ಕವಿತೆ
ನನ್ನಪ್ಪನ ಕನ್ನಡಕ
ವಿಶ್ವನಾಥ ಎನ್. ನೇರಳಕಟ್ಟೆ
ನನ್ನಪ್ಪ ತೊಟ್ಟ ಕನ್ನಡಕ ಕಂಡಿದೆ ಎಲ್ಲವನ್ನೂ-
ಏಳ್ನೂರರ ಪಗಾರದಲ್ಲಿ ಪ್ರತಿ ತಿಂಗಳ ಕ್ಯಾಲೆಂಡರ್ ತಿರುವಿಹಾಕಿದ್ದನ್ನು
ತಣ್ಣೀರು ಕುಡಿದು ಹೊಟ್ಟೆ ತಂಪಾಗಿಸಿಕೊಂಡದ್ದನ್ನು
ಕಣ್ಣೀರು ಕಾಣದಂತೆ ನಗೆಯಾಡಿದ್ದನ್ನು
ಬಾಡಿಗೆ ಮನೆಯ ಮುರುಕು
ಬಾಗಿಲನ್ನು ರಾತ್ರಿ ಕಾದದ್ದನ್ನು
ವಾರಾನ್ನದ ಬೆಳಕಲ್ಲಿ ಬಾಳು
ಬೆಳಗಿಸಿಕೊಂಡದ್ದನ್ನು
ಬಿಟ್ಟಿ ಚಾಕರಿಗೆ
ಜೊತೆಗಾರನಾದುದನ್ನು
ಮನೆಯ ಫೌಂಡೇಶನ್ನಿಗೆ
ಬೆವರಹನಿ ಬಿದ್ದುದನ್ನು
ಮಕ್ಕಳನ್ನು ನೆರಳಲ್ಲಿಟ್ಟು
ಬಿಸಿಲಲ್ಲಿ ಶತಪಥ ಓಡಾಡಿದ್ದನ್ನು
ಮಕ್ಕಳಿಗೆ ಹೊಡೆದುದನ್ನು
ಹೆಂಡತಿಗೆ ಬೈದುದನ್ನು
ಹೊದಿಕೆಯೊಳಗಿನ ಕತ್ತಲಲ್ಲಿ
ಸದ್ದೇಳದಂತೆ ಅತ್ತುದನ್ನು
ಮಾಡದ ತಪ್ಪಿಗೆ
ಬೈಸಿಕೊಂಡದ್ದನ್ನು
ಮರ್ಯಾದೆಗೆ ಅಳುಕಿ
ತೆಪ್ಪಗಿದ್ದುದನ್ನು
ಬಿಗಿಗೊಂಡ ಮುಷ್ಟಿ
ಸಡಿಲವಾದದ್ದನ್ನು
*********************************
ತುಂಬಾ ಚನ್ನಾಗಿ ಬರೆದಿರುವಿರಿ
ಶಾಂತಲಾ