ಗಜಲ್

ಗಜಲ್

ಸಿದ್ಧರಾಮ ಹೊನ್ಕಲ್

Message, Lost Love, Red Heart

ಆತ್ಮೀಯರೆಲ್ಲರಿಗೂ ಶ್ರದ್ಧಾಂಜಲಿ ಮಾತು ಬರೆದಿಟ್ಟುಕೊಂಡು ಕಾಯುತಿರಬಹುದು ಈಗ
ಎಂದು ಪೋಸ್ಟ್ ಮಾಡೋಣವೆಂದು ದಿನಾ ಕ್ಷಣಗಣನೆಯಲ್ಲಿ ಇರಬಹುದು ಈಗ

ಮುಂದೆ ಅವರು ಹೇಗೆ ಓದುವರು ಜಾಲತಾಣಕೆ ಹಾಕಿದರೆ ಓದಿಯಾರು ಹಾಕಿಬಿಡಿ ಈಗಲೇ
ಯಾರು ಏನೇನು ಬರೆಯಬಹುದೆಂದು ಸಹಜವಾಗಿ ಉಹಿಸಬಹುದು ಈಗ

ಎಲ್ಲರ ಸಾವು ತುಂಬಲಾರದ ನಷ್ಟ ಆಗಲಿಕ್ಕಿಲ್ಲ ಆದರೂ ಸ್ವಲ್ಪ ಉದಾರತನ ತೋರಿಬಿಡಿ ಈಗ
ಅವರ ಸೃಜನಶೀಲತೆ ಸಾಹಿತ್ಯದ ಜೊತೆಗಿನ ಒಡನಾಟ ನೆನಪಿಸಬಹುದು ಈಗ

ಭೋಜರಾಜ ಕಾಳಿದಾಸನಿಂದ ಶ್ರದ್ದಾಂಜಲಿ ಕೇಳಿ ಖುಷಿ ಪಟ್ಟು ಜೀವ ಬಿಟ್ಟಿದ್ದನಂತೆ ಆಗ
ಬದುಕಿನ ಅವಿಸ್ಮರಣೀಯ ಘಟನೆ ನೆನಪಿಸಿ ಆ ಜೀವಗಳಿಗೆ ಖುಷಿ ಕೊಡಬಹುದು ಈಗ

ಪ್ರೀತಿಯಿದ್ದವರು ಜೀವನವಿಡೀ ಕೊರಗಿ ಕಣ್ಣೀರು ಹಾಕಿ ಮರುಗಬಹುದು ಸಖಿ
ಸ್ಟೇಟಸ್ ಆಗೋದಿದೆಯೆಂದು ಹೇಳಿದ್ದೆ ತಾ ಮೊದಲೆಂದು ಹೆಮ್ಮೆ ಪಟ್ಟಿರಬಹುದು ಈಗ

ಏನೇನು ಬರೀಬೇಕೆಂದು ಕೆಲವರು ಹಲವರಿಗೆ ಸೂಚನೆ ಕೊಡಬಹುದು! ಈಗ
ಹೋಗಿದಾರೆ ಕೊಂಡಾಡಿದರೂ ಬಿಟ್ಟರೂ ಲಾಭವಿಲ್ಲವೆಂದು ತಿಳಿಸಬಹುದು ಈಗ

ಸಾವಿರಾರು ಹೊಗಳಿಕೆ ತೆಗಳಿಕೆ ಕೇಳಿ ಆತ್ಮಗಳಿಗೆ ಏನೂ ಆಗಬೇಕಿಲ್ಲ ಈಗ
ಆ ಕಾಯ ಮಣ್ಣಾಗುವುದೋ ಆಸಿಡ್ ನಿಂದ ಸುಡಬಹುದೋ ನೆನೆದು ನಡುಗಬಹುದು ಈಗ

ಸುತ್ತಲಿನವರ ಸಾವು ನೋವು ಸುದ್ದಿ ಕೇಳಿ ನೋಡಿ ತಲ್ಲಣಿಸುತ್ತಿವೆ ಜೀವಗಳು ಈಗ
ಕಾಲನ ಕರೆಯಲಿ ತಮ್ಮ ಪಾಳಿ ಬಂದಿತೆ? ಎಂದು ಕಾಯುತಿರಬಹುದು ಈಗ

ಸ್ವಲ್ಪ ವ್ಯಂಗ್ಯವೆಂದೆನಿಸಿದರೂ ಈಗಿನ ಸ್ಥಿತಿಯ ದಾರುಣತೆಯಿದು ಗೆಳೆಯರೇ
ಹುಟ್ಟಿನೊಂದಿಗೇ ಸಾವಿದೆ ದೈರ್ಯಗೆಡದೆ ಈಜಿದರೆ ಜೀವನ ದಡ ಸೇರಬಹುದು ಈಗ

ಬಾರದು ಬಪ್ಪದು; ಬಪ್ಪದು ತಪ್ಪದು ಕಡುಕತ್ತಲಲಿ ಬೆಳಕಿನ ಭರವಸೆ ಇರಲಿ
ಹೊನ್ನು’ಹೋಗುವಾಗ ಬರಿಗೈದಾಸರೇ ಎಲ್ಲರೂ ಅತಿಯಾಸೆ ತೊರೆಯಬಹುದು ಈಗ

********************

Leave a Reply

Back To Top