ಕವಿತೆ
ಜವಾಬು ಬರೆಯಬೇಕಿದೆ
ಶೀಲಾ ಭಂಡಾರ್ಕರ್
ಅಪರೂಪಕ್ಕಿಂದು ಅವನ ಪತ್ರ ಬಂದಿದೆ
ಅದಕ್ಕೀಗ ಜವಾಬು ಬರೆಯಬೇಕಿದೆ.
ಅವ ಕೇಳುತಿದ್ದಾನೆ..
ನಿನ್ನ ಉದ್ದ ಕೂದಲನ್ನು ಒಣಗಿಸಲು
ತಾರಸಿ ಮೇಲೆ ಬರುವ ಅಭ್ಯಾಸ
ಇನ್ನೂ ಇದೆಯೇ?
ಬಾಯಿಗೆ ಕೈ ಅಡ್ಡವಿರಿಸಿ ನಗುವ
ಪರಿ ಏನಾದರೂ ಬದಲಾಗಿದೆಯೇ?
ಅವನಿಗೆ ಹೇಳಬೇಕಿದೆ..
ಉದ್ದ ಕೂದಲೀಗ
ಹೆಗಲ ಬಳಿಯೇ ತುಂಡಾಗಿದೆ.
ಕೂದಲು ಒಣಗಿಸುವ ತಾರಸಿ
ಈಗ ಬದಲಾಗಿದೆ.
ನಗಿಸುವರಿಲ್ಲದೆ
ನಗುವುದೀಗ ಅಪರೂಪವಾಗಿದೆ.
ಮುಂದೆ ಬರೆದಿದ್ದಾನೆ..
ನಾ ಬರೆದ ಮೊದಲ ಪತ್ರವಿನ್ನೂ
ಜೋಪಾನವಾಗಿಟ್ಟಿದ್ದಿಯಾ?
ಅದರಲ್ಲಿ ಬರೆದ ನನ್ನ ಹೆಸರನ್ನು
ಈಗಲೂ ಮತ್ತೆ ಮತ್ತೆ ಓದುವಿಯಾ?
ಹೇಳಿದರೆ ಏನಂದುಕೊಳ್ಳುವಿಯೋ!
ಪತ್ರವನ್ನೆಂದೋ ಹರಿದು ಎಸೆದಾಗಿದೆ.
ಮತ್ತೆ ಮತ್ತೆ ಓದುತಿದ್ದ
ಪತ್ರದೊಳಗಿನ ನಿನ್ನ ಹೆಸರು
ನನ್ನ ಮನದೊಳಗೀಗ ಭದ್ರವಾಗಿದೆ.
ಕೀಟಲೆ ಮಾಡುತಿದ್ದಾನೆ ನೋಡಿ..
ಮಾತು ಮಾತಿಗೂ ಅಳುತಿದ್ದವಳು
ಈಗಲೂ ಹಾಗೆಯೇ ಅಳುವುದಿದೆಯೇ?
ಅತ್ತು ಅತ್ತು ರಾಕ್ಷಸಿಯಂತೆ
ಕಾಣುತಿದ್ದೆ. ಅದಿನ್ನೂ ಜಾರಿಯಲ್ಲಿದೆಯೇ?
ಅವನಿಗೊಂದು ಬಲವಾಗಿ
ಗುದ್ದಬೇಕೆನಿಸುತ್ತಿದೆ..
ಅಳುವುದೆಲ್ಲ ಆಗಲೇ
ಮುಗಿಸಿಯಾಗಿದೆ ಬಾಕಿಯಿಲ್ಲದೆ.
ಅಳುವೀಗ ತನ್ನಿಂತಾನೇ
ನಿಂತು ಹೋಗಿದೆ. ರಮಿಸುವವರಿಲ್ಲದೆ.
********************