ಕವಿತೆ
ಕಲ್ಪನೆಗೂ ಜೀವ ಬರುವಂತಿದ್ದರೆ
ಸ್ಮಿತಾ ಭಟ್
ಎಷ್ಟೆಲ್ಲಾ ಕಲ್ಪಿಸಿ ಕೊಂಡಿದ್ದೆ
ಭಾವ ಜೀವ ಪಡೆದಾಗಿನಿಂದಲೂ
ರಾಶಿ ರಾಶಿ ಹೋಮ್ ವರ್ಕ್
ಕ್ಷಣದಲ್ಲಿ ಮುಗಿದಿದ್ದರೆ!
ಪರೀಕ್ಷೆಯಲ್ಲಿ ಓದದೆಯೂ ಉತ್ತರಗಳು ಅಚ್ಚಾಗಿದ್ದರೆ!
ಜಾತ್ರೆಯ ರಂಗು ರಂಗಿನ ಆಟಿಕೆಗಳೆಲ್ಲ
ಅರೆಕ್ಷಣದಲ್ಲಿ ಮಡಿಲಿಗೆ ಜಿಗಿದಿದ್ದರೆ!
ಹಕ್ಕಿಯಂತೆ ರೆಕ್ಕೆ ಮೂಡಿ ಬಾನ ಸೇರಿದ್ದರೆ.
ಮುಗಿಯದ ಕನವರಿಕೆಗಳ ನಡುವೆ
ಜೀವ ಬಾರದ ಕಲ್ಪಿನೆಗಳಿಗೆ ಕಡಿವಾಣ ಹಾಕಲಾಗದೆ ಮುನಿಸಿಕೊಂಡ ರಾತ್ರಿಗಳು
ಆಗೆಲ್ಲಾ ಒದ್ದೆಯಾಗುತ್ತಿದ್ದದ್ದು ಅಮ್ಮನ ಮಡಿಲು.
ಸೆರಗಿನಲಿ ಕಟ್ಟಿಕೊಂಡ ಪಾತರಗಿತ್ತಿಯ
ಪಕ್ಕನೇ ಹಾರಿಬಿಟ್ಟು
ಜೀವ ಬರಿಸುತ್ತಿದ್ದ ಆ ಸೋಜಿಗ
ಕಪ್ಪು ಬಿಳುಪು ಕನಸುಗಳಿಗೂ ರೇಶಿಮಿಯ ನುಣುಪು ನೀಡುವ ಅಮ್ಮನ ಬೆರಳು,
ಸಕಲ ಕಲ್ಪನೆಗಳು ಜೀವ ತಳೆದಿದ್ದಕ್ಕೆ ಪುರಾವೆ ಬೇಕಿರಲಿಲ್ಲ.
ಈಗಲೂ ಅನ್ನಿಸುತ್ತದೆ ಕಲ್ಪನೆಗಳಿಗೆ ಜೀವ ಬರುವಂತಿದ್ದರೆ
ಅಲ್ಲೆಲ್ಲೋ ಒಬ್ಬರಿಗೊಬ್ಬರು ಧೇನಿಸುತ್ತ
ಕೂರ ಬೇಕಿರಲಿಲ್ಲ
ಕನಸುಗಳ ಬೆನ್ನತ್ತಿ ಕೊರಗಬೇಕಿರಲಿಲ್ಲ
ಜೊತೆಯಾಗಲೇ ಬೇಕೆನ್ನುವ ಧಾವಂತದಲಿ
ದಾರಿಕಾಯ ಬೇಕಿರಲಿಲ್ಲ.
ಜಗತ್ತಿನ ಯಾವ ಒಲವೂ ವಿಯೋಗದಲಿ
ನರಳುತ್ತಿರಲಿಲ್ಲ.
ಆಶಿಸುತ್ತೇನೆ ಈಗಲೂ,,
ಬೆಳಕಿನ ಸೆರಗಿನಿಂದ ಪಾತರಗಿತ್ತಿಗಳು ಹಾರಾಡಲೆಂದು.
ಅಂಟಿಕೊಳ್ಳಲಿ ನುಣುಪೊಂದು
ಜೀವತಳೆಯಲಿ ಕಲ್ಪನೆಯೊಂದು ಎಂದು.
ಆದರೀಗ ಪುರಾವೆಗಳೇನಿಲ್ಲ
ಕಲ್ಪನೆಗಳು ಜೀವ ತಳೆದಿದ್ದಕ್ಕೆ.
******************************