ವಾರದ ಕವಿತೆ

ಕೊರೊನ ಕಾಲದ ಕಪ್ಪು ಕ್ಲಿಪ್ಪು

ವೀಣಾ ನಿರಂಜನ್

ಕೊರೊನ ಕಾಲದ ಕಪ್ಪು ಕ್ಲಿಪ್ಪು
ಎಂದರೆ ನಿಮ್ಮ ಕಣ್ಣ ಮುಂದೆ
ಹತ್ತಾರು ಸನ್ನಿವೇಶಗಳು
ನೂರಾರು ಸಂಶಯಗಳು
ಹಾದು ಹೋಗಬಹುದು
ನಿಮ್ಮ ನಿಮ್ಮ ಭಾವಕ್ಕೆ ತಕ್ಕಂತೆ
ನಿಮ್ಮ ನಿಮ್ಮ ಚಿತ್ತ ವೃತ್ತಿಯ ಚಿತ್ರಗಳು
ಭಿನ್ನವಾಗಿರಬಹುದು
ಕೋಟಿ ಕೋಟಿ ಭಾವಗಳು
ಕೋಟಿ ಕೋಟಿ ಬಿಂಬಗಳು

ಆದರೆ ನಾನಿಲ್ಲಿ ಹೇಳ ಹೊರಟಿರುವುದು
ನನ್ನ ಕೂದಲಿನ ಕಪ್ಪು ಕ್ಲಿಪ್ಪಿನ ಬಗ್ಗೆ
ನಾನು ಹೊರಗೆ ಹೊರಟಾಗಲೆಲ್ಲ
ತಲೆಗೆ ಅದೇ ಕಪ್ಪು ಕ್ಲಿಪ್

ನನ್ನೊಡನೆ ಜೊತೆಯಾಗಿ ಬಂದು
ಮರಳಿ ಮನೆ ಸೇರಿದಾಗ
ಈ ಕಪ್ಪು ಕ್ಲಿಪ್ಪಿಗೂ ಕೊರೊನ ಭಯ
ಡೆಟಾಲ್, ಸೋಪು, ಸ್ಯಾನಿಟೈಜರ್ ಗಳ
ಸಹವಾಸದಲ್ಲಿ ಈಗ ಕಪ್ಪು ಕ್ಲಿಪ್ಪು
ಪರಿಶುದ್ಧವಾಗಿ ಹೊಳೆಯುತ್ತಿದೆ
ಕ್ಲಿಪ್ಪಿನ ಜೊತೆ ಪಿನ್ನು, ಬಳೆ, ಮೊಬೈಲ್
ಕಡೆ ಕಡೆಗೆ ಚಪ್ಪಲಿಗೂ ಸ್ನಾನ
ಬಿಟ್ಟು ಬಿಡದೆ ಮನೆಗೆ ಬಂದ ವಸ್ತುಗಳೆಲ್ಲ
ಅವುಗಳ ಗುಣಕ್ಕೆ ತಕ್ಕಂತೆ
ಸೋಪು, ಸ್ಯಾನಿಟೈಜರ್, ಉಪ್ಪು, ಲಿಂಬೆಹಣ್ಣು
ಇತ್ಯಾದಿಗಳಿಂದ ತೊಳೆಸಿಕೊಂಡು
ಶುಭ್ರವಾಗುತ್ತಿವೆ
ಎಷ್ಟೆಂದರೂ ಜೀವ ಭಯ ಸ್ವಾಮಿ!

ಈ ಬಟ್ಟೆಗಳು, ಮುಖ ಗವಸುಗಳು
ಮೇಲೆ ಇವನ್ನೆಲ್ಲ ಉಜ್ಜಿದ ಕೈಗಳು
ತೊಳೆದು ತೊಳೆದು ಸ್ವಚ್ಛವಾಗಬಹುದು
ಆದರೆ ಕೊರೊನ ಮಾತ್ರ
ತಲೆಯಲ್ಲಿ ಸದಾ ಜೀವಂತ
ಏನಾಗಿದೆ ಇತ್ತಿತ್ತಲೀಗ
ನಮ್ಮ ಮನಸ್ಸುಗಳನ್ನು ಕೂಡ
ತೊಳೆದು ಶುಭ್ರವಾಗಿಸಿ
ಫಳ ಫಳ ಹೊಳೆಯುವಂತೆ
ಮಾಡುವುದು ಸಾಧ್ಯವೇ ನೋಡಬೇಕು
ಒಂದಿಷ್ಟು ಪಾಠ
ಕಲಿಯಬೇಕು ನಾವು ಕೂಡ

******************

8 thoughts on “

  1. ಚೆನ್ನಾಗಿದೆ ಕವಿತೆ.
    ಪ್ರಸ್ತುತ
    ಎಲ್ಲವನ್ನೂ ತೊಳೆಯುವ ನಾವು ಮನಸ್ಸನ್ನು ಗಂಜಲ
    ಮಾಡಿಕೊಳ್ಳುತ್ತಿದ್ದೇವಾ? ಅಂತ ಅನಿಸೋಕೆ ಶುರುವಾಗಿದೆ.

Leave a Reply

Back To Top