ಕವಿತೆ
ಎಲ್ಲ…ತಿರಗಾ-ಮುರಗಾ.
ಅಬ್ಳಿ,ಹೆಗಡೆ
ಇದ್ದಕ್ಕಿದ್ದಂತೆ ತಲೆಕೆಳಗಾಗಿ ನಿಂತಾಗಿನ
ಅನುಭವ ಇಂದು ಎಲ್ಲ ತಿರಗಾ-ಮುರಗಾ.
ಅಂಗಾಲಿಗೆ ಬಾನು,ನೆತ್ತಿಗೆ ಭೂಮಿ
ಎಲ್ಲ ತಿರಗಾ-ಮುರಗಾ.
ಆಲಯದಲ್ಲಿ ಬಯಲು,ಬಯಲಲ್ಲಿ ಆಲಯ
ಭೃಮೆ ವಾಸ್ತವಗಳ ನಡುವಿನ ಸೆಣಸಾಟ
ಹೋರಾಟವಿಂದು,
ಎಲ್ಲ…..ತಿರಗಾ-ಮುರಗಾ.
ನೀರಿದ್ದೆಡೆ ನೆಲ,ನೆಲವಿದ್ದೆಡೆ ನೀರು
ಬಾಗಿಲಿರುವೆಡೆಯಲ್ಲಿ ಗಟ್ಟಿ ಗೋಡೆ
ಗೋಡೆಯಿರುವೆಡೆ ತೆರೆದ ಬಾಗಿಲು,
ಎಲ್ಲ…..ತಿರಗಾ-ಮುರಗಾ.
ಕಣ್ಣ ತಣಿಸುವ ಹಸಿರ ತಂಪು ಬಸಿರ
ಉಸಿರಲ್ಲಿ ಸುಡು,ಸುಡು ಬೆಂಕಿ,
ಶಾಂತಿಯಾಗರ ಹ್ರದಯ ಸಾಗರದ
ಒಳಗೆ ಹೆಡೆಯೆತ್ತಿ ಭರ‍್ಗರೆವ
ಅಶಾಂತಿಯ ನಾಗರ,
ಎಲ್ಲ…..ತಿರಗಾ-ಮುರಗಾ.
ನಾನಂದು ‘ಕೊಂಡಿ’ದ್ದು,ಕೊಳ್ಳದ್ದು
ಸಾಧಿಸಿದ್ದು,ಸಾಧಿಸದ್ದು ,
ಆಚಾರ,ವಿಚಾರ,
ಎಲ್ಲ……..ತಿರಗಾ-ಮುರಗಾ.
ದೇವರೆಂದು ಕೊಂಡಲ್ಲಿ ದೆವ್ವ,
ದೆವ್ವವೆಂದು ಕೊಂಡಲ್ಲಿ ದೇವರು,
ಎಲ್ಲ….ತಿರಗಾ-ಮುರಗಾ.
ನನ್ನೊಳಗೆ ಇನ್ಯಾರೋ….?
ಇನ್ಯಾರದ್ದೋ ಒಳಗೆ ನಾನೋ….?
ಪರಕಾಯ ಪ್ರವೇಶ …ಗೊತ್ತಿಲ್ಲ,ಒಟ್ಟಾರೆ
ಎಲ್ಲ……ತಿರಗಾ-ಮುರಗಾ.
ನನ್ನ ನೋವಿಗೆ ಯಾರದ್ದೋ ನಗು,
ನಾ..ನಕ್ಕಾಗೆಲ್ಲಾ ಯಾರಿಗೋ ನೋವು,
ಕ಼ಣಕ್ಕೊಂದು ಆಯಾಮ
ಎಲ್ಲ….ತಿರಗಾ-ಮುರಗಾ.
ಬಿತ್ತಿದ್ದು ಮಾವು,ಬೆಳೆದದ್ದು ಬೇವು,
ಕಂಗಾಲು ರೈತ ನಾ…….
ಎಲ್ಲ…..ತಿರಗಾ-ಮುರಗಾ.
*****************