ಕಾವ್ಯ ಜುಗಲ್ ಬಂದಿ
ಖಾಲಿತನದ ಗಳಿಗೆಯ ಕವಿತೆಗಳು
ಬದುಕಿನ ಖಾಲಿತನದ ಕುರಿತಾಗಿ ಕವಯತ್ರಿ ಶ್ರೀಮತಿ ವೀಣಾ ಪಿ. ಹಾಗೂ ಮಾಧವ ‘ತನ್ನ ಗುರುತನ್ನು ಹೊರಜಗತ್ತಿಗೆ ತೋರಿಸಿಕೊಳ್ಳಲಿಚ್ಛಿಸದ ಕವಿ’ – ಇವರಿಬ್ಬರ ಕಾವ್ಯ ಜುಗಲ್ ಬಂದಿ ಸಂಗಾತಿ ಓದುಗರಿಗಾಗಿ
ಖಾಲಿತನದ ಗಳಿಗೆಯ ಕವಿತೆಗಳು
ಗಳಿಗೆ-2
ಖಾಲಿತನ
ತನುವ ಮೇಲಣ ಗಾಯದಂತಲ್ಲ
ಮನದೊಳಗಣ ಗೀರು-ಗಾಯ-ರಸಿಕೆಗಳು
ನಾ ಬಲ್ಲೆ..
ನಿನ್ನ ಕೊಲ್ಲುವ ನಿಶ್ಯಬ್ಧದಿಂದ ಕಂಗೆಟ್ಟು
ಮೌನ ಮುರಿಯಲೆಂದೇ ನಾ ನಿನ್ನ ಪ್ರಶ್ನಿಸಿದೆ..
ಒಲವೋ.. ಚೆಲುವೋ..
ಧಗೆಯೋ.. ಹಗೆಯೋ..
ಬಯಕೆಯೋ.. ಭರವಸೆಯೋ..
ನೋವೋ.. ನಿರಾಸೆಯೋ..
ಮನವೆಂದಿಗೂ ಖಾಲಿಯಿರದೆಂದಷ್ಟೇ
ನಾ ಉಲ್ಲೇಖಿಸಿದೆ..
ಸಾಂತ್ವನಕೆ ಪದ ದಕ್ಕದ
ಸಮ ದು:ಖಿಯನಿಂತು ನೀ
ಹಸಿಗಾಯ ಬಗೆದವಳೆಂದದ್ದು ಸರಿಯೇ??!!
ವೀಣಾ ಪಿ.
ಎದೆಗಿರಿವ ಮಾತಿಗಿಂತ
ಎದೆಗಿಳಿವ ಮೌನವನಪ್ಪಿರುವೆ
ಹಗೆಯಲ್ಲವಿದು; ಮನದ ಬೇಗೆ
ತಣಿಯುತಿದೆ ಮೆಲ್ಲನೆ ತಂಪಿನೆಡೆಗೆ
ನೀ ಕಳಿಸಿದ ಕವಿತೆಯ ಸಾಲಿಗೆ
ಖಾಲಿಯಾದ ಮನವೀಗ ತುಂಬುತಿದೆ
ಹಸಿಗಾಯಕೆ ನಿನ್ನ ಸಾಂತ್ವನ ಮುಲಾಮಾಗುತಿದೆ
ಮಾಧವ
******************
ಪರಿಚಯ:
ವೀಣಾ ಪಿ.
ಶ್ರೀಮತಿ ವೀಣಾ ಪಿ., ಹರಿಹರ …
ಇತಿಹಾಸ ಉಪನ್ಯಾಸಕಿ, ಸಂಶೋಧಕಿ, ಕವಯಿತ್ರಿ ಹಾಗೂ ಬರಹಗಾರ್ತಿಯಾಗಿದ್ದು, ಕನ್ನಡ ಸಾಹಿತ್ಯ ಹಾಗೂ ಐತಿಹಾಸಿಕ ಸಂಶೋಧನಾ ಕ್ಷೇತ್ರದಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿದ್ದು, ಇವರ ಚೊಚ್ಚಲ ಕೃತಿ “ಭಾವೋದ್ದೀಪ್ತಿ”ಯು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಯೋಜನೆಯಡಿ ಆಯ್ಕೆಗೊಂಡು ಪ್ರಕಟಗೊಂಡಿದೆ. ಬದುಕಿನಲ್ಲಿ ಭರವಸೆಗಳ ಬೆಂಬತ್ತುವಿಕೆ ಇವರ ಬರವಣಿಗೆಯ ಮೂಲ ಆಶಯವಾಗಿದೆ.