಿರುದ್ಧ ತುಟಿ ಬಿಚ್ಚಿದರೆ,ಕೊರಳಿಗೆ ಕುತ್ತು ಬರುವುದು.ಇರಿಯಲು ಬಂದ ಚೂರಿಯೆಂದರೆ ಸಮಾಜದಲ್ಲಿರುವ  ಕೆಲವು ಕೆಟ್ಟ ಹುಳುಗಳೆ  ಹೊರತು ಇನ್ನಾವುದಾಗಿರಲು ಸಾಧ್ಯವಿಲ್ಲ.ಒಳ್ಳೆಯತನದಿಂದ ಒಂದು ಆದರ್ಶ ಮಾರ್ಗದರ್ಶಕರಾಗಿ ಮೃದು ಮಾತಿನಲ್ಲಿ ಸರಿ ದಾರಿಗೆ ತಂದಾಗ ಮಾತ್ರ ಗರ್ದಿತನವು ಮೆತ್ತಗಾಗುತ್ತದೆ. ಶಾಂತಿ ಮಂತ್ರದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯು ಜಗದ ಪ್ರಖ್ಯಾತರು.

ಸುಟ್ಟುಕೊಂಡ ಬದುಕಿಗೆ

ಇದ್ದಿಲು ಆಗುವ ಭಾಗ್ಯವೂ ಇಲ್ಲ

ಮೇಲ್ನೋಟಕ್ಕೆ ಬಹು ಸರಳವೆನಿಸದರೂ,ಆಂತರ್ಯದಲ್ಲಿ ಬದುಕಿನ ತತ್ವ ಅಡಗಿದೆ. ದರ್ದಿನ ಮರುಹುಡುಕಾಟವಿದೆ.

ಆರಿದ ದೀಪ ಉರಿಸು,ಉರಿವ ದೀಪ ಆರಿಸದಿರು

ಜಗದ ಕತ್ತಲೆ ಕಳೆಯಲು ಸಮೆಯ ಬೇಕಾಗಿವುದು

ಕನಸುಗಳಿಗೆ ಸಾಕಾಷ್ಟು ಚಿಗರು ಕವಲುಗಳಿವೆ.ಕಡಿಯುತ್ತಾ ಸಾಗಿದರೆ,ದಣಿದವರಿಗೆ ನೆರಳಿಲ್ಲ.ಜ್ಞಾನವು ಬೆಳಕಿನ ಸಂಕೇತವಾಗಿದೆ.ಜ್ಞಾನ ನೀಡುವ ಪರಿಣಿತರನ್ನು ಗೌರವಿಸಬೇಕು.ಸಮೆಯ ಎನ್ನುವುದೂ ಪ್ರಜ್ಞೆಯ ಸೂಚಕ ಪದವೆ.

 ಎ.ಎಸ್.ಮಕಾನದಾರರ ಭಾವದ ಹರವು ವಿಶಾಲವಾಗಿದೆ.ಎದೆಯೊಳಗೆ ಉಳಿದು ಬಿಡುವ ವಾಸ್ತವದ ಸಂವೇದನೆಗಳನ್ನು ದಾಖಲಿಸಿದ್ದಾರೆ.

ಉಸಿರಾಡುವವರು ಜೀವಂತ ಅದಾರಂತ ಏನು ಗ್ಯಾರಂಟಿ

ಸತ್ತವರಲ್ಲಿ ಕೆಲವರು ಜೀವಂತ ಅದಾರಲ್ಲ ಇದಕ ನೀ ಏನಂತಿ?

ಒಬ್ಬರು,ಇನ್ನೊಬ್ಬರನ್ನು ತುಳಿದು ಬದುಕುವ ವೃತ್ತಿಯನು ಕರಗತ ಮಾಡಿಕೊಂಡ ವಂಚಕರು ನಿರ್ಭಯದಿಂದ ಇದ್ದಾರೆ. ನೀತಿ ನಿಯಮ,ನಿಯತ್ತುಗಳ ಗಾಳಿಗೆ ತೂರಿ,ದುರ್ಬಲರ ಕನಸು ಕನವರಿಕೆ ಕಸಿದುಕೊಂಡು,ಮನುಷ್ಯತ್ವವನ್ನು ಮರೆತವರು ನಮ್ಮ ನಡುವೆ ಬದುಕುತ್ತಿದ್ದಾರೆ.ಹೀಗೆ ಅಂತವರು ತುಳಿತಕ್ಕೊಳಗಾದವರು,ಸತ್ತೂ ಜೀವಂತ ಉಸಿರಾಡುತ್ತಿದ್ದಾರೆ.

ಈ ಪ್ಯಾರಿ ಪದ್ಯ ಸಂಕಲನದೊಳಗೆ ಹಲವಾರು ಸಾಲುಗಳು ಹೃದಯ ಸಂಬಂಧದ ಅನೇಕ ಭಾವುಕ ಎಳೆಗಳು ಪ್ರತಿಬಿಂಬಿತವಾಗಿವೆ.

ಶತಮಾನದ ನಂಜಿಗೆ ಯಾವ ಹೊಳೆಯಲ್ಲಿ ತೊಳೆಯಬೇಕಿದೆ

ಸಂತ ಶರಣರು ತಿಕ್ಕಿ ತೊಳೆದರೂ ಇನ್ನೂ ಉಳಿದಿದೆ.

ಜಾತಿ, ಮತ ,ಪಂಥ, ಧರ್ಮ,ಮತ್ತು ಮೇಲು ಕೀಳು ಗಳ ಕಲಹವು ನಿನ್ನೆ ಮೊನ್ನೆಯದಲ್ಲ.,ಶತ ಶತಮಾನಗಳಿಂದ ಬಂದಿದೆ.ಒಂದೆಡೆಗೆ ಶರಣರು,ಪ್ರವಾದಿಗಳು,ದಾರ್ಶನಿಕರು,ಹಿರಿಯ ಕವಿಗಳು ಹರಗುತ್ತಾ ಬಂದರೂ,ಹಿಂದೆ ಹಿಂದೆಯೇ ರಕ್ತ ಬೀಜಾಸುರನಂತೆ ಜನ್ಮ ತಾಳಿದೆ ನಂಜು.ಇವತ್ತೇ ಈಗಿಂದೀಗಲೇ  ಕಡಲೊಳಗೆ ಅವಿತಿಟ್ಟು ಬಂದರೂ,ನಾಳೆಯ ದಿನ ತುರಿಕೆ ತೊಪ್ಪಲಿನಂತೆ ತೆರೆಯ ಮೇಲೆ ಉರಿದುರಿದು ಬೆವರಿಳಿಸುತ್ತದೆ ವ್ಯವಸ್ಥೆ.

ಇಂತಹ ಗ್ರಹಿಕೆಯ ಅನುಭವ ನೀಡಿರುವ ಮಕಾನದಾರರ ಬರಹವು ಬೆರಗು ಮೂಡಿಸುತ್ತವೆ.

ಸೋತ ಶಬ್ದಕೆ ಗಂಜಿ ಕುಡಿಸಿದೆ

ಒಣಗಿದ ಎದೆಗೂಡಲಿ ಚಿತ್ತಾರ ಬಿಡಿಸಿದೆ

****

ಸತ್ಯದ ಕತ್ತು ಹಿಸುಕಿದ ದಿಕ್ಕೇಡಿ ಸುಳ್ಳಿಗೆ ದತ್ತು ಪಡೆದ.

*****

ಪುಟ ಪುಟವೂ ತಿರುವಿದೆ

ಬಿಳಿಯ ಕಾಗದದಲಿ

ಕಣ್ಣೀರು ಶಾಹಿ ಅಸ್ಪಷ್ಟ ಪದಗಳು

ಹನಿಸುವ ಹನಿ ಹನಿಗೆ ತೇವಗೊಂಡ ಕಾಗದ

ಕಾಗದದ ಕನಿಕರ ಹೃದಯಕ್ಕಿಲ್ಲ.

ಪ್ಯಾರಿ ಪದ್ಯ ಸಂಕಲನದ ತುಂಬ, ಭಾವಗಳ ಹೊದಿಕೆ ಮಾತ್ರವಲ್ಲ.,ಪ್ರಭಾವ ಬೀರುವ ಅನುಭವ ತುಂಬಿದೆ.ನಾಡಿನ ನೆಲ,ಜಲ,ಗಡಿ,ಭಾನು,ಸ್ನೇಹದ ಕುರುಹು,ಪ್ರೇಮದ ನಿವೇದನೆಗಳು,ಹಪಾ ಹಪಿಯ ಚಾಪುಗಳು,ಜೀವಪರ ತುಡಿತಗಳು,ಓದಿಗೆ ದಕ್ಕುವ ಹೊಳಹುಗಳಿವೆ.ಎ.ಎಸ್.ಮಕಾನದಾರರು ಚಿಕ್ಕಂದಿನಿಂದಲೂ ಹಸಿವು,ಬಡತನ ಸೋಸಿ ಬಂದವರಾಗಿದ್ದರಿಂದ ಬದುಕು ಬರಹದ ಅನುಭವವು ಓದುಗರ ಚಿತ್ರಣ ಬದಲಿಸುತ್ತವೆ.ಇವರ ಕಾವ್ಯದ ಒಳಗಣ್ಣು ಸಾತ್ವಿಕ ವಿಚಾರಗಳ ದಿಟ್ಟಿಸುವ ಅಬಾಬಿಗಳಾಗಿವೆ.ನಿತ್ಯ ಮಗ್ಗಲು ಬದಲಿಸುವ ಮನಸುಗಳಿಗೆ  ಮತಿಯ ಯನ್ನೆಚ್ಚರಿಸುವ ವಾಣಿಯಾಗಿವೆ ಸಾಲುಗಳು.ಶುದ್ಧ ಭಾಷೆ,ತೂಕವುಳ್ಳ ಚಿಕ್ಕ ಚಿಕ್ಕ ಚೆಲ್ನುಡಿಗಳು ಸಹೃದಯರ ಸ್ಪೂರ್ತಿಗೆ ಈ ಪುಸ್ತಕವು ಕಾರಣವಾಗಿದೆ.ಎ.ಎಸ್.ಮಕಾನದಾರರ ಅವಿರತ ಸಾಹಿತ್ಯ ಸೇವೆ ಮುಂದುವರೆಯಲಿ,ಓದುಗರು ಪ್ರೋತ್ಸಾಯಿಸಲಿ ಎಂದು ಅಭಿನಂದಿಸುವೆ.

***       ****

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Leave a Reply

Back To Top