ಗಜಲ್

ಗಜಲ್

ಎ . ಹೇಮಗಂಗಾ

Grass, Field, Nature, Summer, Spring

ಹೊರಡುವ ಕ್ಷಣ ಒಮ್ಮೆಯೂ ತಿರುಗಿ ನೋಡಲಿಲ್ಲ ಅವಳು
ಬರಡು ಬಾಳ ಬಯಲಲಿ ಹಸಿರು ಮೂಡಿಸಲಿಲ್ಲ ಅವಳು

ಈ ದೇಹಕೆ ಅವಳೇ ಉಸಿರೆಂಬ ಭ್ರಮೆಯಲಿ ಮುಳುಗಿದ್ದೆ
ಒಲವ ರಸಪಾಕ ಉಣಿಸಿದರೂ ಪ್ರೀತಿಸಲಿಲ್ಲ ಅವಳು

ನಡೆಯಲಿ ನಟನೆ ತೋರಿದುದು ಕೊಂಚವೂ ತಿಳಿಯಲಿಲ್ಲ
ಮನದ ಇರುಳ ಬಾಂದಳಕೆ ಹುಣ್ಣಿಮೆ ಚೆಲ್ಲಲಿಲ್ಲ ಅವಳು

ಬಣ್ಣದ ಚಿಟ್ಟೆಯ ಸಾಂಗತ್ಯ ಬಯಸಿದುದು ನನ್ನದೇ ತಪ್ಪು
ಪಯಣದಲಿ ಜೊತೆ ಸಾಗಲು ಹೆಜ್ಜೆ ಸೇರಿಸಲಿಲ್ಲ ಅವಳು

ಧೂಳು ಕೊಡವಿದಂತೆ ಕೊಡವಿದವಳ ನೆನಪೇ ವಿಷವಾಗಿದೆ
ಜೀವ ಮಿಡಿತದ ಸದ್ದಿಗೆ ಒಮ್ಮೆಗೂ ಕಿವಿಯಾಗಲಿಲ್ಲ ಅವಳು

***************

Leave a Reply

Back To Top