ಕವಿತೆಯೆಂದರೆ ಹೀಗೆ

ಕಾವ್ಯಯಾನ

ಕವಿತೆಯೆಂದರೆ ಹೀಗೆ

ವಿಶ್ವನಾಥ ಎನ್. ನೇರಳಕಟ್ಟೆ

Psychology, Psyche, Mask, Wire Rack

ಕವಿತೆಯೆಂದರೆ ಹೀಗೆ-
ಕತ್ತಿ ಅಲಗಿನಲ್ಲರಳಿದ
ಅಲರಿನ ಹಾಗೆ
ಹೇಗೇ ಹುಟ್ಟಿದ್ದರೂ ಕೂಡಾ
ಪರಿಮಳ ಬೀರುವುದನ್ನು
ನಿಲ್ಲಿಸುವುದೇ ಇಲ್ಲ

ಕವಿತೆಯೆಂದರೆ ಹೀಗೆ-
ಮೌನಗರ್ಭದೊಳಗಿಂದ ಹೊರಬಂದ
ಮಾತಿನ ಪಿಂಡದಂತೆ
ಹೊರಬರುವವರೆಗೂ ಯಮಯಾತನೆ
ಆಮೇಲಿನ ಸಂತಸಕ್ಕೆಣೆಯಿಲ್ಲ

ಕವಿತೆಯೆಂದರೆ ಹೀಗೆ-
ಇರುವೆ ಕಿವಿ ಹೊಕ್ಕ ಹಾಗೆ
ಒಂದಿಷ್ಟು ಕಚಗುಳಿ,
ಒಂದಷ್ಟು ಕಾಟ ತಪ್ಪಿದ್ದೇ ಅಲ್ಲ
ಒಳ ಇದ್ದಷ್ಟೂ ಹೊತ್ತು

ಕವಿತೆಯೆಂದರೆ ಹೀಗೆ-
ಭರಣಿಯಲ್ಲಿ ಅಮ್ಮ ತುಂಬಿಸಿಟ್ಟ
ಮಿಡಿ ಉಪ್ಪಿನಕಾಯಿಯ ಹಾಗೆ
ಹಳತಾದಷ್ಟೂ ರುಚಿ ಜಾಸ್ತಿ

+

ಕವಿತೆಯೆಂದರೆ ಹೀಗೆ-
ಕನ್ನಡಿ ಎದುರು ನಿಂತ ಹಾಗೆ
ತನ್ನನ್ನು ತಾನೇ ಕಾಣುವ ತವಕ


One thought on “ಕವಿತೆಯೆಂದರೆ ಹೀಗೆ

Leave a Reply

Back To Top