ಕವಿತೆ
ಅಮ್ಮಾ-ನೆನಪು!
ಹೇಮಚಂದ್ರದಾಳಗೌಡನಹಳ್ಳಿ
ಸದಾ ಕಾಡುವ
ನನ್ನೊಳಗಲಿ ಇಣುಕುವ ಕೆಡುಕನು ಸುಡುವ,,
ಹೊಸ ಆಲೋಚನೆ ಯೋಜನೆಗೆ ಪ್ರೇರಿಸುವ,,
ನನ್ನುಸಿರೊಳಗೆ ಬೆರೆತೇನೋ ಉಸುರುತಿರುವಂತೆ,
ನಿನ್ನ ನೆನಪು….
ಸದಾ ಕಾಡುವ
ನನ್ನನಾಗ ತಿದ್ದಿ ತೀಡಿ ನಿನ್ನ ಮೆಚ್ಚು ರೂಪ ನೀಡಿ
ಇಂದಿಗೂ ಕನಸಾಗಿ ಬಂದು ಕೂಗಿ ಎಬ್ಬಿಸುವ..
ಸರಿ ದಾರಿದೋರಿ ಮುನ್ನಡೆಸುವ ಹಂಬಲಿ..
ಹಸಗಟ್ಟಿದ ಹೊಟ್ಟೆಯ ಮಾಸಲು ಬಟ್ಟೆಯ
ಮುಗುಳುನಗುಮೊಗದ ನಿನ್ನಾ ನೆನಪು
ಸದಾ ಕಾಡುವ
ದುಡಿದು ನೀನು ದಣಿದು ನಮಗೆ ತಣಿಸಿ
ಹಸಿವನೇ ಹೊತ್ತು ಹುಸಿನಗುವಲದನು ಮುಚ್ಚಿ
ಖಾಲಿಮಡಕೆ ನಮಗೆ ಹಣ್ಣುಗಳನೇ ತುಂಬಿ
ಹಣ್ಣಿನಮಡಕೆ ಸ್ಥಾನ ನೀಡಿ..ತಿನ್ನದೊಂದನೂ
ಜೋಪಾನಿಸಿ ನಡೆದಾ..ನಿನ್ನ ನೆನಪು..
ಸದಾ ಕಾಡುವ
ಬೇಕು ನೀನೆಂಬ ಭಾವದ ನೋವ
ತಾಳಿಕೊಂಡಿದೆ ಜೀವ; ಮಗಳಾಗಿ ಬಂದೆಂಬ ನಚ್ಚು
ಅವಳಿಗೆ ನೀನಿಲ್ಲದ ನೋವು ಒತ್ತರಿಸಿ ಒಮ್ಮೊಮ್ಮೆ
ತಾಳಿಕೆಯ ಕಟ್ಟೆಯೊಡೆದ ಹನಿಯ ಕಣ್ಣುಣ್ಣುತದೆ..
ನೀ ಕಲಿಸಿದ ಪಾಟ ಮರೆತಿಲ್ಲ ‘ನುಂಗಬೇಕು
ನಮ್ಮೊಳಗ ನೋವ ನಾವು..
ಶಾಖವದು ಕಾಯಿ ಹಣ್ಣಾಗಲು ನಮಗೆ ನೋವು..
ನುಂಗತೇನೆ..ಕಾಯತದೆ ನನ್ನ ಅಮ್ಮಾ
ನಿನ್ನ ನೆನಪು….
***************
Nice