ರೈತ ಗಝಲ್
ಗೈರ್ ಮುರಧ್ಹಫ್ ಗಜ಼ಲ್
ಘಮ್ಮೆನ್ನುವ ನೆಲದಲ್ಲಿ ಹೊನ್ನ ಬಿತ್ತಿದವರ ಮನೆಯ ಬಳ್ಳಗಳು ಬರಿದಾಗಿವೆ
ನಮ್ಮದೆನುವ ದೇಹಕ್ಕೆ ಅನ್ನ ಉಣಿಸಿದವರ ಕಣಜದ ಕಾಳುಗಳು ಖಾಲಿಯಾಗಿವೆ
ಕಣ್ಣು ಮುಚ್ಚಾಲೆಯಾಡುವ ಮೋಜಿನಲಿ ಮೋಡಗಳುಮಡುಗಟ್ಟಿವೆ
ಬರಗಾಲದ ಬರಸಿಡಿಲಿಗೆ ಮುರಿದಮನಗಳು ಕಂಬನಿ ಮಳೆ ಸುರಿಸುತಿವೆ
ಅಂಬಲಿಗೂ ಗತಿಯಿಲ್ಲದೆ ಅನ್ನದಾತನ ಮನೆಯಲ್ಲಿ ಹಸಿವು ಧಡಭಡಿಸಿದೆ
ಸ್ವಾಭಿಮಾನದ ಪಟಗೆಗಳು ಉಳ್ಳವರಲ್ಲಿ ಜೀತದಾಳಾಗಿ ದುಡಿಯುತಿವೆ
ಭರವಸೆಯ ವಾರಸುದಾರರು ನಗರದತ್ತ ಮುಖಮಾಡಿಹರು ಕನಸುಗಳ ಬೆಂಬತ್ತಿ
ನಿರಾಸೆಯ ಕಾರ್ಮೋಡವ ಒಲಿಸುವ ಸಾಹಸಗಳು ಉಸುಕಿನಲಿ ಉಚ್ಚೆ ಹೊಯ್ಯುತಿವೆ
ಬಯಸಿದ ಬೆಲೆಗಳು ಗಗನ ಕುಸುಮಗಳಾಗಿ ಹರಿಯುವ ಬೆವರ ಶ್ರಮ ಕಸಿಯುತಿವೆ
ಬೆಳೆಯುತಿಹ ಸಾಲಭಾರಕೆ ಭಾರತದ ಬೆನ್ನೆಲುಬುಗಳು ಬಾಗಿ ನೆಲ ಅಳೆಯುತಿವೆ
ಬರಲಾರದ ವರ್ಷಧಾರೆಗೆ ಉಗಿದುಗಿದು ಹಿಡಿಶಾಪ ಹಾಕಿಹಳು ಇಳೆ ಮೋಸವೆಂದು
ಮದುವೆಯಾಗದ ಮಗಳ ಹರೆಯದ ನಿಟ್ಟುಸಿರುಗಳು ಎದೆಯನು ಬಗೆಯುತಿವೆ
ಕೊಟ್ಟಿಗೆಯ ದನಗಳು ಸಾಲು ಸಾಲಾಗಿ ಕಸಾಯಿಖಾನೆ ಸೇರಿದವು ಮೇವಿಲ್ಲದೆ
ಬಾಳಿನಲಿ ಬೆಳಕ ಹರಡಿದ ನಂಬಿಕೆಯ ಶಮೆಗಳು ಎಣ್ಣೆಯಿರದೆ ಆರುತಿವೆ
*************************
ಶಮಾ. ಜಮಾದಾರ.
ಬಹೂತ್ ಖೂಬ್
penned it nicely
True picture of farmers life.