ಗಜ಼ಲ್
ಅಮರೇಶ ಎಂಕೆ
ಕಣ್ಣೀರು ಕಡಲಾಗಿ ಹರಿದು ಹೋದಾಗ ಈಜಿ ದಡ ಸೇರಿದ್ದೇವೆ
ಬದುಕು ನೊಂದು-ಬೆಂದು ಕತ್ತಲಾದಾಗ ಚಿಮ್ಮಣಿ ಹಿಡಿದಿದ್ದೇವೆ
ಅಂದುಕೊಂಡಂತೆ ಎಲ್ಲಾ ಆಗುವುದಿಲ್ಲವಿದು, ಕಂಡುಕೊಂಡ ಸತ್ಯ
ಮುನ್ನಡೆಯಲು ಕಾಲು ಬಾರದಾದಾಗ ಊರುಗೋಲಿಗೆ ಕೈ ನೀಡಿದ್ದೇವೆ
ಮನಸ್ಸಿದ್ದರೆ ಹರಿದು ಹೋದ ಬಾಳನ್ನು ಮತ್ತೆ ಹೊಲೆದುಕೊಳ್ಳಬಹುದು
ಕೆಟ್ಟು ನಿಂತ ಯಂತ್ರವೂ ದಡ ಸೇರಿಸಬಹುದೆಂದು ನಂಬಿಕೆ ಇಟ್ಟಿದ್ದೇವೆ
ಸಿಡಿದ ಸಿಡಿಲು ಎದೆ ಮುಂದೆ ಹರಿದು ಹೋದರೂ ಭಯವಾಗಲಿಲ್ಲ
ಲೆಕ್ಕವಿಲ್ಲದ ಕೋಲ್ಮಿಂಚಿನ ಹೊಡೆತಗಳನ್ನು ಅನುಕ್ಷಣವೂ ಎದುರಿಸಿದ್ದೇವೆ
ವಿಧಿಯ ಚೆಲ್ಲಾಟಕ್ಕೆ ಸೆಡ್ಡು ಹೊಡೆದು ಮುನ್ನಡೆದಿಹೆವು ‘ಅಮರ’
ಸಂಕಷ್ಟ ದೂರಾಗಿಸಲು ಕಾಯಕವನ್ನೇ ದೇವರೆಂದು ನಂಬಿದ್ದೇವೆ
***************